ADVERTISEMENT

ಫ್ಲಾಯ್ಡ್ ಗೌರವಾರ್ಥವಾಗಿ ಟ್ರಂಪ್ ಪೋಸ್ಟ್ ಮಾಡಿದ್ದ ವಿಡಿಯೊ ತೆಗೆದುಹಾಕಿದ ಟ್ವಿಟರ್

ಏಜೆನ್ಸೀಸ್
Published 5 ಜೂನ್ 2020, 5:04 IST
Last Updated 5 ಜೂನ್ 2020, 5:04 IST
   
""

ವಾಷಿಂಗ್ಟನ್: ಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿದ್ದ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್‌ ಫ್ಲಾಯ್ಡ್‌ (46) ಎಂಬುವವರಿಗೆ ಗೌರವ ಸೂಚಿಸಿಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪೋಸ್ಟ್‌ ಮಾಡಿಕೊಂಡಿದ್ದ ವಿಡಿಯೊವನ್ನು ಟ್ವಿಟರ್‌ ತೆಗೆದುಹಾಕಿದೆ.

3 ನಿಮಿಷ 45 ಸೆಕೆಂಡ್‌ ಅವಧಿಯ ವಿಡಿಯೊವನ್ನು ಜೂನ್‌ 3ರಂದು ಟ್ರಂಪ್ ಹಂಚಿಕೊಂಡಿದ್ದರು. ಕಾಪಿರೈಟ್‌ ಸಮಸ್ಯೆಯಿಂದಾಗಿ ವಿಡಿಯೊ ಡಿಲೀಟ್‌ ಮಾಡಲಾಗಿದೆ ಎನ್ನಲಾಗಿದೆ.

ಫ್ಲಾಯ್ಡ್‌ ಅವರನ್ನು ಮಿನಿಯಾಪೊಲೀಸ್‌ ನಗರದ ಶ್ವೇತವರ್ಣೀಯ ಪೊಲೀಸ್‌ ಅಧಿಕಾರಿಯೊಬ್ಬರು ನೆಲಕ್ಕೆ ಉರುಳಿಸಿ, ಅವರ ಕತ್ತಿನ ಮೇಲೆ ಮಂಡಿಯನ್ನಿಟ್ಟಿದ್ದರು. ಇದರಿಂದಾಗಿ ಫ್ಲಾಯ್ಡ್‌ ಉಸಿರುಗಟ್ಟಿ ಪ್ರಾಣಬಿಟ್ಟಿದ್ದರು. ಈ ಘಟನೆಯನ್ನು ಜನಾಂಗೀಯ ದೌರ್ಜನ್ಯ ಎಂದು ಬಣ್ಣಿಸಲಾಗುತ್ತಿದೆ.

ಘಟನೆಯ ನಂತರ, ಮಿನಿಯಾಪೊಲೀಸ್‌ ನಗರದಲ್ಲಿ ಪ್ರತಿಭಟನೆ ಆರಂಭವಾಗಿತ್ತು. ಅದು ಈಗ ಅಮೆರಿಕದಾದ್ಯಂತ ಹಬ್ಬಿದೆ. ಲಾಸ್‌ಏಂಜಲೀಸ್‌, ಷಿಕಾಗೊ,ನ್ಯೂಯಾರ್ಕ್‌, ಹ್ಯೂಸ್ಟನ್‌, ಫಿಲಡೆಲ್ಫಿಯಾ ಹಾಗೂ ವಾಷಿಂಗ್ಟನ್‌ ಡಿಸಿ ನಗರಗಳಲ್ಲೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.

ಇದೀಗ, ಜಾರ್ಜ್ ಫ್ಲಾಯ್ಡ್‌ ಹತ್ಯೆಗೆ ಪ್ರತಿಯಾಗಿ ಒಬ್ಬ ಪೊಲೀಸ್‌ ಅಧಿಕಾರಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ.ಪ್ರತಿಭಟನಾಕಾರರನ್ನು ನಿಯಂತ್ರಿಸಲುಮಿಲಿಟರಿಯನ್ನು ನಿಯೋಜಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.