ADVERTISEMENT

ಭಾರತೀಯ ದೂತವಾಸ ಕಚೇರಿ ಮೇಲೆ ವಿಧ್ವಂಸಕ ಕೃತ್ಯಕ್ಕೆ ಯತ್ನ; ಅಮೆರಿಕ ಖಂಡನೆ

ಪಿಟಿಐ
Published 4 ಜುಲೈ 2023, 3:11 IST
Last Updated 4 ಜುಲೈ 2023, 3:11 IST
   

ನ್ಯೂಯಾರ್ಕ್: ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಭಾರತೀಯ ದೂತವಾಸ ಕಚೇರಿ ಮೇಲಿನ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಯತ್ನವನ್ನು ಅಮೆರಿಕ ಬಲವಾಗಿ ಖಂಡಿಸಿದ್ದು, ಈ ಹಿಂಸಾಚಾರವನ್ನು 'ಕ್ರಿಮಿನಲ್ ಅಪರಾಧ' ಎಂದು ಹೇಳಿದೆ.

ಈ ಕುರಿತು ಟ್ವೀಟ್ ಮಾಡಿರುವ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ಭಾರತೀಯ ದೂತವಾಸ ಕಚೇರಿ ಮೇಲಿನ ವಿಧ್ವಂಸಕ ಕೃತ್ಯವನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿ ವಿದೇಶಿ ರಾಜತಾಂತ್ರಿಕರು ಹಾಗೂ ರಾಯಭಾರದ ವಿರುದ್ಧದ ವಿಧ್ವಂಸಕ ಕೃತ್ಯವು ಕ್ರಿಮಿನಲ್ ಅಪರಾಧವಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಏಷ್ಯಾದ ಟಿ.ವಿ ನೆಟ್‌ವರ್ಕ್ ದಿಯಾ ಟಿ.ವಿ ಪ್ರಕಾರ, ಭಾನುವಾರ ಮುಂಜಾನೆ ಖಾಲಿಸ್ತಾನ ಪರ ಪ್ರತಿಭಟನಕಾರರು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ತಕ್ಷಣವೇ ಸ್ಯಾನ್ ಫ್ರಾನ್ಸಿಸ್ಕೊ ಡಿಪಾರ್ಟ್‌ಮೆಂಟ್ ಬೆಂಕಿಯನ್ನು ನಂದಿಸಿದೆ. ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ತಿಳಿಸಿದೆ.

ADVERTISEMENT

ಜುಲೈ 02ರಂದು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿ ಭಾರತೀಯ ದೂತವಾಸ ಕಚೇರಿಗೆ ಬೆಂಕಿ ಹಚ್ಚುವ ಯತ್ನ ಸಂಬಂಧಿಸಿದಂತೆ ವಿಡಿಯೊವನ್ನು ಖಾಲಿಸ್ತಾನ ಬೆಂಬಲಿಗರು ಹಂಚಿದ್ದರು.

ಭಾರತಕ್ಕೆ ಬೇಕಾಗಿದ್ದ ಕೆನಡಾ ಮೂಲದ ಖಾಲಿಸ್ತಾನ ಟೈಗರ್ ಫೋರ್ಸ್ ಉಗ್ರ ಸಂಘಟನೆಯ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್‌ನನ್ನುಕಳೆದ ತಿಂಗಳು ಕೆನಡಾದ ಗುರುದ್ವಾರದ ಹೊರಗಡೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.