ADVERTISEMENT

ಉಕ್ರೇನ್ ಮೇಲೆ ರಷ್ಯಾದ 'ಆಕ್ರಮಣ' ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ದೂರ

ಪಿಟಿಐ
Published 26 ಫೆಬ್ರುವರಿ 2022, 4:07 IST
Last Updated 26 ಫೆಬ್ರುವರಿ 2022, 4:07 IST
ಭಾರತದ ರಾಯಭಾರಿ ಟಿ.ಎಸ್‌. ತಿರುಮೂರ್ತಿ
ಭಾರತದ ರಾಯಭಾರಿ ಟಿ.ಎಸ್‌. ತಿರುಮೂರ್ತಿ   

ವಿಶ್ವಸಂಸ್ಥೆ:ಉಕ್ರೇನ್‌ ಮೇಲೆ ರಷ್ಯಾ ನಡೆಸಿದ 'ಆಕ್ರಮಣ'ವನ್ನು ಖಂಡಿಸುವ ಹಾಗೂ ಆ ದೇಶದಿಂದ (ಉಕ್ರೇನ್‌ನಿಂದ) ತನ್ನ ಸಂಪೂರ್ಣ ಸೇನೆಯನ್ನು ತಕ್ಷಣವೇ ಬೇಷರತ್‌ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ನಿರ್ಣಯದಿಂದ ಭಾರತ ದೂರ ಉಳಿದಿದೆ.

ಅಮೆರಿಕ ಮತ್ತು ಅಲ್ಬೇನಿಯಾ ನೇತೃತ್ವದಲ್ಲಿ ರಚನೆಯಾದ ಕರಡು ನಿರ್ಣಯದ ಮೇಲೆಯುಎನ್‌ಎಸ್‌ಸಿಯಲ್ಲಿ ಮತ ಚಲಾವಣೆ ನಡೆಯಿತು.

ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದು,ಪೋಲೆಂಡ್‌, ಇಟಲಿ, ಜರ್ಮನಿ, ಎಸ್ಟೋನಿಯಾ, ಲುಕ್ಸಂಬರ್ಗ್ ಮತ್ತು ನ್ಯೂಜಿಲೆಂಡ್‌ ಸೇರಿದಂತೆ 11 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿವೆ.

ADVERTISEMENT

ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ‌, ನಿರ್ಣಯವನ್ನು ನಿರ್ಬಂಧಿಸುವ ತನ್ನ ವಿಟೊ ಅಧಿಕಾರವನ್ನು ಬಳಸಿಕೊಂಡಿದೆ. ಆದರೆ, ಯುಎನ್‌ಎಸ್‌ಸಿ ನಿರ್ಣಯವು ಉಕ್ರೇನ್‌ ಮೇಲೆ ನಡೆಸಿದ ಆಕ್ರಮಣಗಳಿಗಾಗಿ ಜಾಗತಿಕ ವೇದಿಕೆಯಲ್ಲಿ ರಷ್ಯಾದ ಪ್ರತ್ಯೇಕತೆಯನ್ನು ತೋರಿಸುವ ಪ್ರಯತ್ನವಾಗಿದೆ ಎಂದು ಪಾಶ್ಚಾತ್ಯ ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ.

ಭಾರತವು ರಷ್ಯಾದೊಂದಿಗೆ ಬಲವಾದ ರಕ್ಷಣಾ ಸಂಬಂಧ ಹೊಂದಿದೆ. ಹೀಗಾಗಿ, ನಿರ್ಣಯದ ವಿಚಾರವಾಗಿ ಭಾರತದ ನಿಲುವು ಏನು ಎಂಬುದುಎಲ್ಲರ ಗಮನ ಸೆಳೆದಿತ್ತು.

ಯುಎನ್‌ಎಸ್‌ಸಿ ನಿರ್ಣಯದಿಂದ ದೂರ ಉಳಿದಿರುವ ಬಗ್ಗೆವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್‌. ತಿರುಮೂರ್ತಿ ಅವರು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಉಕ್ರೇನ್ ಬಿಕ್ಕಟ್ಟು ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದರು. ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಮತ್ತು ರಾಜತಾಂತ್ರಿಕ ಮಾರ್ಗ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.