ADVERTISEMENT

ಭಾರತದಲ್ಲಿ ಸಿಎಎ ನಿಯಮ ಜಾರಿಗೆ ಅಮೆರಿಕದ ಸೆನೆಟ್ ಸದಸ್ಯ ಕಳವಳ

ಪಿಟಿಐ
Published 19 ಮಾರ್ಚ್ 2024, 12:45 IST
Last Updated 19 ಮಾರ್ಚ್ 2024, 12:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ವಾಷಿಂಗ್ಟನ್: ಅಮೆರಿಕದ ಸೆನೆಟ್‌ನ ವಿದೇಶ ಸಂಬಂಧಗಳ ಸಮಿತಿಯ ಅಧ್ಯಕ್ಷ ಬೆನ್ ಕಾರ್ಡಿನ್ ಅವರು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಮತ್ತು ಭಾರತದ ಸಂಬಂಧ ಗಟ್ಟಿಗೊಳ್ಳುತ್ತಿರುವ ಹೊತ್ತಿನಲ್ಲಿ, ಉಭಯ ದೇಶಗಳ ನಡುವಿನ ಸಹಕಾರವು ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ ಮೌಲ್ಯವನ್ನು ಆಧರಿಸಿರಬೇಕು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಸಂಬಂಧಿಸಿದ ನಿಯಮಗಳನ್ನು ಈಚೆಗೆ ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್‌ 31ಕ್ಕೆ ಮೊದಲು ಯಾವುದೇ ದಾಖಲೆಗಳು ಇಲ್ಲದೆ ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲು ಈ ನಿಯಮಗಳು ಅವಕಾಶ ಮಾಡಿಕೊಡುತ್ತವೆ.

ADVERTISEMENT

‘ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಧಿಸೂಚನೆಯಲ್ಲಿ ಪ್ರಕಟಿಸುವ ಭಾರತ ಸರ್ಕಾರದ ನಿರ್ಧಾರವು, ಅದರಲ್ಲೂ ಮುಖ್ಯವಾಗಿ ಇದು ದೇಶದ ಮುಸ್ಲಿಂ ಸಮುದಾಯದ ಮೇಲೆ ಉಂಟುಮಾಡಬಹುದಾದ ಪರಿಣಾಮವು, ನನ್ನಲ್ಲಿ ತೀವ್ರ ಕಳವಳ ಉಂಟುಮಾಡಿದೆ. ಇದನ್ನು ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ಜಾರಿಗೆ ತರಲಾಗಿದೆ’ ಎಂದು ಕಾರ್ಡಿನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಿಎಎ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ್ದರ ಬಗ್ಗೆ ಅಮೆರಿಕ ವಿದೇಶಾಂಗ ಸಚಿವಾಲಯವು ಕಳೆದ ವಾರ ಕಳವಳ ವ್ಯಕ್ತಪಡಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರವು, ಅಮೆರಿಕವು ತಪ್ಪು ಮಾಹಿತಿಯ ಪರಿಣಾಮವಾಗಿ ಅನಗತ್ಯವಾದ ಹೇಳಿಕೆ ನೀಡಿದೆ ಎಂದು ತಿರುಗೇಟು ನೀಡಿತ್ತು.

ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ಹಿಂದೂ ಪ್ಯಾಕ್ಟ್‌ ಮತ್ತು ಗ್ಲೋಬಲ್ ಹಿಂದೂ ಹೆರಿಟೇಜ್ ಫೌಂಡೇಷನ್, ಈ ಕಾಯ್ದೆಯನ್ನು ಬೆಂಬಲಿಸಿವೆ.

‘ಸಿಎಎ ಕಾಯ್ದೆಯು ಭಾರತದ ಯಾವ ಪೌರರಿಗೂ ತೊಂದರೆ ಉಂಟುಮಾಡುವುದಿಲ್ಲ. ಈ ಕಾಯ್ದೆಯು ಧರ್ಮನಿರಪೇಕ್ಷ ಅಲ್ಲ ಎಂದು ಚಿತ್ರಿಸುತ್ತಿರುವುದು ಸರಿಯಲ್ಲ. ಭಾರತದ ನೆರೆಯ ದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ತಾರತಮ್ಯ ಆಗುತ್ತಿದೆ. ಅಮೆರಿಕವು ಪ್ರತಿಪಾದಿಸುವ ಮೌಲ್ಯಗಳ ಪರವಾಗಿ, ದೌರ್ಜನ್ಯಕ್ಕೆ ಗುರಿಯಾದವರ ಹಕ್ಕುಗಳ ಪರವಾಗಿ ನಿಲ್ಲುವ ಬದಲು ನಮ್ಮ ಸರ್ಕಾರವು ಈ ಮಾನವೀಯ ಪ್ರಯತ್ನವನ್ನು ವಿರೋಧಿಸಲು ತೀರ್ಮಾನಿಸಿರುವುದನ್ನು ಕಂಡು ಅಮೆರಿಕನ್ನರಾದ ನಮಗೆ ನಿರಾಸೆಯಾಗಿದೆ’ ಎಂದು ಹಿಂದೂಪ್ಯಾಕ್ಟ್‌ನ ಸಂಸ್ಥಾಪಕ ಹಾಗೂ ಸಹಸಂಚಾಲಕ ಅಜಯ್ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.