ADVERTISEMENT

ಈಗ ಅಧಿಕೃತ: ಗಗನಯಾನಿ ಸುನಿತಾ ವಿಲಿಯಮ್ಸ್ ನಾಳೆ ಭೂಮಿಗೆ ವಾಪಸ್! NASA ಹೇಳಿಕೆ

ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 5.57 ಕ್ಕೆ ಭೂಮಿಗೆ ಕರೆತರಲಿದ್ದೇವೆ ಎಂದು ನಾಸಾ ತಿಳಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2025, 4:24 IST
Last Updated 17 ಮಾರ್ಚ್ 2025, 4:24 IST
<div class="paragraphs"><p>ಐಎಸ್‌ಎಸ್‌ ನಲ್ಲಿ&nbsp;ಸುನಿತಾ ವಿಲಿಯಮ್ಸ್ ಹಾಗೂ ಇತರ ಗಗನಯಾನಿಗಳು</p></div>

ಐಎಸ್‌ಎಸ್‌ ನಲ್ಲಿ ಸುನಿತಾ ವಿಲಿಯಮ್ಸ್ ಹಾಗೂ ಇತರ ಗಗನಯಾನಿಗಳು

   

ಕೇಪ್‌ ಕೆನವೆರಲ್ (ಅಮೆರಿಕ): ನಾಸಾ ಗಗನಯಾನಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ಅವರನ್ನು ಮಾರ್ಚ್18 ರಂದು ಮಂಗಳವಾರ ಅಮೆರಿಕದ ಸ್ಥಳೀಯ ಕಾಲಮಾನ ಸಂಜೆ 5.57 ಕ್ಕೆ ಭೂಮಿಗೆ ಕರೆತರಲಿದ್ದೇವೆ ಎಂದು ನಾಸಾ ತಿಳಿಸಿದೆ.

ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಸಂತಸದ ವಿಚಾರವನ್ನು ಪೋಸ್ಟ್ ಮಾಡಿರುವ ನಾಸಾ ನಮ್ಮ ಗಗನಯಾನಿಗಳನ್ನು ಯಶಸ್ವಿಯಾಗಿ ಕರೆತರುವ ಕೆಲಸ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಆರಂಭವಾಗಿದೆ ಎಂದು ತಿಳಿಸಿದೆ.

ADVERTISEMENT

ನಾಸಾ ಹಾಗೂ ಸ್ಪೇಸ್ ಎಕ್ಸ್‌ನ ಅದ್ಭುತ ಪ್ರಯತ್ನದಿಂದ ಕಳೆದ ಒಂಬತ್ತು ತಿಂಗಳಿನಿಂದ ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡಿರುವ ಸುನಿತಾ ಹಾಗೂ ಬುಚ್‌ ಅವರು ಭೂಮಿಗೆ ವಾಪಸಾಗುವುದು ಸನ್ನಿಹಿತವಾಗಿದೆ.

ಸುನಿತಾ ಮತ್ತು ವಿಲ್ಮೋರ್‌ ಅಲ್ಲದೆ ಐಎಸ್‌ಎಸ್‌ನಲ್ಲಿರುವ ನಿಕ್‌ ಹೇಗ್‌ ಮತ್ತು ಅಲೆಕ್ಸಾಂಡರ್‌ ಗೊರ್ಬನೊವ್ ಅವರೂ ಭೂಮಿಗೆ ಮರಳಲಿದ್ದಾರೆ. ನಾಲ್ವರನ್ನು ಹೊತ್ತ ಗಗನನೌಕೆಯು ಫ್ಲಾರಿಡಾದ ಕಡಲ ತೀರಕ್ಕೆ ಬುಧವಾರ ಬಂದಿಳಿಯುವ ಸಾಧ್ಯತೆಯಿದೆ. 

ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌ 9’ ರಾಕೆಟ್ ಮೂಲಕ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳೆದ ಶುಕ್ರವಾರ ರಾತ್ರಿ 7.03ಕ್ಕೆ ನಭಕ್ಕೆ ಚಿಮ್ಮಿದ್ದ ‘ಡ್ರ್ಯಾಗನ್‌’ ಹೆಸರಿನ ಗಗನನೌಕೆಯನ್ನು ಭಾನುವಾರ ಬೆಳಿಗ್ಗೆ ಐಎಸ್‌ಐಎಸ್‌ಗೆ ಡಾಕಿಂಗ್ (ಜೋಡಣೆ) ಮಾಡಲಾಗಿತ್ತು.

ಡ್ರ್ಯಾಗನ್‌ ಗಗನನೌಕೆಯಲ್ಲಿ ತೆರಳಿದ ನಾಲ್ವರು ಗಗನಯಾನಿಗಳು ಒಬ್ಬೊಬ್ಬರಾಗಿ ಐಎಸ್‌ಎಸ್‌ ಪ್ರವೇಶಿಸಿದರು. ಸುನಿತಾ ಸೇರಿದಂತೆ ಅಲ್ಲಿದ್ದ ಗಗನಯಾನಿಗಳು ಅವರನ್ನು ತಬ್ಬಿಕೊಂಡು ಸ್ವಾಗತಿಸಿದ್ದರು.

‘ಈ ದಿನ ನಿಜಕ್ಕೂ ಅದ್ಭುತವಾದುದು. ನಮ್ಮ ಸ್ನೇಹಿತರು ಬಂದಿರುವುದನ್ನು ನೋಡಲು ತುಂಬಾ ಸಂತಸವಾಗುತ್ತಿದೆ’ ಎಂದು ಸುನಿತಾ ಅವರು ಪ್ರತಿಕ್ರಿಯಿಸಿದ್ದರು. ಐಎಸ್‌ಎಸ್‌ನಲ್ಲಿರುವ ಎಲ್ಲ 11 ಗಗನಯಾನಿಗಳು ಜತೆಯಾಗಿ ಫೋಟೊಗೆ ಪೋಸ್‌ ನೀಡಿದ್ದರು.

ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಕಳೆದ ವರ್ಷ ಜೂನ್‌ 5ರಂದು ಐಎಸ್‌ಎಸ್‌ಗೆ ತೆರಳಿದ್ದ ಸುನಿತಾ ಹಾಗೂ ವಿಲ್ಮೋರ್‌, 9 ದಿನಗಳ ನಂತರ ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.