ADVERTISEMENT

Russia Ukraine Conflict | ಝೆಲೆನ್‌ಸ್ಕಿ ‘ಸರ್ವಾಧಿಕಾರಿ’: ಡೊನಾಲ್ಡ್ ಟ್ರಂಪ್

‘ರಷ್ಯಾ ವಿರುದ್ಧ ಯುದ್ಧ ಆರಂಭಕ್ಕೆ ಉಕ್ರೇನ್‌ ಅಧ್ಯಕ್ಷರೇ ಕಾರಣ’

ಏಜೆನ್ಸೀಸ್
Published 20 ಫೆಬ್ರುವರಿ 2025, 12:59 IST
Last Updated 20 ಫೆಬ್ರುವರಿ 2025, 12:59 IST
ಝೆಲೆನ್‌ಸ್ಕಿ ಹಾಗೂ ಟ್ರಂಪ್ 
ಝೆಲೆನ್‌ಸ್ಕಿ ಹಾಗೂ ಟ್ರಂಪ್    

ಮಯಾಮಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರನ್ನು ‘ಸರ್ವಾಧಿಕಾರಿ’ ಎಂದು ಟೀಕಿಸಿದ್ದಾರೆ. 

ಮೂರು ವರ್ಷಗಳ ಹಿಂದೆ ಆರಂಭವಾದ ರಷ್ಯಾ– ಉಕ್ರೇನ್‌ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಗಳು ಮುಂದುವರಿದಿರುವಾಗಲೇ ಟ್ರಂಪ್‌ ಅವರ ಹೇಳಿಕೆ ಹೊರಬಿದ್ದಿದೆ. ಇದು ಝೆಲೆನ್‌ಸ್ಕಿ ಮತ್ತು ಅವರ ನಡುವೆ ಮೂಡಿರುವ ಬಿರುಕನ್ನು ಇನ್ನಷ್ಟು ದೊಡ್ಡದಾಗಿಸಿದೆ.

ರಷ್ಯಾ ವಿರುದ್ದದ ಯುದ್ಧದಲ್ಲಿ ಅಮೆರಿಕವು ಉಕ್ರೇನ್‌ಗೆ ಅಗತ್ಯ ಹಣಕಾಸಿನ ಮತ್ತು ಶಸ್ತ್ರಾಸ್ತ್ರಗಳ ನೆರವು ನೀಡಿದೆ. ಆದರೆ ಟ್ರಂಪ್‌ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಹಠಾತ್‌ ಬದಲಾವಣೆ ಕಂಡುಬಂದಿದೆ.

ADVERTISEMENT

ಅಮೆರಿಕವು ಕೆಲ ದಿನಗಳ ಹಿಂದೆ ರಷ್ಯಾ ಜತೆ ಮಾತುಕತೆ ಆರಂಭಿಸಿದೆ. ಇದೀಗ, ಟ್ರಂಪ್‌ ಅವರು ಝೆಲೆಲ್‌ಸ್ಕಿ ಅವರನ್ನು ಟೀಕಿಸಿದ್ದು, ಯುದ್ಧ ಆರಂಭಕ್ಕೆ ಉಕ್ರೇನ್‌ ಕಾರಣ ಎಂದು ದೂರಿದ್ದಾರೆ.

‘ಚುನಾವಣೆ ನಡೆಯದೆ ಸರ್ವಾಧಿಕಾರಿಯಾಗಿ ಮುಂದುವರಿದಿರುವ ಝೆಲೆನ್‌ಸ್ಕಿ, ಶೀಘ್ರವಾಗಿ ನಿರ್ಗಮಿಸುವುದು ಒಳಿತು. ಇಲ್ಲದಿದ್ದರೆ ಅವರಿಗೆ ಎಲ್ಲೂ ನೆಲೆ ಸಿಗದು’ ಎಂದು ಅಮೆರಿಕದ ಅಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

2019ರಲ್ಲಿ ಉಕ್ರೇನ್‌ ಅಧ್ಯಕ್ಷರಾಗಿ ಆಯ್ಕೆಯಾದ ಝೆಲೆನ್‌ಸ್ಕಿ ಅವರ ಐದು ವರ್ಷಗಳ ಅಧಿಕಾರಾವಧಿ 2024ರ ಮೇ ನಲ್ಲಿ ಕೊನೆಗೊಳ್ಳಬೇಕಿತ್ತು. ಆದರೆ ಯುದ್ದದ ಕಾರಣ ಉಕ್ರೇನ್‌ನಲ್ಲಿ ಮಿಲಿಟರಿ ಕಾನೂನು ಜಾರಿಯಲ್ಲಿರುವುದರಿಂದ ಅವಧಿ ಕಳೆದರೂ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

‘ಝೆಲೆನ್‌ಸ್ಕಿ ಅವರು ಚುನಾವಣೆ ನಡೆಸಲು ನಿರಾಕರಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಅವರ ಜನಬೆಂಬಲ ಕುಸಿಯುತ್ತಿರುವುದನ್ನು ಸಮೀಕ್ಷೆಯು ತೋರಿಸಿವೆ’ ಎಂದು ಟ್ರಂಪ್‌ ಹೇಳಿದ್ದಾರೆ.

‘ಝೆಲೆನ್‌ಸ್ಕಿ ಅವರು ಜೋ ಬೈಡನ್‌ (ಅಮೆರಿಕದ ಹಿಂದಿನ ಅಧ್ಯಕ್ಷ) ಅವರನ್ನು ತಮ್ಮ ಮಾತುಗಳಿಂದ ಮರುಳು ಮಾಡಿದ್ದಾರೆ. ಆದರೆ ನಾವು ಯುದ್ಧವನ್ನು ಕೊನೆಗೊಳಿಸಲು ರಷ್ಯಾ ಜತೆ ಯಶಸ್ವಿಯಾಗಿ ಮಾತುಕತೆ ನಡೆಸುತ್ತಿದ್ದೇವೆ. ಯುದ್ಧ ಕೊನೆಗೊಳಿಸುವುದು ಟ್ರಂಪ್‌ ಆಡಳಿತದಿಂದ ಮಾತ್ರ ಸಾಧ್ಯ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ.

ರಷ್ಯಾದಿಂದ ತಪ್ಪು ಮಾಹಿತಿ: ಝೆಲೆನ್‌ಸ್ಕಿ

ಕೀವ್: ಡೊನಾಲ್ಡ್‌ ಟ್ರಂಪ್‌ ಅವರು ರಷ್ಯಾದ ‘ತಪ್ಪು ಮಾಹಿತಿ’ಗೆ ತುತ್ತಾಗುತ್ತಿದ್ದಾರೆ ಎಂದು ಝೆಲೆನ್‌ಸ್ಕಿ ಆರೋಪಿಸಿದ್ದಾರೆ. ಅಮೆರಿಕದ ಅಧ್ಯಕ್ಷರು ಮಾಡಿರುವ ಟೀಕೆಗೆ ಕೀವ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು ‘ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್‌ ಅವರ ಬಗ್ಗೆ ಅಪಾರ ಗೌರವವಿದೆ. ದುರದೃಷ್ಟವಶಾತ್‌ ಅವರು ತಪ್ಪು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದಾರೆ’ ಎಂದು ಹೇಳಿದ್ದಾರೆ.  ‘ಯುದ್ಧವನ್ನು ಉಕ್ರೇನ್‌ ಆರಂಭಿಸಿದೆ’ ಎಂಬ ಟ್ರಂಪ್‌ ಆರೋಪವನ್ನೂ ಅವರು ಅಲ್ಲಗಳೆದರು. ರಷ್ಯಾ– ಅಮೆರಿಕ ಮಾತುಕತೆಯನ್ನೂ ಟೀಕಿಸಿದ ಅವರು ‘ಹಲವು ವರ್ಷಗಳ ಏಕಾಂಗಿತನದಿಂದ ಹೊರಬರಲು ವ್ಲಾದಿಮಿರ್‌ ಪುಟಿನ್‌ ಅವರಿಗೆ ಅಮೆರಿಕ ನೆರವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.