ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತಾಗಿ ಭಾರತದ ಜೊತೆಗಿನ ಮಾತುಕತೆಗಳಲ್ಲಿ ದೊಡ್ಡಮಟ್ಟದ ಪ್ರಗತಿ ಆಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದ ಜೊತೆ ಅಮೆರಿಕ ಒಪ್ಪಂದವೊಂದನ್ನು ಮಾಡಿಕೊಳ್ಳಲಿದೆ ಎಂದು ತಾವು ಭಾವಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
‘ನಿಮಗೆ ತಿಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ವಾರಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರು. ಒಪ್ಪಂದ ಮಾಡಿಕೊಳ್ಳಲು ಅವರು ಬಯಸಿದ್ದಾರೆ. ಏನಾಗುತ್ತದೆಯೋ ನೋಡೋಣ’ ಎಂದು ಟ್ರಂಪ್ ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ.
ಇದಕ್ಕೂ ಮೊದಲು ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಅವರು, ‘ಭಾರತದ ಜೊತೆಗಿನ ವಾಣಿಜ್ಯ ಒಪ್ಪಂದವು ಬಹಳ ಸನಿಹಕ್ಕೆ ಬಂದಿದೆ’ ಎಂದು ಶ್ವೇತಭವನದಲ್ಲಿ ತಿಳಿಸಿದ್ದರು. ಒಪ್ಪಂದ ಮಾಡಿಕೊಳ್ಳುವ ವಿಚಾರದಲ್ಲಿ ಏಷ್ಯಾದ ವಾಣಿಜ್ಯ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳು ಬಹಳ ಮುಂದೆ ಬಂದಿದ್ದಾರೆ ಎಂದು ಬೆಸೆಂಟ್ ಹೇಳಿದ್ದಾರೆ.
ವಾಣಿಜ್ಯ ಒಪ್ಪಂದದ ಕಾಲಮಿತಿ ಕುರಿತ ಪ್ರಶ್ನೆಗೆ ಬೆಸೆಂಟ್ ಅವರು, ‘ಭಾರತದ ಜೊತೆ ಒಪ್ಪಂದವು ಬಹಳ ಸನ್ನಿಹಿತವಾಗಿದೆ... ಭಾರತದ ಜೊತೆ ಮಾತುಕತೆ ನಡೆಸುವುದು ಬೇರೆ ದೇಶಗಳ ಜೊತೆ ಮಾತುಕತೆ ನಡೆಸುವುದಕ್ಕಿಂತ ಸುಲಭ. ಏಕೆಂದರೆ, ಅವರು ಬಹಳ ಹೆಚ್ಚು ಸುಂಕ ವಿಧಿಸುತ್ತಾರೆ’ ಎಂದು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.