ADVERTISEMENT

US Travel Ban | ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ: ಡೊನಾಲ್ಡ್‌ ಟ್ರಂಪ್

ಪ್ರಯಾಣ ನಿಷೇಧ; 12 ದೇಶಗಳ ಸೇರ್ಪಡೆ

ಏಜೆನ್ಸೀಸ್
Published 5 ಜೂನ್ 2025, 12:58 IST
Last Updated 5 ಜೂನ್ 2025, 12:58 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಯಾಣ ನಿಷೇಧಕ್ಕೆ ಸಂಬಂಧಿಸಿದ ಹೊಸ ನಿಯಮಕ್ಕೆ ಬುಧವಾರ ಸಹಿ ಹಾಕಿದ್ದಾರೆ. ಅಫ್ಗಾನಿಸ್ತಾನ, ಇರಾನ್ ಮತ್ತು ಯೆಮೆನ್ ಸೇರಿದಂತೆ 12 ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ಹೇರಿದ್ದಾರೆ.

ಟ್ರಂಪ್‌ ಅವರು ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ಕೆಲವು ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಿದ್ದರು. ಇದೀಗ ಆ ಪಟ್ಟಿಯನ್ನು ಪರಿಷ್ಕರಿಸಿದ್ದಾರೆ.

ಈಚೆಗೆ ಕೊಲರಾಡೊ ವಿಶ್ವವಿದ್ಯಾಲಯದ ಸಮೀಪ ಇಸ್ರೇಲ್‌ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ವ್ಯಕ್ತಿಯೊಬ್ಬ ಬೆಂಕಿಯುಗುಳುತ್ತಿದ್ದ ತೈಲ ಬಾಂಬ್‌ ಎಸೆದ ಘಟನೆ ನಡೆದಿತ್ತು. ದೇಶದಲ್ಲಿ ಅಕ್ರಮವಾಗಿ ನೆಲಸಿದ್ದ ವ್ಯಕ್ತಿಯ ವಿರುದ್ಧ ಅಮೆರಿಕದ ಅಧಿಕಾರಿಗಳು ಆರೋಪ ಹೊರಿಸಿದ್ದರು. ಪ್ರಯಾಣ ನಿಷೇಧ ಪಟ್ಟಿಯನ್ನು ಪರಿಷ್ಕರಿಸಲು ಈ ಘಟನೆಯೇ ಕಾರಣ ಎಂದು ಟ್ರಂಪ್‌ ಹೇಳಿದ್ದಾರೆ.

ADVERTISEMENT

ಅಫ್ಗಾನಿಸ್ತಾನ, ಮ್ಯಾನ್ಮಾರ್, ಚಾದ್, ಕಾಂಗೊ ಗಣರಾಜ್ಯ, ಈಕ್ವಟೋರಿಯಲ್ ಗಿನಿ, ಎರಿಟ್ರಿಯಾ, ಹೈಟಿ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್‌ ಮತ್ತು ಯೆಮೆನ್‌ ದೇಶಗಳ ನಾಗರಿಕರು ಅಮೆರಿಕ ಪ್ರವೇಶಿಸುವುದರ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಇತರ ಏಳು ದೇಶಗಳಾದ ಬುರುಂಡಿ, ಕ್ಯೂಬಾ, ಲಾವೋಸ್, ಸಿಯೆರಾ ಲಿಯೋನ್, ಟೋಗೊ, ತುರ್ಕಮೆನಿಸ್ತಾನ್ ಹಾಗೂ ವೆನಿಜುವೆಲದ ನಾಗರಿಕರ ಮೇಲೆ ಭಾಗಶಃ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧವು ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಶ್ವೇತಭವನ ತಿಳಿಸಿದೆ.

‘ನಮ್ಮ ದೇಶಕ್ಕೆ ಅವರ ಅಗತ್ಯವಿಲ್ಲ’ ಎಂದು ಟ್ರಂಪ್‌ ಹೇಳಿದ್ದಾರೆ. ‘ಕೊಲರಾಡೊದ ಬೌಲ್ಡರ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿ ನಡೆದಿದೆ. ವಿದೇಶಿ ಪ್ರಜೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ನಮ್ಮ ದೇಶ ಪ್ರವೇಶಿಸಲು ಅವಕಾಶ ನೀಡಿದರೆ ಉಂಟಾಗುವ ಅಪಾಯ ಏನೆಂಬುದನ್ನು ಈ ಘಟನೆ ತೋರಿಸಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಾರ್ವರ್ಡ್‌: ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ಇಲ್ಲ

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯಲು ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನಿಷೇಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಉನ್ನತ ಶಿಕ್ಷಣದ ಮೇಲೆ ತಮ್ಮ ಆಡಳಿತದ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ‘ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನಕ್ಕೆ ಹೊಸದಾಗಿ ಸೇರಲು ಅಥವಾ ಹಾರ್ವರ್ಡ್ ವಿಶ್ವವಿದ್ಯಾಲಯ ಆಯೋಜಿಸುವ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಬರಲು ಬಯಸುವ ವಿದೇಶಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿದ್ದೇನೆ’ ಎಂದು ಬುಧವಾರ ತಡರಾತ್ರಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.