ADVERTISEMENT

ಕೊರೊನಾ ಹಾವಳಿ ನಡುವೆ ರಕ್ತದ ಕೊರತೆ ಎದುರಿಸುತ್ತಿರುವ ಉಗಾಂಡಾ

ಏಜೆನ್ಸೀಸ್
Published 6 ಅಕ್ಟೋಬರ್ 2020, 5:02 IST
Last Updated 6 ಅಕ್ಟೋಬರ್ 2020, 5:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಂಪಾಲಾ: ಉಗಾಂಡದಲ್ಲಿ ಕೊರೊನಾ ಹರಡುವಿಕೆ ಆರಂಭವಾದಾಗಿನಿಂದ ರಕ್ತದ ಪೂರೈಕೆ ತೀವ್ರವಾಗಿ ಕುಸಿದಿದೆ. ಇದಕ್ಕೆ ಕಾರಣ ರಕ್ತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿರುವುದೇ ಆಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಆಫ್ರಿಕಾ ದೇಶದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡುತ್ತಿದ್ದರು. ಆದರೆ. ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಇದ್ದರಿಂದ ರಕ್ತ ಸಂಗ್ರಹಿಸಬೇಕಾದ ಸರ್ಕಾರಿ ಸಂಸ್ಥೆಗಳು ಗುರಿ ತಲುಪುವಲ್ಲಿ ವಿಫಲವಾಗಿವೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ ಕಂಪಾಲಾದಲ್ಲಿ ನಿರ್ದೇಶಕ ಡಾ.ಎಮ್ಯಾನುಯೆಲ್‌ ಬತಿಬ್ವೆ ಮಾತನಾಡಿ, ‘ರಕ್ತದ ಕೊರತೆಯಿಂದಾಗಿ ಆರ್ಥಿಕ ದುರ್ಬಲರಲ್ಲಿ ಅನೇಕ ಸಾವು–ನೋವುಗಳು ಸಂಭವಿಸುತ್ತಿವೆ’ ಎಂದು ಉಲ್ಲೇಖಿಸಿದ್ದರು. ಜತೆಗೆ, ರಕ್ತದ ಕೊರತೆಯನ್ನು ‘ವಿಪತ್ತು’ ಎಂದೇ ಕರೆದಿದ್ದರು.

ADVERTISEMENT

ರಕ್ತದಾನಿಗಳನ್ನು ಸಜ್ಜುಗೊಳಿಸಲು ಅಧಿಕಾರಿಗಳಿಗೆ ಸಹಾಯ ಮಾಡುವ ಉಗಾಂಡಾ ರೆಡ್‌ಕ್ರಾಸ್‌, ಕೋವಿಡ್‌ ಆತಂಕದ ಸಮಯದಲ್ಲಿ ದಾನಿಗಳನ್ನು ಆಯ್ಕೆ ಮಾಡುವುದು ಸುಲಭವಲ್ಲ ಎಂದು ಹೇಳಿದ್ದಾರೆ.

ಉಗಾಂಡಾದಲ್ಲಿ ಇದುವರೆಗೆ 8,965 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 82 ಮಂದಿ ಮೃತಪಟ್ಟಿದ್ದಾರೆ.

‘ಜನರು ಕೋವಿಡ್‌ನಿಂದಾಗಿ ಒತ್ತಡಕ್ಕೊಳಗಾಗಿದ್ದು, ಉತ್ತಮ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿಲ್ಲ. ಇದರಿಂದ ಜನರಲ್ಲಿ ರಕ್ತದ ಉತ್ಪತ್ತಿ ಪ್ರಮಾಣ ಕಡಿಮೆಯಾಗಿದೆ’ ಎಂದು ಐರೀನ್‌ ನಾಕಾಸಿತಾ ಹೇಳಿದ್ದಾರೆ.

ರೊಮೇನಿಯಾ ಸೇರಿದಂತೆ ಯುರೋಪಿನ ಕೆಲವು ಭಾಗಗಳಲ್ಲಿ ರಕ್ತದ ಕೊರತೆ ಉಂಟಾಗಿರುವ ಕುರಿತು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.