ರಷ್ಯಾ–ಉಕ್ರೇನ್ ಯುದ್ಧ
ಮಾಸ್ಕೊ: ರಷ್ಯಾದ ಸೋಚಿ ಬಳಿಯ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್ ಸೇನೆ ಡ್ರೋನ್ ದಾಳಿ ನಡೆಸಿದ್ದು, ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ರಷ್ಯಾದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಇಂಧನ ತುಂಬಿದ್ದ ಟ್ಯಾಂಕ್‌ಗೆ ಡ್ರೋನ್‌ನ ಅವಶೇಷ ಅಪ್ಪಳಿಸಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ 120ಕ್ಕೂ ಹೆಚ್ಚು ಸಿಬ್ಬಂದಿ ಪ್ರಯತ್ನ ಮುಂದುವರಿಸಿದ್ದಾರೆ ಎಂದು ಸ್ಥಳೀಯ ಗವರ್ನರ್ ವೆನಿಯಾಮಿನ್ ಕೊಂಡ್ರತ್ಯೇವ್ ಹೇಳಿದ್ದಾರೆ. ತೈಲ ಸಂಗ್ರಹಾಗಾರದಿಂದ ಬೆಂಕಿ ಹಾಗೂ ದಟ್ಟ ಹೊಗೆ ಎದ್ದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
ರಷ್ಯಾದ ನಾಗರಿಕ ವಿಮಾನಯಾನ ಸಚಿವಾಲಯವು ಸೋಚಿ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಉತ್ತರ ರಷ್ಯಾದ ವೊರೊನೆಜ್ ಪ್ರಾಂತ್ಯದಲ್ಲಿ ಡ್ರೋನ್ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ.
ಭಾನುವಾರ ರಾತ್ರಿ ಉಕ್ರೇನ್ ಹಾರಿಸಿದ 93 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಉಕ್ರೇನ್‌ನ ವಿವಿಧ ನಗರಗಳನ್ನು ಗುರಿಯಾಗಿಸಿ ರಷ್ಯಾ ಪ್ರತಿ ದಾಳಿ ನಡೆಸಿದೆ. ದಕ್ಷಿಣ ಉಕ್ರೇನ್‌ನ ಮೈಕೊಲೊವ್ ನಗರದ ಜನವಸತಿ ಮೇಲೆ ಡ್ರೋನ್ ಅಪ್ಪಳಿಸಿ ಏಳು ಮಂದಿ ಗಾಯಗೊಂಡಿದ್ದಾರೆ.
ರಷ್ಯಾ ಸೇನೆ 76 ಡ್ರೋನ್‌ಗಳು ಮತ್ತು ಏಳು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉಕ್ರೇನ್‌ನ ವಾಯು ಸೇನೆ ತಿಳಿಸಿದೆ. 60 ಡ್ರೋನ್‌ಗಳು ಮತ್ತು ಒಂದು ಕ್ಷಿಪಣಿಯನ್ನು ಹೊಡೆದುರುಳಿಸಲಾಗಿದ್ದು, 16 ಡ್ರೋನ್‌ಗಳು ಹಾಗೂ ಆರು ಕ್ಷಿಪಣಿಗಳು ವಿವಿಧ ಕಡೆ ಅಪ್ಪಳಿಸಿವೆ ಎಂದಿದೆ.
ಯುದ್ಧ ಕೈದಿಗಳ ವಿನಿಮಯ: ಉಕ್ರೇನ್ ಮತ್ತು ರಷ್ಯಾ 1,200 ಯುದ್ಧ ಕೈದಿಗಳನ್ನು ವಿನಿಮಯ ಮಾಡಲು ಒಪ್ಪಿಕೊಂಡಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ಧಾರೆ. ಇಸ್ತಾಂಬುಲ್‌ನಲ್ಲಿ ನಡೆದ ಮಾತುಕತೆಯ ವೇಳೆ ಈ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದಾರೆ. ಆದರೆ ರಷ್ಯಾ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.