ADVERTISEMENT

ಪಾಕ್‌ನಲ್ಲಿ ಭಯೋತ್ಪಾದನೆಯು 'ಮುಕ್ತ ವ್ಯವಹಾರ’: ಜರ್ಮನಿಯಲ್ಲಿ ಗುಡುಗಿದ ಜೈಶಂಕರ್

ಪಿಟಿಐ
Published 26 ಮೇ 2025, 14:42 IST
Last Updated 26 ಮೇ 2025, 14:42 IST
<div class="paragraphs"><p>ಎಸ್. ಜೈಶಂಕರ್ </p></div>

ಎಸ್. ಜೈಶಂಕರ್

   

–ಪಿಟಿಐ ಸಂಗ್ರಹ ಚಿತ್ರ

ಬರ್ಲಿನ್: ಪಾಕಿಸ್ತಾನದಲ್ಲಿ ಭಯೋತ್ಪಾದನೆಯು 'ಮುಕ್ತ ವ್ಯವಹಾರ'ವಾಗಿದ್ದು, ಇದಕ್ಕೆ ಅಲ್ಲಿನ ಸರ್ಕಾರ ಮತ್ತು ಸೇನೆಯು ಹಣಕಾಸು ಒದಗಿಸುತ್ತವೆ. ಸಂಘಟಿಸುತ್ತವೆ ಮತ್ತು ತಮಗೆ ಬೇಕಾದ ಹಾಗೆ ಬಳಸುತ್ತವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ADVERTISEMENT

ಇತ್ತೀಚಿನ ಸಂಘರ್ಷದ ಸಂದರ್ಭ ಭಾರತ ಮತ್ತು ಪಾಕಿಸ್ತಾನ ಪರಮಾಣು ಯುದ್ಧದಿಂದ ಬಹಳಷ್ಟು ದೂರವಿದ್ದವು. ಆ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಜರ್ಮನ್ ಪತ್ರಿಕೆ FAZಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, ಜಗತ್ತಿನ ಎಲ್ಲವನ್ನೂ ಪರಮಾಣು ಸಮಸ್ಯೆಗೆ ಜೋಡಿಸುವ ಪ್ರವೃತ್ತಿ ಪಾಶ್ಚಿಮಾತ್ಯರಲ್ಲಿದೆ ಎಂದು ಟೀಕಿಸಿದರು.

ಪರಮಾಣು ಯುದ್ದದಿಂದ ನಮ್ಮ ಸಂಘರ್ಷವು ತುಂಬಾ, ತುಂಬಾ ದೂರದಲ್ಲಿತ್ತು. ನಿಮ್ಮ ಪ್ರಶ್ನೆಯಿಂದ ನಾನು ನಿಜಕ್ಕೂ ಆಶ್ಚರ್ಯಚಕಿತನಾಗಿದ್ದೇನೆ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಸಂಘರ್ಷದಿಂದ ಜಗತ್ತು ಎಷ್ಟು ದೂರದಲ್ಲಿದೆ ಎಂದು ಕೇಳಿದಾಗ ಅವರು ಈ ಉತ್ತರ ನೀಡಿದ್ದಾರೆ.

ಸಂಘರ್ಷವು ಯಾವುದೇ ಹಂತದಲ್ಲಿ ಪರಮಾಣು ಯುದ್ಧದ ಹಂತಕ್ಕೆ ತಲುಪಿರಲಿಲ್ಲ. ಜಗತ್ತಿನ ಯಾವುದೇ ಭಾಗದಲ್ಲಿ ನಡೆಯುವ ಎಲ್ಲ ಘಟನೆಗಳು ನೇರವಾಗಿ ಪರಮಾಣು ಸಮಸ್ಯೆಗೆ ಕಾರಣವಾಗುತ್ತವೆ ಎಂಬ ನಿರೂಪಣೆ ಇದೆ. ಆ ಸಂಕಥನದ ಬಗ್ಗೆ ನನಗೆ ಆತಂಕವಿದೆ. ಏಕೆಂದರೆ, ಅದು ಭಯೋತ್ಪಾದನೆಯಂತಹ ಭಯಾನಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಜೈಶಂಕರ್ ಗುಡುಗಿದ್ದಾರೆ.

ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನಗರಗಳು ಮತ್ತು ಪಟ್ಟಣಗಳಿಂದ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಜೈಶಂಕರ್ ಹೇಳಿದ್ದಾರೆ.

ಕಣ್ಣಿರುವ ಯಾರಾದರೂ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ನಗರಗಳು ಮತ್ತು ಪಟ್ಟಣಗಳಿಂದ ಬಹಿರಂಗವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಬಹುದು. ಅದು ರಹಸ್ಯವಾಗಿ ಉಳಿದಿಲ್ಲ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದಕರ ಪಟ್ಟಿಯು ಪಾಕಿಸ್ತಾನಿ ಹೆಸರುಗಳು ಮತ್ತು ಸ್ಥಳಗಳಿಂದ ತುಂಬಿದೆ. ಅವುಗಳನ್ನೇ ಗುರಿಯಾಗಿಸಿಕೊಂಡು ನಾವು ದಾಳಿ ನಡೆಸಿದ್ದೇವೆ. ಹಾಗಾಗಿ, ದಯವಿಟ್ಟು ಪರದೆಯ ಹಿಂದೆ ಏನೋ ನಡೆಯುತ್ತಿದೆ ಎಂದು ಭಾವಿಸಬೇಡಿ ಎಂದು ಜೈಶಂಕರ್ ತಿಳಿಸಿದ್ದಾರೆ.

ನೆಂದರ್‌ಲ್ಯಾಂಡ್ಸ್, ಡೆನ್ಮಾರ್ಕ್ ಮತ್ತು ಜರ್ಮನಿಯ ತಮ್ಮ ಮೂರು ದೇಶಗಳ ಪ್ರವಾಸದ ಅಂತಿಮ ಹಂತದಲ್ಲಿರುವ ಜಯಶಂಕರ್, ಸದ್ಯ ಬರ್ಲಿನ್‌ನಲ್ಲಿದ್ದಾರೆ.

ಹತ್ತಿರ ಹತ್ತಿರ...:
ಪಾಕಿಸ್ತಾನದೊಂದಿಗಿನ ಭಾರತದ ಸಂಘರ್ಷದಲ್ಲಿ ಚೀನಾದ ಪಾತ್ರ ಕುರಿತಂತೆ ಪ್ರಶ್ನಿಸಿದ್ದಕ್ಕೆ, ‘ಪಾಕಿಸ್ತಾನದ ಬಳಿಯಿರುವ ಅನೇಕ ಶಸ್ತ್ರಾಸ್ತ್ರಗಳಲ್ಲಿ ಬಹಳಷ್ಟು ಚೀನಾದವು. ಉಭಯ ದೇಶಗಳು ಪರಸ್ಪರ ಹತ್ತಿರದಲ್ಲಿವೆ. ಆದ್ದರಿಂದ ನಿಮ್ಮ ಸ್ವಂತ ತೀರ್ಮಾನಗಳನ್ನು ನೀವು ತೆಗೆದುಕೊಳ್ಳಬಹುದು’ ಎಂದು ಜೈಶಂಕರ್‌ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.