ADVERTISEMENT

Iran-Israel War | ಹೊರ್ಮುಜ್‌ ಜಲಸಂಧಿಗೆ ಅಡ್ಡಿ: ಮಾರುಕಟ್ಟೆಗಳ ಮೇಲೆ ಪರಿಣಾಮ?

ಏಜೆನ್ಸೀಸ್
Published 28 ಫೆಬ್ರುವರಿ 2026, 21:15 IST
Last Updated 28 ಫೆಬ್ರುವರಿ 2026, 21:15 IST
ಹೊರ್ಮುಜ್ ಜಲಸಂಧಿ ಮೂಲಕ ಅಮೆರಿಕದ ಯುದ್ದವಿಮಾನ ವಾಹಕ ನೌಕೆ ಸಾಗಿದ್ದ ಸಂಗ್ರಹ ಚಿತ್ರ
ಹೊರ್ಮುಜ್ ಜಲಸಂಧಿ ಮೂಲಕ ಅಮೆರಿಕದ ಯುದ್ದವಿಮಾನ ವಾಹಕ ನೌಕೆ ಸಾಗಿದ್ದ ಸಂಗ್ರಹ ಚಿತ್ರ   

ದುಬೈ : ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ವಿರುದ್ಧ ಆರಂಭಿಸಿರುವ ಯುದ್ಧವು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ವಾಣಿಜ್ಯ ಉದ್ದೇಶದ ಸರಕು ಸಾಗಣೆಗೆ ಹೊರ್ಮುಜ್‌ ಜಲಸಂಧಿಯು ಸುರಕ್ಷಿತವಲ್ಲ ಎಂಬ ಸನ್ನಿವೇಶವನ್ನು ಇರಾನ್‌ ಸೃಷ್ಟಿಸಿದರೆ ಮಾರುಕಟ್ಟೆಗಳ ಮೇಲೆ ಅಗಾಧ ಪರಿಣಾಮ ಉಂಟಾಗುತ್ತದೆ ಎನ್ನಲಾಗಿದೆ.

ಕಚ್ಚಾ ತೈಲದ ವಹಿವಾಟಿನಲ್ಲಿ ತೊಡಗಿರುವ ಕೆಲವು ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಹಾಗೂ ವರ್ತಕರು ಹೊರ್ಮುಜ್‌ ಕೊಲ್ಲಿಯ ಮೂಲಕ ಕಚ್ಚಾ ತೈಲ, ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸಾಗಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಈ ಜಲಸಂಧಿಯ ಮೂಲಕ 2025ರಲ್ಲಿ ಪ್ರತಿದಿನ 1.4 ಕೋಟಿ ಬ್ಯಾರೆಲ್‌ ಕಚ್ಚಾ ತೈಲ ಸಾಗಣೆ ಆಗಿತ್ತು. ಇದು  ಜಾಗತಿಕವಾಗಿ ಸಮುದ್ರ ಮಾರ್ಗವಾಗಿ ಸಾಗಣೆ ಆಗುವ ಒಟ್ಟು ಕಚ್ಚಾ ತೈಲದ ಅಂದಾಜು ಶೇ 33ರಷ್ಟು.

ಸಂಘರ್ಷ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಈ ಜಲಸಂಧಿಯ ಮೂಲಕ ಸರಕು ಸಾಗಣೆಗೆ ಅಡ್ಡಿ ಉಂಟುಮಾಡುವುದಾಗಿ ಇರಾನ್‌ ಈ ಹಿಂದೆ ಎಚ್ಚರಿಕೆ ನೀಡಿದ ನಿದರ್ಶನಗಳು ಇವೆ. 

ಹೊರ್ಮುಜ್‌ ಜಲಸಂಧಿಯು ಕೊಲ್ಲಿ ರಾಷ್ಟ್ರಗಳನ್ನು ಹಿಂದೂ ಮಹಾಸಾಗರದ ಜೊತೆ ಸಂಪರ್ಕಿಸುತ್ತದೆ. 50 ಕಿ.ಮೀ. ಅಗಲವಾಗಿರುವ, 200 ಅಡಿಯಷ್ಟು ಆಳದ ಇದನ್ನು ಮಿಲಿಟರಿ ಬಲ ಬಳಸಿ ಸರಕು ಸಾಗಣೆ ಸಾಧ್ಯವಾಗದಂತೆ ಮಾಡಿಬಿಡಬಹುದು.

ಅಮೆರಿಕದ ‘ಎನರ್ಜಿ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್‌’ (ಇಐಎ) ಸಂಸ್ಥೆಯ ಪ್ರಕಾರ, ಜಾಗತಿಕ ಮಟ್ಟದಲ್ಲಿ ಎಲ್‌ಎನ್‌ಜಿಯ ಶೇ 20ರಷ್ಟು ವಹಿವಾಟು ಈ ಜಲಸಂಧಿಯ ಮೂಲಕ ಆಗುತ್ತದೆ.

ಈ ಜಲಸಂಧಿಯನ್ನು ಬಳಸದೆಯೇ ಕಚ್ಚಾ ತೈಲ ರವಾನೆ ಮಾಡುವ ಮೂಲಸೌಕರ್ಯವು ಸೌದಿ ಅರೇಬಿಯಾ ಮತ್ತು ಯುಎಇ ಬಳಿ ಇದೆ. ಆದರೆ ಹೀಗೆ ಮಾಡುವ ಸಾಮರ್ಥ್ಯ ಬಹಳ ಸೀಮಿತವಾಗಿದೆ. ಅವು ಜಲಸಂಧಿಯನ್ನು ಬಳಸದೆ ದಿನವೊಂದಕ್ಕೆ 26 ಲಕ್ಷ ಬ್ಯಾರೆಲ್‌ ಕಚ್ಚಾ ತೈಲ ಮಾತ್ರ ರವಾನಿಸಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.