ADVERTISEMENT

ಇದು ಇರಾಕ್ ಅಲ್ಲ, ಇರಾನ್‌ಗೆ ಅಂತ್ಯವಿದೆ: ಅಮೆರಿಕ ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್‌

ಏಜೆನ್ಸೀಸ್
Published 2 ಮಾರ್ಚ್ 2026, 23:10 IST
Last Updated 2 ಮಾರ್ಚ್ 2026, 23:10 IST
ಪೀಟ್‌ ಹೆಗ್ಸೆತ್‌
ಪೀಟ್‌ ಹೆಗ್ಸೆತ್‌   

ವಾಷಿಂಗ್ಟನ್‌: ಅಮೆರಿಕ– ಇಸ್ರೇಲ್‌ ಪಡೆಗಳು ಜಂಟಿಯಾಗಿ ಇರಾನ್‌ ಮೇಲೆ ಸೇನಾ ಕಾರ್ಯಾಚರಣೆಯು ಕುರಿತು ಜಾಗತಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆತ್‌ ಅವರು ‘ಇದು ಇರಾಕ್‌ ಅಲ್ಲ, ಇದಕ್ಕೆ ಅಂತ್ಯವಿದೆ’ ಎಂದು ಹೇಳಿಕೆ ನೀಡುವ ಮೂಲಕ ಸಂಘರ್ಷ ಮತ್ತಷ್ಟು ವಿಸ್ತರಣೆಯಾಗುವ ಸುಳಿವು ನೀಡಿದ್ದಾರೆ.

ಶನಿವಾರ ಇರಾನ್‌ ಮೇಲೆ ನಡೆದ ಸೇನಾ ದಾಳಿಯ ಕುರಿತಂತೆ ಅಮೆರಿಕ ಸೇನಾ ಪಡೆಗಳ ಮುಖ್ಯಸ್ಥ ಡಾನ್‌ ಕೇನ್‌ ಜೊತೆಗೆ ಪೀಟ್‌ ಹೆಗ್ಸೆತ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ. 

ಸಂಘರ್ಷ ಆರಂಭಗೊಂಡ ಬಳಿಕ, ಡೊನಾಲ್ಡ್‌ ಟ್ರಂಪ್‌ ಅವರು ಆಯ್ದ ವರದಿಗಾರರಿಗೆ ದೂರವಾಣಿ ಮೂಲಕ ಸಂದರ್ಶನ ನೀಡಿದ್ದಾರೆ. ಇದುವರೆಗೂ ಪತ್ರಕರ್ತರ ಮುಂದೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ, ಹಲವು ‍ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಕಾರ್ಯಾಚರಣೆಯ ಕುರಿತಂತೆ ಎರಡು ವಿಡಿಯೊಗಳನ್ನು ಮಾತ್ರ ಇದುವರೆಗೆ ಬಿಡುಗಡೆಗೊಳಿಸಿದ್ದಾರೆ.

ADVERTISEMENT

‘ಇರಾನ್‌ನ ಕ್ಷಿಪಣಿ ಬೆದರಿಕೆಯನ್ನು ಮಟ್ಟಹಾಕಿದ್ದೇವೆ. ನೌಕಾಪಡೆಯನ್ನು ನಾಶಗೊಳಿಸಿ, ಅಣ್ವಸ್ತ್ರ ನಾಶಗೊಳಿಸುವ ಸ್ಪಷ್ಟವಾದ ವಿನಾಶಕಾರಿ ಹಾಗೂ ನಿಖರ ಗುರಿಯನ್ನು ಹೊಂದಿದ್ದೇವೆ’ ಎಂದು ಪೀಟ್‌ ಹೆಗ್ಸೆತ್‌ ಹೇಳಿದ್ದಾರೆ.

‘ಇದನ್ನು ಆಡಳಿತ ಬದಲಾವಣೆಯ ಯುದ್ಧ ಎಂದು ಕರೆಯುವುದಿಲ್ಲ, ಇದರಿಂದ ಆಡಳಿತವೂ ಖಂಡಿತವಾಗಿಯೂ ಬದಲಾವಣೆಯಾಗಲಿದೆ. ಇದರಿಂದ ಜಗತ್ತಿಗೂ ಕೂಡ ಒಳ್ಳೆಯದಾಗಲಿದೆ’ ಎಂದು ತಿಳಿಸಿದ್ದಾರೆ.

‘ಅವರು ಅಮೆರಿಕದ ವಿರುದ್ಧ ಯುದ್ಧ ಆರಂಭಿಸಿದ್ದರಿಂದ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಮೂಲಕ ಪ್ರತೀಕಾರ ತೆಗೆದುಕೊಳ್ಳಲಾಗಿದೆ’ ಎಂದು ಹೆಗ್ಸೆತ್‌ ವಿವರಿಸಿದ್ದಾರೆ.

ಸಂಘರ್ಷವು ತೀವ್ರ ಸ್ವರೂಪದ ಯುದ್ಧಕ್ಕೆ ತಿರುಗಿದ ಬೆನ್ನಲ್ಲೇ ಈ ಸುದ್ದಿಗೋಷ್ಠಿ ನಡೆಸಲಾಗಿದೆ. ಇರಾನ್‌ ಹಾಗೂ ಇತರೆ ಮಿತ್ರರಾಷ್ಟ್ರಗಳು ಇಸ್ರೇಲ್, ಅರಬ್‌ ರಾಷ್ಟ್ರಗಳಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿವೆ. 

ಇದುವರೆಗೆ ಅಮೆರಿಕದ ನಾಲ್ವರು ಯೋಧರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಟ್ರಂ‍ಪ್‌ ಕೂಡ ಭಾನುವಾರ ಮುನ್ಸೂಚನೆ ನೀಡಿದ್ದಾರೆ.

‘ಅಮೆರಿಕವು ಹೆಚ್ಚುವರಿ ನಷ್ಟವನ್ನು ನಿರೀಕ್ಷಿಸುತ್ತಿದೆ’ ಎಂದು ಕೇನ್‌ ಕೂಡ ಹೇಳಿಕೆ ನೀಡಿದ್ದಾರೆ. ಆ ಮೂಲಕ ಯುದ್ಧದ ಭೀಕರತೆಯನ್ನು ಅಂದಾಜಿಸಿದ್ದಾರೆ.

‘ನಾವು ನಿಮ್ಮೊಂದಿಗೆ ದುಃಖಿಸುತ್ತೇವೆ. ನಾವು ಏಂದೆಂದಿಗೂ ನಿಮ್ಮನ್ನು ಮರೆಯುವುದಿಲ್ಲ’ ಎಂದು ಯುದ್ಧದಲ್ಲಿ ಮಡಿದ ಯೋಧರ ಕುಟುಂಬದ ಸದಸ್ಯರಿಗೆ ಸಾಂತ್ವನ ನೀಡಿದ್ದಾರೆ.

ಪೈಲಟ್‌ಗಳು ಸುರಕ್ಷಿತ: ‘ಅಮೆರಿಕದ ಮಿತ್ರ ರಾಷ್ಟ್ರ ಕುವೈತ್‌ ತಪ್ಪಾಗಿ ಹಾರಿಸಿದ ಕ್ಷಿಪಣಿಯಿಂದ ಪತನಗೊಂಡ ‘ಎಫ್‌–15’ ಯುದ್ಧ ವಿಮಾನದಿಂದ ಆರು ಪೈಲಟ್‌ಗಳು ಸುರಕ್ಷಿತವಾಗಿ ಪಾರಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಅಮೆರಿಕದ ಸೆಂಟ್ರಲ್‌ ಕಮಾಂಡ್‌ ತಿಳಿಸಿದೆ.

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಕಾರಣ, ತಕ್ಷಣವೇ ಯುದ್ಧ ಸ್ಥಗಿತ ಹಾಗೂ ಒಪ್ಪಂದಕ್ಕೆ ಬರುವ ಸಾಧ್ಯತೆಯನ್ನು ಅಮೆರಿಕದ ಅಧಿಕಾರಿಗಳು ತಳ್ಳಿಹಾಕಿದ್ದಾರೆ.

ತನ್ನ ಪರಮಾಣು ಬ್ಲ್ಯಾಕ್‌ಮೇಲ್‌ ಮಹತ್ವಾಕಾಂಕ್ಷೆಗಳಿಗೆ ಗುರಾಣಿಯಾಗಿ ಬಳಸಲು ಇರಾನ್‌ನ ಅತ್ಯಂತ ಪ್ರಬಲವಾದ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ನಿರ್ಮಿಸುತ್ತಿತ್ತು.
– ಪೀಟ್‌ ಹೆಗ್ಸೆತ್‌, ಅಮೆರಿಕ ರಕ್ಷಣಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.