ADVERTISEMENT

ಸೋಲೊಪ್ಪಿಕೊಂಡ ಡೊನಾಲ್ಡ್‌ ಟ್ರಂಪ್‌?

ರಾಯಿಟರ್ಸ್
Published 14 ನವೆಂಬರ್ 2020, 10:36 IST
Last Updated 14 ನವೆಂಬರ್ 2020, 10:36 IST
   

ರಾಯಿಟರ್ಸ್‌:ಅಮೆರಿಕವನ್ನು ಕೊರೊನಾ ವೈರಸ್‌ ಲಾಕ್‌ಡೌನ್‌ಗೆ ಎಂದಿಗೂ ತಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹೇಳಿದ್ದಾರೆ. ಆದರೆ, ಜನವರಿಯಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಾಗ 'ಸಮಯವೇ ಎಲ್ಲವನ್ನೂ ಹೇಳುತ್ತದೆ' ಎನ್ನುವ ಮೂಲಕ ಟ್ರಂಪ್‌ ಅವರು ತಮ್ಮ ಸೋಲನ್ನು, ಅಧಿಕಾರದ ಅಂತ್ಯವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತ (290 ಎಲೆಕ್ಟೊರಲ್‌ ಮತಗಳು) ಗಳಿಸಿದ್ದು, ಅಮೆರಿಕದ ಅಧ್ಯಕ್ಷರಾಗುವುದು ಖಚಿತವಾಗಿದೆ.

ಜೋ ಬೈಡನ್‌ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಇದೇ ಮೊದಲೇ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಟ್ರಂಪ್‌, 'ಅಮೆರಿಕದಲ್ಲಿ ಹೊಸ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ, ಏಪ್ರಿಲ್ ತಿಂಗಳಿಗೂ ಮೊದಲೇ ಇಡೀ ದೇಶಕ್ಕೆ ಕೊರೊನಾ ವೈರಸ್ ಲಸಿಕೆ ಲಭ್ಯವಾಗಲಿದೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ,' ಎಂದು ಟ್ರಂಪ್ ಹೇಳಿದ್ದಾರೆ.

ADVERTISEMENT

'ವಾಸ್ತವವಾಗಿ, ನಮ್ಮ ಸರ್ಕಾರ ಲಾಕ್‌ಡೌನ್‌ ಕಡೆಗೆ ಹೋಗುವುದಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆಯೋ-ಯಾವ ಸರ್ಕಾರ ಇರುತ್ತದೆಯೋ ಯಾರಿಗೆ ಗೊತ್ತು? ಸಮಯ ಹೇಳುತ್ತದೆ ಎಂದು ನಾನು ಭಾವಹಿಸುತ್ತೇನೆ,' ಎಂದು ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ, ಭವಿಷ್ಯದಲ್ಲಿ ಬೇರೆ ಸರ್ಕಾರ ಬರುವ ಮುನ್ಸೂಚನೆ ನೀಡಿರುವ ಅವರು, ತಮ್ಮ ಸೋಲನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನದ ನಂತರ, ಟ್ರಂಪ್ ಚುನಾವಣಾ ಅಕ್ರಮದ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಟ್ವಿಟರ್‌ನಲ್ಲೂ ಅದಕ್ಕೆ ಪೂರಕವಾದ ಹೇಳಿಕೆಗಳನ್ನೇ ದಾಖಲಿಸಿದ್ದರಾದರೂ, ಶುಕ್ರವಾರದ ಸಾರ್ವಜನಿಕ ಹೇಳಿಕೆಯಲ್ಲಿ ಈ ಸಂಗತಿಗಳನ್ನು ಅವರು ಉಲ್ಲೇಖಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.