ADVERTISEMENT

ತಾಲಿಬಾನ್‌: ಮಹಿಳೆಯ ಶಿಕ್ಷಣಕ್ಕೆ ಅವಕಾಶ; ಹುಡುಗ–ಹುಡುಗಿ ಒಟ್ಟಿಗೆ ಕಲಿಯುವಂತಿಲ್ಲ!

ಏಜೆನ್ಸೀಸ್
Published 29 ಆಗಸ್ಟ್ 2021, 16:33 IST
Last Updated 29 ಆಗಸ್ಟ್ 2021, 16:33 IST
ಅಫ್ಗಾನಿಸ್ತಾನದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು –ಸಾಂದರ್ಭಿಕ ಚಿತ್ರ
ಅಫ್ಗಾನಿಸ್ತಾನದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು –ಸಾಂದರ್ಭಿಕ ಚಿತ್ರ   

ಕಾಬೂಲ್‌: ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರು ಅಧ್ಯಯನ ನಡೆಸಲು ತಾಲಿಬಾನ್‌ ಆಡಳಿತ ಅವಕಾಶ ನೀಡಿದೆ. ಆದರೆ, ಹೊಸ ನಿಯಮಗಳ ಅಡಿಯಲ್ಲಿ ಯುವಕ ಮತ್ತು ಯುವತಿಯರು ಒಟ್ಟಿಗೆ ಕಲಿಕೆಯಲ್ಲಿ ಭಾಗಿಯಾಗಲು ಅವಕಾಶ ಇರುವುದಿಲ್ಲ.

ತಾಲಿಬಾನ್ ಆಡಳಿತವು 90ರ ದಶಕದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಆಗಸ್ಟ್‌ 15ರಂದು ಮತ್ತೆ ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಭಿನ್ನ ಆಡಳಿತ ನೀಡುವ ಭರವಸೆ ನೀಡಿದ್ದರು.

'ಶರಿಯಾ ಕಾನೂನಿನ ಅನ್ವಯ ಅಫ್ಗಾನಿಸ್ತಾನದ ಜನತೆ ಉನ್ನತ ಶಿಕ್ಷಣ ಪಡೆಯುವುದನ್ನು ಮುಂದುವರಿಸಬಹುದಾಗಿದೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕಲಿಯುವ ವಾತಾವರಣ ಸೃಷ್ಟಿಸಲಾಗುತ್ತದೆ' ಎಂದು ತಾಲಿಬಾನ್‌ನ ಹಂಗಾಮಿ ಉನ್ನತ ಶಿಕ್ಷಣ ಸಚಿವ ಅಬ್ದುಲ್‌ ಬಖಿ ಹಖಾನಿ ಭಾನುವಾರ ಸಭೆಯಲ್ಲಿ ತಿಳಿಸಿದ್ದಾರೆ.

ADVERTISEMENT

'ಇಸ್ಲಾಮಿಕ್‌, ರಾಷ್ಟ್ರೀಯತೆ ಮತ್ತು ಐತಿಹಾಸಿಕ ಮೌಲ್ಯಗಳ ಆಧಾರದ ಮೇಲೆ ಇಸ್ಲಾಮಿಕ್‌ ಶೈಕ್ಷಣಿಕ ವ್ಯವಸ್ಥೆ ಸೃಷ್ಟಿಸುವುದು ಹಾಗೂ ಮತ್ತೊಂದು ಕಡೆ ಇತರೆ ರಾಷ್ಟ್ರಗಳೊಂದಿಗೂ ಸ್ಪರ್ಧಿಸುವುದು ತಾಲಿಬಾನ್ ನಿರೀಕ್ಷೆಯಾಗಿದೆ' ಎಂದಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಟ್ಟದಿಂದಲೂ ಹುಡುಗ–ಹುಡುಗಿ ಪ್ರತ್ಯೇಕವಾಗಿ ಕಲಿಯುವ ವ್ಯವಸ್ಥೆ ಅಫ್ಗಾನಿಸ್ತಾನದಲ್ಲಿದೆ.

ತಾಲಿಬಾನ್‌ ಉನ್ನತ ಶಿಕ್ಷಣ ಸಚಿವಾಲಯವು ಕೇವಲ ಪುರುಷ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಾತ್ರ ಸಂಪರ್ಕಿಸಿದೆ. ಪ್ರಮುಖ ನಿರ್ಧಾರಗಳಲ್ಲಿ ಮಹಿಳೆಯರನ್ನು ದೂರ ಇಡಲಾಗಿದೆ ಎಂದು ಬೋಧಕರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.