
ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ಈ ಹೇಳಿಕೆಯನ್ನು ಟ್ರಂಪ್ ಸುಮಾರು 70ನೇ ಸಲ ಪುನರುಚ್ಚರಿಸಿದ್ದಾರೆ.
'ಕಳೆದ 10 ತಿಂಗಳಲ್ಲಿ ನಾನು ಎಂಟು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಇದರಲ್ಲಿ ಕೊಸೊವೊ ಮತ್ತು ಸರ್ಬಿಯಾ, ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜರ್‌ಬೈಜಾನ್ ಸೇರಿದೆ' ಎಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ಆರ್ಥಿಕತೆಯ ಕುರಿತ ಸಮಾವೇಶದಲ್ಲಿ ಹೇಳಿದ್ದಾರೆ.
ಪರಮಾಣು ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ಯುದ್ಧ ಮುಂದುವರಿಸಲು ಬಯಸಿದ್ದವು. ಆದರೆ ತಾನು ಯುದ್ಧವನ್ನು ಕೊನೆಗೊಳಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಮತ್ತೊಂದೆಡೆ ಪಾಕಿಸ್ತಾನ ವಿಚಾರದಲ್ಲಿ ಮೂರನೇ ರಾಷ್ಟ್ರದ ಹಸ್ತಕ್ಷೇಪವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.
ಏಪ್ರಿಲ್ 22ರಂದು 26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿರಿಸಿಕೊಂಡು 'ಆಪರೇಷನ್ ಸಿಂಧೂರ' ಹೆಸರಿನ ಸೇನಾ ಕಾರ್ಯಾಚರಣೆಯನ್ನು ನಡೆಸಿತ್ತು.
ಇದರ ಬೆನ್ನಲ್ಲೇ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿತ್ತು. ಮೇ 10 ಸಂಘರ್ಷವನ್ನು ಕೊನೆಗಾಣಿಸಲು ಒಪ್ಪಂದಕ್ಕೆ ಬರಲಾಗಿತ್ತು.
ಏತನ್ಮಧ್ಯೆ ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಣ ಸಂಘರ್ಷ ತೀವ್ರಗೊಂಡಿದ್ದು, ತಾವು ಮಧ್ಯಪ್ರವೇಶ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.
'ಕಾಂಬೋಡಿಯಾ–ಥಾಯ್ಲೆಂಡ್ ಮತ್ತೆ ಸಂಘರ್ಷ ಮಾಡುತ್ತಿದೆ. ನಾಳೆ ನಾನು ಉಭಯ ದೇಶಗಳ ನಾಯಕರಿಗೆ ದೂರವಾಣಿ ಕರೆ ಮಾಡಿ ಮಾತನಾಡಲಿದ್ದೇನೆ. ನಾನದನ್ನು ಮಾಡಲಿದ್ದೇನೆ. ಶಾಂತಿಯು ನೆಲೆಸಬೇಕು' ಎಂದು ಟ್ರಂಪ್ ಹೇಳಿದ್ದಾರೆ.
'ನನ್ನ ನೆಚ್ಚಿನ ಪದ 'ಸುಂಕ' ಆಗಿದೆ. ಅದು ರೈತರನ್ನು ಶ್ರೀಮಂತರನ್ನಾಗಿ ಮಾಡುತ್ತಿದೆ. ನೂರಾರು ಶತಕೋಟಿ ಡಾಲರ್ ನೆರವಾಗುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.