ADVERTISEMENT

ಟ್ರಂಪ್ ಹೊಸ ವಲಸೆ ನೀತಿ: ಗಡಿ ಜನರಲ್ಲಿ ಭಯ, ಆತಂಕ, ಅಭದ್ರತೆ

ಏಜೆನ್ಸೀಸ್
Published 24 ಜನವರಿ 2025, 2:53 IST
Last Updated 24 ಜನವರಿ 2025, 2:53 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ಎಲ್‌ಪಾಸೊ (ಅಮೆರಿಕ): ವಲಸಿಗರ ಬಗ್ಗೆ ಡೊನಾಲ್ಡ್ ಟ್ರಂಪ್ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಅಧಿಕಾರಕ್ಕೆ ಬಂದ ದಿನವೇ ವಲಸೆ ನೀತಿಯನ್ನು ಟ್ರಂಪ್ ಬಿಗಿಗೊಳಿಸಿದ್ದರು.

ADVERTISEMENT

ದೇಶದ ದಕ್ಷಿಣ ಗಡಿಯಲ್ಲಿ ‘ರಾಷ್ಟ್ರೀಯ ತುರ್ತು’ ಇದೆ ಎಂದು ವಲಸೆ ನೀತಿಗೆ ಸಹಿ ಹಾಕುವ ವೇಳೆ ಟ್ರಂಪ್ ಹೇಳಿದ್ದರು. ಅಲ್ಲದೆ ಆ ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜಿಸುವುದಾಗಿ ಘೋಷಣೆ ಮಾಡಿದ್ದರಲ್ಲದೆ, ಕ್ರಿಮಿನಲ್ ವಲಸಿಗರನ್ನು ಗಡಿಪಾರು ಮಾಡುವುದಾಗಿ ಹೇಳಿದ್ದರು. ಇದರಿಂದಾಗಿ ಅಲ್ಲಿ ವಾಸಿಸುವ ಹಲವು ಸಮುದಾಯಗಳು ಭೀತಿ ಎದುರಿಸುತ್ತಿವೆ.

‘ನಾನು ನಿಯಮಕ್ಕೆ ಅನುಗುಣವಾಗಿ ಅಮೆರಿಕಕ್ಕೆ ಬಂದಿದ್ದರೂ, ಪರಿಶೀಲನೆ ನೆಪದಲ್ಲಿ ಅಧಿಕಾರಿಗಳು ನಡೆಸುವ ದಾಳಿಯಿಂದ ಭಯಭೀತಳಾಗಿದ್ದೇನೆ’ ಎಂದು ಟೆಕ್ಸಾಸ್‌ ಗಡಿಯಲ್ಲಿ ವಾಸಿಸುತ್ತಿರುವ ವೆನಿಜುವೆಲ ಮೂಲದ ಜೋಸ್ನೆಕ್ಸಿ ಮಾರ್ಟಿನೆಜ್ ಆತಂಕ ವ್ಯಕ್ತಪಡಿಸಿದ್ದಾರೆ.

ವಲಸಿಗರಿಗೆ ಅನುಕೂಲವಾಗಿದ್ದ ಸಿಬಿಪಿ ಆ್ಯಪ್ ಮುಲಕ ನೋಂದಾಯಿಸಿ ಅಮೆರಿಕಕ್ಕೆ ಪ್ರವೇಶಿಸಿದ್ದ 28 ವರ್ಷದ ಮಾರ್ಟಿನೆಜ್‌, ಎಲ್‌ಪಾಸೊ ನಗರದಲ್ಲಿ ತನ್ನ ಐದು ವರ್ಷದ ಮಗುವಿನೊಂದಿಗೆ ವಾಸಿಸುತ್ತಿದ್ದಾರೆ.

ತನ್ನ ಆಶ್ರಯ ಪ್ರಕರಣವನ್ನು ನ್ಯಾಯಾಧೀಶರು ವಿಚಾರಣೆ ಮಾಡುವವರೆಗೆ ಅಮೆರಿಕದಲ್ಲಿ ಉಳಿಯಲು ಅರ್ಹರಾಗಿದ್ದರೂ, ಟ್ರಂಪ್ ಕ್ರಮಗಳು ಭಯಭೀತಿಗೊಳಿಸಿವೆ ಎಂದು ಮಾರ್ಟಿನೆಜ್ ಅಲವತ್ತುಕೊಂಡಿದ್ದಾರೆ.

‘ಪೊಲೀಸ್ ಅಥವಾ ವಲಸೆ ಅಧಿಕಾರಿಗಳು ದಾಖಲೆ ಕೇಳಿಕೊಂಡು ಬಂಧಿಸುತ್ತಾರೆ ಎನ್ನವ ಭೀತಿ ನನಗಿದೆ’ ಎಂದು ಅವರು ಭಯ ತೋಡಿಕೊಂಡಿದ್ದಾರೆ.

ಸಣ್ಣದೊಂದು ಗುಡಿಸಲಿನಲ್ಲಿ ವಾಸಿಸುವ ಮಾರ್ಟಿನೆಜ್‌ಗೆ, ಅಮೆರಿಕಕ್ಕೆ ಬಂದಾಗ ಅಧಿಕಾರಿಗಳು ನೀಡಿದ ಗುರುತಿನ ಚೀಟಿಯೇ ಆಧಾರವಾಗಿದೆ. ಕಣ್ಣುಗಳಲ್ಲಿ ಭಯ, ಅತಂತ್ರ ಮನೆ ಮಾಡಿದೆ.

ಮೆಕ್ಸಿಕೊ ಗಡಿ ಮೂಲಕ ಅಮೆರಿಕ್ಕೆ ಪ್ರವೇಶಿಸುವವರು ಸಿಬಿಬಿ ಆ್ಯಪ್‌ ನೋಂದಣಿ ಮಾಡಿಕೊಂಡು, ಅಮೆರಿಕ ಅಧಿಕಾರಿಗಳ ಅನುಮತಿ ಪಡೆಯಬಹುದಿತ್ತು. ಅದರ ಮೂಲಕವೇ ತಾತ್ಕಾಲಿಕ ವಾಸಕ್ಕೂ ಅರ್ಜಿ ಸಲ್ಲಿಸಬಹುದಿತ್ತು.

ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸಿಬಿಪಿ ಆ್ಯಪ್ ಅನ್ನು ಟ್ರಂಪ್ ಸ್ಥಗಿತಗೊಳಿಸಿದ್ದಾರೆ.

ಎಲ್‌ಪಾಸೊ ಸುಮಾರು 6.78 ಲಕ್ಷ ಜನಸಂಖ್ಯೆ ಇರುವ ನಗರವಾಗಿದ್ದು, ಈ ‍‍ಪೈಕಿ ಶೇ 80ರಷ್ಟು ಮಂದಿ ಲ್ಯಾಟಿನ್ ಅಮೆರಿಕ ಮೂಲದವರು. ಟ್ರಂಪ್ ಅವರ ನಿರ್ಧಾರ ಅವರಲ್ಲಿ ಆತಂಕ ಮೂಡಿಸಿದೆ.

ಮಾರ್ಟಿನೆಜ್ ಅವರ ರೀತಿಯೇ ಅಲ್ಲಿರುವ ಹಲವು ಮಂದಿಗೆ ಹೇಳಲು ಹತ್ತಾರು ಕಥೆಗಳಿವೆ. ಆದರೆ ಅವರ ಮುಖದ ತುಂಬಾ ಆತಂಕ, ಭಯ ಹಾಗೂ ಅಭದ್ರತೆಯ ಗೆರೆಗಳೇ ತುಂಬಿವೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.