
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ರಷ್ಯಾದೊಂದಿಗಿನ ಯುದ್ಧ ಅಂತ್ಯಗೊಳಿಸುವ ಯೋಜನೆಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್‌ಸ್ಕಿ ಸಹಕರಿಸುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅವರ ನಡವಳಿಕೆಯಿಂದ ತುಸು ನಿರಾಸೆಯಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ನಾವು ಝೆಲೆನ್‌ಸ್ಕಿ ಹಾಗೂ ಪುಟಿನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ ನನಗೆ ಝೆಲೆನ್‌ಸ್ಕಿ ಅವರ ಬಗ್ಗೆ ತುಸು ನಿರಾಸೆಯಾಗಿದೆ. ಅವರು ಕಳುಹಿಸಿದ ಪ್ರಸ್ತಾವನೆಯನ್ನೇ ಓದಿಲ್ಲ’ ಎಂದು ವರದಿಗಾರರೊಂದಿಗೆ ಹೇಳಿದ್ದಾರೆ.
‘ನಮ್ಮ ಪ್ರಸ್ತಾವನೆಯನ್ನು ಅವರ ಜನರು ಅದನ್ನು ಇಷ್ಟಪಡುತ್ತಾರೆ, ಆದರೆ ಅವರು ಅದನ್ನು ಓದಿಲ್ಲ. ರಷ್ಯಾಗೆ ಪ್ರಸ್ತಾವನೆ ಬಗ್ಗೆ ಒಲವಿದೆ. ಆದರೆ ಝೆಲೆನ್‌ಸ್ಕಿ ಅವರಿಗೆ ಅದರ ಬಗ್ಗೆ ಸಹಮತ ಇದೆ ಎನ್ನುವುದು ಖಚಿತವಿಲ್ಲ. ಅಲ್ಲಿನ ಜನರು ಅದನ್ನು ಇಷ್ಟಪಡುತ್ತಾರೆ. ಆದರೆ ಅವರು ಸಿದ್ಧರಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ಝೆಲೆನ್‌ಸ್ಕಿ ಸೇರಿದಂತೆ ಉಕ್ರೇನ್ ಹಾಗೂ ಅಮೆರಿಕ ಅಧಿಕಾರಿಗಳ ನಡುವಿನ ಮಾತುಕತೆಗಳು ಶನಿವಾರ ಸ್ಪಷ್ಟ ಪ್ರಗತಿಯಿಲ್ಲದೆ ಕೊನೆಗೊಂಡವು.
ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಅಮೆರಿಕ ಬರೆದ ಶಾಂತಿ ಪ್ರಸ್ತಾವನೆಗೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸಿದ್ಧರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ರಾಯಭಾರಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರು ಕ್ರೆಮ್ಲಿನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ ಈ ಮಾತುಕತೆಗಳು ನಡೆದವು. ಅಮೆರಿಕದ ಪ್ರಸ್ತಾವನೆಯ ಕೆಲವು ಭಾಗಗಳನ್ನು ರಷ್ಯಾ ತಿರಸ್ಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.