
ಹೊರ್ಮುಜ್ ಜಲಸಂಧಿ
ಟೆಹರಾನ್: ಹೊರ್ಮುಜ್ ಜಲಸಂಧಿಯಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ ಎಂದು ಇರಾನ್‌ನ ರೆವೆಲ್ಯೂಷನರಿ ಗಾರ್ಡ್ಸ್ ಹೇಳಿಕೊಂಡಿದೆ.
ಈ ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ರಕ್ಷಣೆ ಒದಗಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೂಲಕವೇ ಕಚ್ಚಾ ತೈಲ ಸಾಗಣೆಯಾಗುತ್ತವೆ. ಇದೀಗ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿಯ ತೈಲ ಮಾರ್ಗದಲ್ಲಿ ಬಿಕ್ಕಟ್ಟು ಎದುರಾಗಿದೆ.
'ಪ್ರಸ್ತುತ ಹೊರ್ಮುಜ್ ಜಲಸಂಧಿಯು ಇಸ್ಲಾಮಿಕ್ ಗಣರಾಜ್ಯದ ನೌಕಾಪಡೆಯ ಸಂಪೂರ್ಣ ನಿಯಂತ್ರಣದಲ್ಲಿದ್ದು, ನಿಯಮ ಉಲ್ಲಂಘಿಸಿ ಯಾವುದೇ ಹಡಗುಗಳು ಹಾದು ಹೋದ್ದಲ್ಲಿ ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆಸಿ ನಾಶಪಡಿಸಲಾಗುವುದು' ಎಂದು ಇರಾನ್‌ನ ರೆವೆಲ್ಯೂಷನರಿ ಗಾರ್ಡ್ಸ್ ಎಚ್ಚರಿಸಿದೆ.
ಮತ್ತೊಂದೆಡೆ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಸಾಗಣೆಗೆ ತೀವ್ರ ಅಡಚಣೆ ಎದುರಾಗಿದೆ. ಇದರಿಂದಾಗಿ ಇಂಧನ ಬೆಲೆಗಳು ಗಗನಕ್ಕೇರುತ್ತಿವೆ. ಏತನ್ಮಧ್ಯೆ ಇರಾನ್ ಬೆದರಿಕೆಯ ನಡುವೆಯೂ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳನ್ನು ಸಾಗಿಸಲು ಹಾಗೂ ರಕ್ಷಣೆಯನ್ನು ಒದಗಿಸಲು ಅಮೆರಿಕ ಸಿದ್ಧವಾಗಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ತೈಲ ಪೂರೈಕೆಗೆ ತೊಂದರೆ ಎದುರಾಗಿದೆ. ವಿಶ್ವದ ಕಚ್ಚಾ ತೈಲ ಹಾಗೂ ಅನಿಲ ರಫ್ತಿನಲ್ಲಿ ಶೇಕಡ 20ರಷ್ಟು ಈ ಜಲಸಂಧಿಯ ಮೂಲಕ ಆಗುತ್ತದೆ.
ವಿಶೇಷ ನಿಯಂತ್ರಣ ಕೊಠಡಿ ಆರಂಭ:
ಪಶ್ಚಿಮ ಏಷ್ಯಾ, ಕೊಲ್ಲಿ ರಾಷ್ಟ್ರಗಳಲ್ಲಿ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ನೆರವಿಗಾಗಿ ವಿದೇಶಾಂಗ ಸಚಿವಾಲಯ ವಿಶೇಷ ನಿಯಂತ್ರಣ ಕೊಠಡಿಯನ್ನು ತೆರೆದುಕೊಂಡಿದೆ. ಈ ಸಂಬಂಧ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹಂಚಿಕೊಂಡಿದ್ದಾರೆ.
ಕೊಲ್ಲಿ ರಾಷ್ಟ್ರಗಳಲ್ಲಿ ಮುಂದುವರಿದ ಇರಾನ್ ದಾಳಿ
ಕೊಲ್ಲಿ ರಾಷ್ಟ್ರಗಳಲ್ಲಿ ಇರಾನ್ ದಾಳಿ ಮುಂದುವರಿದಿದೆ. ದುಬೈಯಲ್ಲಿನ ಅಮೆರಿಕ ರಾಯಭಾರ ಕಚೇರಿ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ನಂದಿಸಲಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.