ADVERTISEMENT

ಅಫ್ಗಾನಿಸ್ತಾನದಲ್ಲಿ ಹಿಂಸಾಚಾರದ ಅಂತ್ಯ ಅಗತ್ಯ: ಭಾರತ

ಯುಎನ್‌ಎಸ್‌ಸಿ ಸಭೆಯ ಸದಸ್ಯ ರಾಷ್ಟ್ರಗಳಿಗೆ ಪರಿಸ್ಥಿತಿಯ ಮನವರಿಕೆ: ತಿರುಮೂರ್ತಿ

ಪಿಟಿಐ
Published 8 ಆಗಸ್ಟ್ 2021, 7:21 IST
Last Updated 8 ಆಗಸ್ಟ್ 2021, 7:21 IST
ಟಿ.ಎಸ್‌.ತಿರುಮೂರ್ತಿ
ಟಿ.ಎಸ್‌.ತಿರುಮೂರ್ತಿ   

ವಿಶ್ವಸಂಸ್ಥೆ: ‘ಯುದ್ಧಪೀಡಿತ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯನ್ನು ವಿಶ್ವಕ್ಕೆ ತಿಳಿಸುವ ಜೊತೆಗೆ, ಅಲ್ಲಿ ಹಿಂಸಾಚಾರ, ದ್ವೇಷದ ಕೃತ್ಯಗಳನ್ನು ಅಂತ್ಯಗೊಳಿಸುವ ಅಗತ್ಯವನ್ನು ಎಲ್ಲ ಸದಸ್ಯ ರಾಷ್ಟ್ರಗಳಿಗೆ ಮನವರಿಕೆ ಮಾಡಲಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್‌ ತಿಂಗಳ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಂಡಿದೆ. ಈ ಸ್ಥಾನ ಅಲಂಕರಿಸಿದ ಒಂದು ವಾರದಲ್ಲಿಯೇ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಮಂಡಳಿಯ ಸಭೆ ನಡೆಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ತನ್ನ ಆಕ್ರಮಣ ಮುಂದುವರಿಸಿದೆಯಲ್ಲದೇ, ಹಲವಾರು ಪ್ರಾಂತ್ಯಗಳನ್ನು ಈಗಾಗಲೇ ತನ್ನ ವಶಕ್ಕೆ ಪಡೆದಿದೆ. ಹೀಗಾಗಿ, ಅಲ್ಲಿನ ಭದ್ರತೆ, ನಾಗರಿಕರ ರಕ್ಷಣೆ ಬಗ್ಗೆ ಮಂಡಳಿಯ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು ಎಂದರು.

ADVERTISEMENT

ಅಫ್ಗಾನಿಸ್ತಾನದ ವಿದ್ಯಮಾನಗಳ ಕುರಿತು ಚರ್ಚೆ ನಡೆಸುವುದು ಮಂಡಳಿಯ ಈ ತಿಂಗಳಿನ ಕಾರ್ಯಕ್ರಮ ಪಟ್ಟಿಯ ಭಾಗವಾಗಿರಲಿಲ್ಲ. ಆದರೆ, ಮಂಡಳಿಯ ತುರ್ತು ಸಭೆ ಕರೆದು, ದೇಶದಲ್ಲಿನ ಸಂಘರ್ಷದಿಂದ ಕೂಡಿದ ಸ್ಥಿತಿ ಕುರಿತು ಚರ್ಚಿಸಬೇಕು ಎಂದು ಅಫ್ಗಾನಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್‌ ಹನೀಫ್‌ ಅತ್ಮರ್‌ ಅವರು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರಲ್ಲಿ ಕೋರಿದ್ದರು.

ಮಂಡಳಿ ಸಭೆಯಲ್ಲಿ ಮಾತನಾಡಿದ, ವಿಶ್ವಸಂಸ್ಥೆಯಲ್ಲಿನ ಅಫ್ಗಾನಿಸ್ತಾನದ ಪ್ರತಿನಿಧಿ ಗುಲಾಂ ಇಸಾಕ್‌ಝೈ ಅವರು, ತಾಲಿಬಾನ್‌ ಉಗ್ರರಿಗೆ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವುದು, ಅವರಿಗಾಗಿ ನಿಧಿ ಸಂಗ್ರಹಣೆ, ಗಾಯಗೊಂಡ ಉಗ್ರರಿಗೆ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿರುವ ಕುರಿತು ಮಂಡಳಿಯ ಗಮನ ಸೆಳೆದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.