ADVERTISEMENT

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಸುಂಕ ಏರಿಸುವ ಬೆದರಿಕೆ ಹಾಕಿದ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 17:53 IST
Last Updated 5 ಜನವರಿ 2026, 17:53 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್</p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

   

(ಪಿಟಿಐ ಚಿತ್ರ)...

ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿತಗೊಳಿಸಬೇಕು ಎಂಬ ಆಗ್ರಹಕ್ಕೆ ಮಣಿಯದಿದ್ದರೆ ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ADVERTISEMENT

ಅಮೆರಿಕ ಜೊತೆಗಿನ ಭಾರತದ ವ್ಯಾಪಾರ ಒಪ್ಪಂದವು ಇನ್ನೂ ಅಂತಿಮಗೊಂಡಿಲ್ಲ. ಈ ಸಂದರ್ಭದಲ್ಲಿ ಟ್ರಂಪ್‌ ಅವರ ಎಚ್ಚರಿಕೆಯು ಭಾರತದ ಮೇಲೆ ಒತ್ತಕ್ಕೆ ಕಾರಣವಾಗಬಹುದು.

‘ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಮನುಷ್ಯ. ನಾನು ಸಂತುಷ್ಟಿಯಿಂದ ಇಲ್ಲ ಎಂಬುದು ಅವರಿಗೆ ತಿಳಿದಿದೆ. ಹಾಗೆಯೇ ನನ್ನನ್ನು ಸಂತುಷ್ಟಗೊಳಿಸುವುದು ಬಹಳ ಮುಖ್ಯ’ ಎಂದು ಅಮೆರಿಕ ಅಧ್ಯಕ್ಷರ ವಿಮಾನ ಏರ್‌ಫೋರ್ಸ್‌ ಒನ್‌ನಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಟ್ರಂಪ್‌ ಹೇಳಿದ್ದಾರೆ.

‘ಅವರು ವ್ಯಾಪಾರ ಮಾಡುತ್ತಿದ್ದಾರೆ. ನಾವು ಬಹಳ ವೇಗವಾಗಿ ಸುಂಕವನ್ನು ಹೆಚ್ಚಿಸಬಹುದು’ ಎಂದು ಹೇಳಿದ್ದಾರೆ. ಈ ಕುರಿತಂತೆ ಭಾರತದ ವಾಣಿಜ್ಯ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಟ್ರಂಪ್‌ ಅವರು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿದ್ದಾರೆ. ಇತರ ದೇಶಗಳ ಮೇಲೆ ಹೇರಿರುವ ಸುಂಕಕ್ಕೆ ಹೋಲಿಸಿದರೆ ಇದು ಅತೀ ಹೆಚ್ಚು.

ಭಾರತವು ತನ್ನ ತೈಲ ಅಗತ್ಯದ ಶೇ 88ರಷ್ಟನ್ನು ಆಮದು ಮಾಡಿಕೊಳ್ಳು ತ್ತದೆ. 2021ವರೆಗೆ ಇದರಲ್ಲಿ ರಷ್ಯಾದ ಪಾಲು ಶೇ 0.2ರಷ್ಟೂ ಇರಲಿಲ್ಲ. ಆದರೆ, ಉಕ್ರೇನ್‌ ಮೇಲೆ ದಾಳಿ ಮಾಡಿದ ಕಾರಣಕ್ಕೆ ರಷ್ಯಾ ಮೇಲೆ ಅಮೆರಿಕ ಮತ್ತು ಪಶ್ಚಿಮದ ದೇಶಗಳು ನಿರ್ಬಂಧ ಹೇರಿದವು. ಹಾಗಾಗಿ ರಷ್ಯಾ ರಿಯಾಯಿತಿ ದರದಲ್ಲಿ ತೈಲ ಮಾರಾಟ ಮಾಡಲು ಆರಂಭಿಸಿದ ಬಳಿಕ ಭಾರತದ ಖರೀದಿ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗಿದೆ.

‘ಸುಂಕ ಕಡಿತಕ್ಕೆ ರಾಯಭಾರಿ ಬೇಡಿಕೆ’

‘ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಲಾಗುತ್ತಿದೆ. ಹಾಗಾಗಿ ಸರಕುಗಳ ಮೇಲೆ ಹೇರಿರುವ ಸುಂಕವನ್ನು ಕಡಿತಗೊಳಿಸಬೇಕು ಎಂದು ಟ್ರಂಪ್‌ ಅವರಿಗೆ ಹೇಳುವಂತೆ ಭಾರತದ ರಾಯಭಾರಿಯಾಗಿರುವ ವಿನಯ್‌ ಕ್ವಾತ್ರ ಕೋರಿದ್ದರು’ ಎಂದು ಅಲ್ಲಿನ ಸೆನೆಟರ್‌ ಲಿಂಡ್ಸೆ ಗ್ರಹಾಂ ಹೇಳಿದ್ದಾರೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳ ಸರಕುಗಳ ಮೇಲೆ ಶೇ 500ರಷ್ಟು ಸುಂಕ ಹೇರಬೇಕು ಎಂಬುದರ ಕುರಿತು ಅವರು ಮಾತನಾಡಿದರು. ಅವರು ಡೊನಾಲ್ಡ್‌ ಟ್ರಂಪ್‌ ಅವರೊಂದಿಗೆ ‘ಏರ್‌ ಫೋರ್ಸ್‌ ಒನ್‌’ನಲ್ಲಿ ಪ್ರಯಾಣಿಸುತ್ತಿದ್ದರು.

‘ತಿಂಗಳ ಹಿಂದೆ ನಾನು ಭಾರತದ ರಾಯಭಾರಿಯ ಮನೆಗೆ ಹೋಗಿದ್ದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೇಗೆ ಕಡಿಮೆ ಮಾಡಲಾಗಿದೆ ಎಂಬುದರ ಕುರಿತು ಮಾತ್ರ ಅವರು ಮಾತನಾಡಲು ಬಯಸಿದ್ದರು. ಈ ವಿಚಾರವನ್ನು ಅಧ್ಯಕ್ಷರ ಗಮನಕ್ಕೆ ತರಬೇಕು ಎಂದು ಅವರು ಕೋರಿದ್ದರು’ ಎಂದು ಗ್ರಹಾಂ ಹೇಳಿದ್ದಾರೆ.

‘ಈ ವಿಧಾನ ಪರಿಣಾಮಕಾರಿಯಾಗಿದೆ... ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಿ, ಪುಟಿನ್‌ ಅವರ ಯುದ್ಧ ಯಂತ್ರವು ಮುನ್ನಡೆಯಲು ನೆರವಾದರೆ, ಆ ಆಯ್ಕೆಯು ಕಠಿಣ ಎನಿಸುವಂತೆ ಅಧ್ಯಕ್ಷರು ಸುಂಕದ ಮೂಲಕ  ಮಾಡುತ್ತಾರೆ. ರಷ್ಯಾದಿಂದ ತೈಲ ಖರೀದಿಯನ್ನು ಭಾರತವು ಕಡಿತಗೊಳಿಸಲು ಮುಖ್ಯ ಕಾರಣ ಅವರು (ಅಧ್ಯಕ್ಷ) ಹೇರಿದ ಸುಂಕ ಎಂದು ನಾನು ಬಲವಾಗಿ ನಂಬಿದ್ದೇನೆ’ ಎಂದು ಗ್ರಹಾಂ ವಿವರಿಸಿದ್ದಾರೆ. 

ಕ್ವಾತ್ರಾ ಅವರು ಅಮೆರಿಕದ ಕೆಲವು ಸೆನೆಟರ್‌ಗಳಿಗೆ ಔತಣಕೂಟ ಏರ್ಪಡಿಸಿದ್ದರು. ಭಾರತದ ರಾಯಭಾರಿ ಅಧಿಕೃತ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಗ್ರಹಾಂ ಸೇರಿ ಹಲವು ಸೆನೆಟರ್‌ಗಳು ಭಾಗಿಯಾಗಿದ್ದರು. 

‘ಇಂಧನ, ರಕ್ಷಣಾ ಸಹಕಾರ, ವ್ಯಾಪಾರ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಫಲಪ್ರದ ಮಾತುಕತೆ ನಡೆಯಿತು. ಭಾರತ–ಅಮೆರಿಕ ಸಂಬಂಧ ಬಲಪಡಿಸಲು ಸಹಕಾರ ನೀಡಿದ್ದಕ್ಕೆ ಅವರಿಗೆ ಆಭಾರಿ’ ಎಂದು ಕ್ವಾತ್ರಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಕಾಂಗ್ರೆಸ್‌ ತರಾಟೆ

ಟ್ರಂಪ್‌ ಹೇಳಿಕೆ ಕುರಿತಂತೆ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್‌ ಪಕ್ಷ ತರಾಟೆಗೆ ತೆಗೆದುಕೊಂಡಿದೆ.‌ ‘ನಮಸ್ತೆ ಟ್ರಂಪ್‌, ಹೌಡಿ ಮೋದಿ ಕಾರ್ಯಕ್ರಮ, ಬಲವಂತದ ಅಪ್ಪುಗೆಗಳು, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರನ್ನು ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಮಾಡಲಾದ ಪೋಸ್ಟ್‌ಗಳಿಂದ ದೇಶಕ್ಕೆ ಒಳ್ಳೆಯದಾಗಿರುವುದು ಅಷ್ಟರಲ್ಲೇ ಇದೆ’ ಎಂದು ವ್ಯಂಗ್ಯವಾಡಿದೆ.

‘ಪ್ರಧಾನಿಯ ಶ್ವೇತಭವನದಲ್ಲಿರುವ ಅತ್ಯುತ್ತಮ ಸ್ನೇಹಿತ, ಭಾರತದ ವಿಚಾರದಲ್ಲಿ ಆಗೀಗ ಬಿಸಿ ಮುಟ್ಟಿಸುತ್ತಲೇ ತಣ್ಣಗೆ ಇರುವಂತೆ ನಟಿಸುವ ಧೋರಣೆಯನ್ನು ಮುಂದುವರಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ, ಭಾರತದಿಂದ ರಫ್ತು ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಸುಂಕ ಹೇರುವುದಾಗಿ ಬೆದರಿಸಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.