ADVERTISEMENT

ಮಿಲಿಟರಿ ದಂಗೆ ನಂತರ ಮ್ಯಾನ್ಮಾರ್‌ನಲ್ಲಿ ಬಡತನ ದ್ವಿಗುಣ: ಯುಎನ್‌ಡಿಪಿ ವರದಿ

ಏಜೆನ್ಸೀಸ್
Published 30 ಏಪ್ರಿಲ್ 2021, 10:35 IST
Last Updated 30 ಏಪ್ರಿಲ್ 2021, 10:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ಯಾಂಕಾಕ್‌: ‘ಮಿಲಿಟರಿ ದಂಗೆ ಹಾಗೂ ರಾಜಕೀಯ ಪ್ರಕ್ಷುಬ್ಧತೆ ಆರಂಭವಾದಾಗಿನಿಂದ ಮ್ಯಾನ್ಮಾರ್‌ನ ಪ್ರಗತಿ ವರ್ಷಗಳಷ್ಟು ಹಿಂದುಳಿದಿದ್ದು, ದೇಶದ ಜನಸಂಖ್ಯೆಯ ಅರ್ಧದಷ್ಟು ಜನ ಬಡತನದಲ್ಲಿ ಜೀವಿಸುವಂತಾಗಿದೆ‘ ಎಂದು ವಿಶ್ವಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(ಯುಎನ್‌ಡಿಪಿ)ದ ವರದಿಯ ಪ್ರಕಾರ, ಮಿಲಿಟರಿ ದಂಗೆ ಮತ್ತು ನಾಗರಿಕರ ಅಸಹಕಾರ ಚಳವಳಿಯ ನಡುವಿನ ಸಂಘರ್ಷದಿಂದಾಗಿ, ದೇಶದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಮುಂದೆ 1.2 ಕೋಟಿ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ದೇಶದಲ್ಲಾಗುತ್ತಿರುವ ಈ ಬದಲಾವಣೆಗಳು ನಗರ ಪ್ರದೇಶದ ಜನರು ಮತ್ತು ಮಹಿಳಾ ಪ್ರಧಾನ ಕುಟುಂಬಗಳ ಮೇಲೆ ತೀವ್ರ ತರಹದ ಪರಿಣಾಮ ಬೀರಲಿದೆ‘ ಎಂದು ಯುಎನ್‌ಡಿಪಿಯ ಮ್ಯಾನ್ಮಾರ್ ವಲಯದ ಅಧಿಕಾರಿ ಕನ್ನಿ ವಿಘ್ನರಾಜ ಅವರು ಆನ್‌ಲೈನ್‌ನಲ್ಲಿ ನಡೆದ ಸಭೆಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಫೆಬ್ರವರಿ 1 ರಿಂದ ಮ್ಯಾನ್ಮಾರ್‌ಲ್ಲಿ ಮಿಲಿಟರಿ ಆಡಳಿತ ಆರಂಭವಾಗಿದೆ.ಸೂ ಕಿ ನೇತೃತ್ವದ ಪ್ರಜಾಪ್ರತಿನಿಧಿ ಸರ್ಕಾರವನ್ನು ತೆಗೆದು, ಸೇನೆ ತನ್ನ ಆಡಳಿತವನ್ನು ಸ್ಥಾಪಿಸಿತು. ಅಂದಿನಿಂದ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ 700 ಮಂದಿ ನಾಗರಿಕರು ಹತ್ಯೆಯಾಗಿದ್ದಾರೆ. 3400 ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.