ವಾಷಿಂಗ್ಟನ್: ಮುಂದಿನ ದಿನಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸೇನೆಗೆ ಸೇರ್ಪಡೆಗೊಳ್ಳಲು ಅವಕಾಶ ನೀಡುವುದಿಲ್ಲ. ಜತೆಗೆ, ಲಿಂಗ ಪರಿವರ್ತನೆಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಸುಗಮಗೊಳಿಸುವುದನ್ನು ನಿಲ್ಲಿಸುತ್ತೇವೆ ಎಂದು ಅಮೆರಿಕ ಸೇನೆ ಘೋಷಿಸಿದೆ.
ಈ ಕುರಿತು ‘ಎಕ್ಸ್’ನಲ್ಲಿ (ಟ್ವಿಟರ್) ಸರಣಿ ಪೋಸ್ಟ್ ಮಾಡಿರುವ ಅಮೆರಿಕ ಸೇನೆ, ‘ಅಮೆರಿಕ ಸೇನೆಯು ಈ ನಿರ್ಧಾರವು ತಕ್ಷಣವೇ ಜಾರಿಗೆ ಬರುತ್ತದೆ. ಜತೆಗೆ, ಲಿಂಗ ಪರಿವರ್ತನೆಯನ್ನು ಸುಗಮಗೊಳಿಸುವ ಅಥವಾ ದೃಢೀಕರಿಸುವ ಎಲ್ಲಾ ವೈದ್ಯಕೀಯ ವಿಧಾನಗಳನ್ನು ತಕ್ಷಣವೇ ಸ್ಥಗಿತಗೊಳಿಸುತ್ತೇವೆ’ ಎಂದು ತಿಳಿಸಿದೆ.
ಅಮೆರಿಕದ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಷೇಧ ಹೇರುವುದು ಸೇರಿದಂತೆ ಸೇನೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ನಾಲ್ಕು ಕಾರ್ಯನಿರ್ವಾಹಕ ಆದೇಶಗಳಿಗೆ ಸಹಿ ಹಾಕಿರುವುದಾಗಿ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವು ದಿನಗಳ ನಂತರ ಸೇನೆಯಿಂದ ಆದೇಶ ಹೊರಬಿದ್ದಿದೆ.
ಲಿಂಗತ್ವ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಸ್ವಯಂಪ್ರೇರಿತರಾಗಿದ್ದಾರೆ ಮತ್ತು ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದೂ ಸೇನೆ ತಿಳಿಸಿದೆ.
ಬಾಲಕಿಯರು, ಮಹಿಳೆಯರ ಕ್ರೀಡೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವುದನ್ನು ನಿಷೇಧಿಸಿ ಅಮೆರಿಕ ಸರ್ಕಾರ ಫೆಬ್ರುವರಿ 7ರಂದು ಆದೇಶ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.