ADVERTISEMENT

ಯೆಮೆನ್‌ನ ಹೂತಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿ ಹೊಡೆದುರುಳಿಸಿದ ಯುಎಇ

ಏಜೆನ್ಸೀಸ್
Published 24 ಜನವರಿ 2022, 6:58 IST
Last Updated 24 ಜನವರಿ 2022, 6:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಧಾಬಿ: ಯೆಮೆನ್‌ನ ಹೂತಿ ಬಂಡುಕೋರರು ಹಾರಿಸಿದ ಎರಡು ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.

ದಾಳಿಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಖಂಡಾಂತರ ಕ್ಷಿಪಣಿಯ ಅವಶೇಷಗಳು ಅಬುಧಾಬಿಎಮಿರೇಟ್‌ನ ಸುತ್ತಲಿನ ಪ್ರದೇಶದಲ್ಲಿ ಬಿದ್ದಿವೆ ಎಂದು ಪ್ರಕಟಣೆ ತಿಳಿಸಿದೆ.

ಯಾವುದೇ ದಾಳಿ ಭೀತಿಯನ್ನು ಎದುರಿಸಲು ಸಿದ್ಧವಾಗಿದ್ದು, ಎಲ್ಲ ದಾಳಿಗಳಿಂದ ದೇಶವನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಯೆಮೆನ್‌ನ ಹೂತಿ ಬಂಡುಕೋರರು, ಅಬುಧಾಬಿ ಮೇಲೆ ನಡೆಸಿದ ಡ್ರೋನ್ ದಾಳಿಯ ಹೊಣೆ ಹೊತ್ತುಕೊಂಡ ಒಂದು ವಾರದ ಅಂತರದಲ್ಲಿ ಈ ಘಟನೆ ನಡೆದಿದೆ.

ಅಬುಧಾಬಿಯಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂವರು ಮೃತಪಟ್ಟಿದ್ದರು.

ಯುಎಇ, ಹೂತಿ ಬಂಡುಕೋರರ ವಿರುದ್ಧದ ಹೋರಾಟದಲ್ಲಿ ಯೆಮೆನ್ ಸರ್ಕಾರವನ್ನು ಬೆಂಬಲಿಸುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ಭಾಗವಾಗಿದೆ.

ಡ್ರೋನ್ ದಾಳಿಯ ಬೆನ್ನಲ್ಲೇ ಒಕ್ಕೂಟವು ಹೂತಿ ಬಂಡುಕೋರರ ಹಿಡಿತದಲ್ಲಿರುವ ರಾಜಧಾನಿ ಸನಾ ಮೇಲೆ ಪ್ರತಿದಾಳಿ ನಡೆಸಿತ್ತು. ಇದರಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದಾರೆ.

2014ರಲ್ಲಿ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಯೆಮೆನ್‌ನ ಸನಾ ನಗರವನ್ನು ವಶಪಡಿಸಿಕೊಂಡ ಬಳಿಕ ನಾಗರಿಕ ಯುದ್ಧವು ಪ್ರಾರಂಭವಾಗಿದೆ. ಯೆಮೆನ್ ಸರ್ಕಾರವನ್ನು ಬೆಂಬಲಿಸಿ ಸೌದಿ ಅರೇಬಿಯಾ ರಂಗಕ್ಕಿಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.