ADVERTISEMENT

ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾ ಗಗನಯಾತ್ರಿಗಳು

ಮಹತ್ವದ ಸಾಧನೆಗೈದ ‘ಸ್ಪೇಸ್‌ ಎಕ್ಸ್‌’

ಏಜೆನ್ಸೀಸ್
Published 1 ಜೂನ್ 2020, 2:22 IST
Last Updated 1 ಜೂನ್ 2020, 2:22 IST
ಗಗನಯಾತ್ರಿಗಳಾದ ರಾಬರ್ಟ್‌ ಬಾಬ್‌ ಮತ್ತು ಡಗ್ಲಸ್‌ ಹರ್ಲಿ  –ರಾಯಿಟರ್ಸ್‌ ಚಿತ್ರ
ಗಗನಯಾತ್ರಿಗಳಾದ ರಾಬರ್ಟ್‌ ಬಾಬ್‌ ಮತ್ತು ಡಗ್ಲಸ್‌ ಹರ್ಲಿ  –ರಾಯಿಟರ್ಸ್‌ ಚಿತ್ರ   

ವಾಷಿಂಗ್ಟನ್‌(ಪಿಟಿಐ, ಎಎಫ್‌ಪಿ): ವಾಣಿಜ್ಯ ಬಾಹ್ಯಾಕಾಶ ಸಂಚಾರ ಕ್ಷೇತ್ರದಲ್ಲಿ ಮಹತ್ವದ ಯಶಸ್ಸು ಸಾಧಿಸಿರುವ ‘ಸ್ಪೇಸ್‌ ಎಕ್ಸ್‌’ ಕಂಪನಿ ನಾಸಾದ ಇಬ್ಬರು ಗಗನಯಾತ್ರಿಗಳನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ ನಿರ್ಮಿಸಿದ ‘ಫಾಲ್ಕನ್‌–9’ ರಾಕೆಟ್‌ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಈ ಗಗನಯಾತ್ರಿಗಳು ಪಯಣ ಕೈಗೊಂಡಿದ್ದಾರೆ. ಈ ಸಾಧನೆಗೈದ ಮೊದಲ ಖಾಸಗಿ ಕಂಪನಿ ಎನ್ನುವ ಹೆಗ್ಗಳಿಕೆಗೆ ‘ಸ್ಪೆಸ್‌ ಎಕ್ಸ್‌’ ಪಾತ್ರವಾಗಿದೆ.

ಗಗನಯಾತ್ರಿಗಳಾದ ರಾಬರ್ಟ್‌ ಬಾಬ್‌ ಬೆಹ್ನಕೆನ್‌ (49) ಮತ್ತು ಡೌ್‌ಗ್ಲಾಸ್‌ ಹರ್ಲಿ (53) ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದವರು. ಸೇನೆಯಲ್ಲಿ ಪೈಲಟ್‌ಗಳಾಗಿದ್ದ ಈ ಇಬ್ಬರು, 2000ರಲ್ಲಿ ನಾಸಾ ಸೇರಿದ್ದರು. ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸುವ ಮುನ್ನ ಇಬ್ಬರನ್ನು ಎರಡು ವಾರಗಳಿಗೂ ಹೆಚ್ಚು ಕಾಲ ಕ್ವಾರಂಟೈನ್‌ ಮಾಡಲಾಗಿತ್ತು ಮತ್ತು ನಿರಂತರವಾಗಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿತ್ತು.

ADVERTISEMENT

‘ಈ ದೀಪವನ್ನು ಬೆಳಗಿಸೋಣ’ಎಂದು ಹರ್ಲಿ ಅವರು ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಆರಂಭಿಸುವ ಮುನ್ನ ಹೇಳಿದರು.

2011ರ ಬಳಿಕ ಅಮೆರಿಕದ ನೆಲದಲ್ಲಿ ಕೈಗೊಂಡ ಮಹತ್ವದ ಮೊದಲ ಬಾಹ್ಯಾಕಾಶ ಯೋಜನೆ ಇದಾಗಿದೆ.

‘ಕಳೆದ 18 ವರ್ಷಗಳಿಂದ ಕಂಡ ಕನಸು ಈಗ ನನಸಾಗಿದೆ. ನಮ್ಮ ಯೋಜನೆ ಮತ್ತು ಪರಿಶ್ರಮದ ಫಲಿತಾಂಶ ದೊರೆತಿದೆ. ಮಂಗಳನ ಅಂಗಳದಲ್ಲಿ ನಾಗರಿಕತೆ ಆರಂಭಿಸುವುದಕ್ಕೆ ಇದು ಮೊದಲ ಹೆಜ್ಜೆಯಾಗಲಿದೆ’ ಎಂದು ಸ್ಪೇಸ್‌ ಎಕ್ಸ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈ ಕಾರ್ಯಾಚರಣೆಯನ್ನು ಖುದ್ದಾಗಿ ವೀಕ್ಷಿಸಲು ಫ್ಲಾರಿಡಾಗೆ ತೆರಳಿದ್ದರು.

ಇದೊಂದು ವಿಶೇಷ ದಿನ ಎಂದು ಬಣ್ಣಿಸಿದ ಟ್ರಂಪ್‌, ‘ವಾಣಿಜ್ಯ ಬಾಹ್ಯಾಕಾಶ ಉದ್ಯಮಕ್ಕೆ ಅತ್ಯುತ್ತಮ ಭವಿಷ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.