ADVERTISEMENT

ಅಮೆರಿಕ: ಎಚ್‌–1ಬಿ ವೀಸಾ ಶುಲ್ಕ ಒಂದು ಲಕ್ಷ ಡಾಲರ್‌ಗೆ ಹೆಚ್ಚಳ

ಪಿಟಿಐ
Published 20 ಸೆಪ್ಟೆಂಬರ್ 2025, 19:48 IST
Last Updated 20 ಸೆಪ್ಟೆಂಬರ್ 2025, 19:48 IST
ಎಚ್‌1–ಬಿ ವೀಸಾ
ಎಚ್‌1–ಬಿ ವೀಸಾ   

ನ್ಯೂಯಾರ್ಕ್/ವಾಷಿಂಗ್ಟನ್: ವಿವಿಧ ದೇಶಗಳ ಜನರನ್ನು ನೇಮಕ ಮಾಡಿಕೊಳ್ಳುವ ಅಮೆರಿಕದ ಕಂಪನಿ ಗಳು ತಮ್ಮ ಉದ್ಯೋಗಿಗಳಿಗಾಗಿ ಪಡೆಯುವ ಎಚ್‌–1ಬಿ ವೀಸಾ ಅರ್ಜಿಗೆ ಸಂಬಂಧಿಸಿದ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ (ಅಂದಾಜು ₹88 ಲಕ್ಷ) ಹೆಚ್ಚಿಸುವ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.

ಈ ಆದೇಶವು, ಭಾರತೀಯ ಕಾಲಮಾನದಂತೆ ಸೋಮವಾರ ಬೆಳಿಗ್ಗೆ 9.31ರಿಂದ ಜಾರಿಗೆ ಬರಲಿದೆ. 

ಚಾಲ್ತಿಯಲ್ಲಿ ಇರುವವರಿಗೆ ಅನ್ವಯಿಸದು: ‘ಪರಿಷ್ಕೃತ ನಿಯಮವು ಮಾನ್ಯತೆ ಹೊಂದಿದ ಎಚ್‌–1ಬಿ ವೀಸಾ ಹೊಂದಿರುವವರಿಗೆ ಅನ್ವಯ ಆಗುವುದಿಲ್ಲ’ ಎಂದು ಶ್ವೇತಭವನ ಹೇಳಿರುವುದಾಗಿ ‘ಅಕ್ಸಿಯೊಸ್‌’ ಶನಿವಾರ ವರದಿ ಮಾಡಿದೆ.

ADVERTISEMENT

ಹೊಸ ಶುಲ್ಕವು ಈಗಾಗಲೇ ಎಚ್‌–1ಬಿ ವೀಸಾ ಹೊಂದಿರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿಯಲ್ಲಿ ಅದು ತಿಳಿಸಿದೆ.

‘ಇತರ ದೇಶಗಳಿಂದ ಅಮೆರಿಕಕ್ಕೆ ಬರುವ ಜನರು ಅಧಿಕ ಕೌಶಲ ಉಳ್ಳವರಾಗಿರಬೇಕು ಹಾಗೂ ಈ ವೀಸಾ ಪಡೆದು ಬರುವವರಿಂದಾಗಿ ಸ್ಥಳೀಯರು ತಮ್ಮ ಉದ್ಯೋಗ ಕಳೆದುಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಟ್ರಂಪ್ ಆಡಳಿತ ಹೇಳಿದೆ. 

ಟ್ರಂಪ್‌ ಅವರ ಈ ನಡೆಯು,  ಉದ್ಯೋಗ ವೀಸಾ ಪಡೆದು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯರು, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಮೇಲೆ ಭಾರಿ ಪರಿಣಾಮ ಬೀರಲಿದೆ.

‘ಎಚ್‌–1ಬಿ ವೀಸಾ ಸೌಲಭ್ಯದ ಪ್ರಯೋಜನ ಪಡೆಯಲು ಬಯಸುವ ಕಂಪನಿಗಳ ಮೇಲೆ ಅಧಿಕ ವೆಚ್ಚ ಹೇರು ವುದು ಅಗತ್ಯವಾಗಿದೆ. ಈ ಮೂಲಕ, ಅವುಗಳು ಈ ವೀಸಾ ಸೌಲಭ್ಯ ದುರ್ಬಳಕೆ ಮಾಡದಂತೆ ತಡಯಬಹುದಾಗಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ಐ.ಟಿ ಕಂಪನಿಗಳು ಎಚ್‌–1ಬಿ ವೀಸಾ ಸೌಲಭ್ಯವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಂಡಿವೆ. ಇದು, ಕಂಪ್ಯೂಟರ್ ಆಧಾರಿತ ಕ್ಷೇತ್ರಗಳಲ್ಲಿ ದುಡಿಯುವ ಅಮೆರಿಕದ ಪ್ರಜೆಗಳಿಗೆ ಗಣನೀಯ ಹಾನಿ ಉಂಟುಮಾಡಿದೆ.
– ಡೊನಾಲ್ಡ್‌ ಟ್ರಂಪ್, ಅಮೆರಿಕ ಅಧ್ಯಕ್ಷ

ಪ್ರಮುಖ ಅಂಶಗಳು

* 1 ಲಕ್ಷ ಡಾಲರ್‌ ಶುಲ್ಕ ಪಾವತಿಸದವರ ವೀಸಾ ಅರ್ಜಿಗಳನ್ನು ತಡೆ ಹಿಡಿಯುವ ಅಥವಾ ಅವರು ಅಮೆರಿಕ ಪ್ರವೇಶಿಸುವುದನ್ನು ನಿರ್ಬಂಧಿಸುವ ಕುರಿತು ನಿರ್ಧರಿಸುವ ಅಧಿಕಾರವನ್ನು ಆಂತರಿಕ ಭದ್ರತಾ ಕಾರ್ಯದರ್ಶಿಗೆ ನೀಡಿ ಟ್ರಂಪ್‌ ಆದೇಶ

* ವೀಸಾ ಶುಲ್ಕ ಹೆಚ್ಚಿಸಿ ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸುವ ವಿಚಾರವಾಗಿ ಆಂತರಿಕ ಭದ್ರತಾ ಇಲಾಖೆ ಮತ್ತು ವಿದೇಶಾಂಗ ಇಲಾಖೆ ಸಮನ್ವಯದಿಂದ ಕೆಲಸ ಮಾಡಬೇಕು

* ತಾನು ನೇಮಕ ಮಾಡಿಕೊಂಡಿರುವ ಉದ್ಯೋಗಿಯ ವೀಸಾ ಅರ್ಜಿಗೆ ಸಂಬಂಧಿಸಿದ ಶುಲ್ಕವನ್ನು ಉದ್ಯೋಗದಾತ ಕಂಪನಿ ಪಾವತಿ ಮಾಡಿರದಿದ್ದಲ್ಲಿ, ಅಂತಹ ವ್ಯಕ್ತಿಗಳು ಅಮೆರಿಕ ಪ್ರವೇಶಿಸುವುದನ್ನು ಈ ಎರಡು ಇಲಾಖೆಗಳು ನಿರ್ಬಂಧಿಸಬೇಕು. ಸೆಪ್ಟೆಂಬರ್ 21ರ ನಂತರ ಅಮೆರಿಕ ಪ್ರವೇಶಿಸುವ ಅಥವಾ ಪ್ರವೇಶಿಸಲು ಯತ್ನಿಸುವ ವ್ಯಕ್ತಿಗಳಿಗೆ ಈ ನಿರ್ಬಂಧಗಳು ಅನ್ವಯ

* ಮುಂದಿನ ವರ್ಷ ಅಕ್ಟೋಬರ್‌ 1ಕ್ಕಿಂತ ಮೊದಲು ಅಮೆರಿಕದಲ್ಲಿ ಉದ್ಯೋಗ ಕೈಗೊಳ್ಳಲಿರುವ ಹಾಗೂ ತಮ್ಮ ಎಚ್‌1–ಬಿ ವೀಸಾ ಅರ್ಜಿಗೆ ಅನುಮೋದನೆ ಪಡೆದವರು ಈ ಸೌಲಭ್ಯದ ದುರ್ಬಳಕೆ ಮಾಡದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ವಿದೇಶಾಂಗ ಇಲಾಖೆಯು ಸೂಕ್ತ ಮಾರ್ಗದರ್ಶನ ನೀಡಬೇಕು

* ಅಮೆರಿಕದ ರಾಷ್ಟ್ರೀಯ ಭದ್ರತೆ ಅಥವಾ ಅಭಿವೃದ್ಧಿಗೆ ಬೆದರಿಕೆ ಒಡ್ಡದ ಹಾಗೂ ದೇಶದ ಹಿತಾಸಕ್ತಿ ದೃಷ್ಟಿಯಲ್ಲಿಟ್ಟುಕೊಂಡು ನೇಮಕಗೊಂಡಿರುವ ವ್ಯಕ್ತಿಗಳು ಎಚ್‌1–ಬಿ ವೀಸಾ ಪಡೆದಿದ್ದಲ್ಲಿ ಅವರಿಗೆ ಆಂತರಿಕ ಭದ್ರತಾ ಇಲಾಖೆ ವಿಧಿಸುವ ನಿರ್ಬಂಧಗಳಿಂದ ವಿನಾಯಿತಿ ಇರಲಿದೆ

‘ಭಾರತೀಯರ ಕೊಡುಗೆ ಅಗಾಧ: ಅವರಿಗೇ ಅನ್ಯಾಯ’

‘ಎಚ್‌1–ಬಿ ವೀಸಾ ಪಡೆದು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ಅಮೆರಿಕಕ್ಕೆ ನೀಡಿರುವ ಕೊಡುಗೆ ಅನನ್ಯ. ಅದರಲ್ಲೂ, ತೆರಿಗೆ, ಶಾಲಾ–ಕಾಲೇಜುಗಳ ಶುಲ್ಕ, ಸೇವಾ ಶುಲ್ಕವಾಗಿ ಹಣದ ರೂಪದಲ್ಲಿ ನೀಡಿರುವ ಕೊಡುಗೆಯೂ ಅಗಾಧವಾದುದು. ಆದರೆ, ಈಗ ಅವರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಕ್ಯಾಟೊ ಇನ್‌ಸ್ಟಿಟ್ಯೂಟ್‌ನ ವಲಸೆ ಅಧ್ಯಯನ ವಿಭಾಗದ ನಿರ್ದೇಶಕ ಡೇವಿಡ್‌ ಬೀರ್‌ ಹೇಳಿದ್ದಾರೆ.

‘ಅಮೆರಿಕಕ್ಕೆ ಬಂದವರ ಪೈಕಿ ಭಾರತೀಯರು ಶಾಂತಿಪ್ರಿಯರು, ಬುದ್ಧಿವಂತರು. ದೇಶಕ್ಕೆ ಹೆಸರು ತಂದುಕೊಟ್ಟವರು. ಆದರೆ, ಅವರಿಗೆ ನಾವು ಮರಳಿ ಕೊಡುತ್ತಿರುವುದೇನು? ಅವರನ್ನು ರಾಕ್ಷಸರಂತೆ ಚಿತ್ರಿಸಲಾಗುತ್ತಿದೆ ಹಾಗೂ ಅವರಿಗೆ ತಾರತಮ್ಯ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉದ್ಯೋಗಿಗಳಿಗೆ ಸೂಚನೆ
ಎಚ್‌1–ಬಿ ವೀಸಾ ಹೊಂದಿರುವವರು ಹಾಗೂ ಅವರ ಅವಲಂಬಿತರು ಅಮೆರಿಕದಿಂದ ಹೊರಗೆ ಹೋಗಬಾರದು. ತಮ್ಮ ಸ್ವಂತ ಅಥವಾ ಬೇರೆ ದೇಶಗಳಿಗೆ ಹೋಗಿರುವವರು ಸೆಪ್ಟೆಂಬರ್‌ 21ರ ಒಳಗಾಗಿ ಅಮೆರಿಕಕ್ಕೆ ಮರಳಬೇಕು ಎಂದು ಮೈಕ್ರೊಸಾಫ್ಟ್‌ ಕಂಪನಿಯು ಸಂಬಂಧಪಟ್ಟ ಉದ್ಯೋಗಿಗಳಿಗೆ ಇ–ಮೇಲ್‌ ಕಳುಹಿಸಿ, ಸೂಚನೆ ನೀಡಿದೆ.

‘ತಕ್ಷಣವೇ ಅಮೆರಿಕಕ್ಕೆ ಮರಳಿ..’

‘ಉದ್ಯೋಗಿಗಳು ತಕ್ಷಣವೇ ಅಮೆರಿಕ್ಕೆ ಮರಳಬೇಕು ಇಲ್ಲದಿದ್ದರೆ, ನೀವು ತೆರಳಿರುವ ದೇಶಗಳಲ್ಲಿಯೇ ಸಿಕ್ಕಿಹಾಕಿಕೊಳ್ಳುವ ಅಪಾಯ ಕಟ್ಟಿಟ್ಟಬುತ್ತಿ’ ಎಂದು ಅಮೆರಿಕದ ಹಲವು ಕಂಪನಿಗಳು ಹಾಗೂ ವಲಸೆಗೆ ಸಂಬಂಧಿಸಿದ ಅಟಾರ್ನಿಗಳು ಎಚ್ಚರಿಸಿದ್ದಾರೆ.

ಉದ್ಯೋಗ ವೀಸಾ ಮೇಲಿನ ಶುಲ್ಕವನ್ನು ಒಂದು ಲಕ್ಷ ಡಾಲರ್‌ಗೆ ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿರುವ ಬೆನ್ನಲ್ಲೇ ಈ ಎಚ್ಚರಿಕೆಯ ಮಾತುಗಳು ಹೊರಬಿದ್ದಿದ್ದು, ಎಚ್‌1–ಬಿ ವೀಸಾ ಹೊಂದಿರುವವರು ಅಮೆರಿಕದಿಂದ ಹೊರಹೋಗಬಾರದು ಎಂದೂ ಸಲಹೆ ನೀಡಿದ್ದಾರೆ.

‘ವ್ಯವಹಾರ ಸಂಬಂಧಿ ಕೆಲಸ ಅಥವಾ ರಜೆಗಾಗಿ ಅಮೆರಿಕದಿಂದ ಹೊರಗೆ ಹೋಗಿರುವ ಎಚ್1–ಬಿ ವೀಸಾ ಹೊಂದಿರುವವರು ಸೆಪ್ಟೆಂಬರ್ 21ರ ಮಧ್ಯರಾತ್ರಿ ಒಳಗಾಗಿ ಮರಳದಿದ್ದರೆ, ತಾವು ಹೋಗಿರುವ ಸ್ಥಳದಲ್ಲಿಯೇ ಇರಬೇಕಾಗಬಹುದು’ ಎಂದು ನ್ಯೂಯಾರ್ಕ್‌ ಮೂಲದ ವಲಸೆ ಅಟಾರ್ನಿ ಸೈರಸ್ ಮೆಹ್ತಾ ಹೇಳಿದ್ದಾರೆ.‌

‘ಒಂದೆಡೆ, ಟ್ರಂಪ್‌ ಆಡಳಿತ ವಿಧಿಸಿರುವ ಗಡುವು ಮುಗಿಯುತ್ತಿದೆ. ಮತ್ತೊಂದೆಡೆ ಭಾರತದಿಂದ ಅಮೆರಿಕಕ್ಕೆ ನೇರ ವಿಮಾನಗಳು ಇಲ್ಲ. ಹೀಗಾಗಿ, ಭಾರತಕ್ಕೆ ತೆರಳಿರುವ ಎಚ್‌1–ಬಿ ವೀಸಾ ಹೊಂದಿರುವವರಿಗೆ ಸಮಸ್ಯೆ ತಪ್ಪಿದ್ದಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಭಾರತದಲ್ಲಿರುವವರು (ಎಚ್‌1–ಬಿ ವೀಸಾ ಹೊಂದಿರುವವರು) ಸೆಪ್ಟೆಂಬರ್‌ 21ರ ಮಧ್ಯ ರಾತ್ರಿ ಒಳಗಾಗಿ ಕ್ಯಾಲಿಫೋರ್ನಿಯಾ ತಲುಪುವುದಕ್ಕೆ ಈಗಲೂ ಅವಕಾಶ ಇದೆ’ ಎಂದೂ ಅವರು ಹೇಳಿದ್ದಾರೆ.

ಮೋದಿ ದುರ್ಬಲ ಪ್ರಧಾನಿ: ಕಾಂಗ್ರೆಸ್‌ ಟೀಕೆ

ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರವು ಎಚ್‌1–ಬಿ ವೀಸಾ ಅರ್ಜಿಯ ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಳ ಮಾಡಿರುವ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪಕ್ಷ ಶನಿವಾರ ವಾಗ್ದಾಳಿ ನಡೆಸಿದೆ.

‘ಮೋದಿ ದುರ್ಬಲ ಪ್ರಧಾನಿ. ಅವರ ಉದ್ದೇಶಪೂರ್ವಕ ಮೌನ ಹಾಗೂ ತೋರಿಕೆಯ ನಡೆಗಳು ದೇಶಕ್ಕೆ ಹೊರೆಯಾಗಿ ಪರಿಣಮಿಸಿವೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್‌ ಗೊಗೋಯಿ ಟೀಕಿಸಿದ್ದಾರೆ.

‘ಎಚ್‌1–ಬಿ ವೀಸಾ ಶುಲ್ಕ ಹೆಚ್ಚಳದಂತಹ ಕ್ರಮದ ಮೂಲಕ ಅಮೆರಿಕ ಸರ್ಕಾರವು ಭಾರತದ ಪ್ರತಿಭಾವಂತರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘8 ವರ್ಷಗಳ ಹಿಂದೆಯೇ ರಾಹುಲ್‌ ಗಾಂಧಿ ಅವರು ಪ್ರಸ್ತಾಪಿಸಿದ್ದ ವಿಚಾರವನ್ನು ಟ್ರಂಪ್‌ ಕೈಗೊಂಡ ಕ್ರಮವು ಮತ್ತೊಮ್ಮೆ ಸಮರ್ಥಿಸಿದಂತಿದೆ’ ಎಂದು ಪಕ್ಷದ ಮತ್ತೊಬ್ಬ ಮುಖಂಡ ಪವನ್‌ ಖೇರಾ ಹೇಳಿದ್ದಾರೆ.

2017ರಲ್ಲಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ, ಟ್ರಂಪ್‌ ಅವರೊಂದಿಗೆ ನಡೆಸಿದ್ದ ಚರ್ಚೆಯ ವೇಳೆ, ಎಚ್‌1–ಬಿ ವೀಸಾ ವಿಚಾರ ಪ್ರಸ್ತಾಪಗೊಂಡಿರಲಿಲ್ಲ. ಈ ವಿಷಯ ಕುರಿತು ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯು ಆಗ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ವರದಿಯನ್ನು ಖೇರಾ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡು, ಪ್ರಧಾನಿ ಅವರನ್ನು ಟೀಕಿಸಿದ್ದಾರೆ.

ಐಟಿ ಕ್ಷೇತ್ರಕ್ಕೆ ಸಂಕಷ್ಟ

ಎಚ್‌–1ಬಿ ವೀಸಾ ಸೌಲಭ್ಯ ಪಡೆದು ಅಮೆರಿಕದ ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡುವವರ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. 2003 ಹಣಕಾಸು ವರ್ಷದಲ್ಲಿ ಶೇ 32ರಷ್ಟಿದ್ದ ಈ ಪ್ರಮಾಣ ಈಗ ಶೇ 65ಕ್ಕೂ ಅಧಿಕ ಇದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಐ.ಟಿ ಕಂಪನಿಗಳು ಎಚ್‌1–ಬಿ ವೀಸಾ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣ, ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಅಮೆರಿಕದ ಎಂಜಿನಿಯರಿಂಗ್‌ ಪದವೀಧರರು ಸವಾಲು ಎದುರಿಸುವಂತಾಗಿದೆ. ಕಂಪನಿಗಳು ಕಡಿಮೆ ವೇತನ ನೀಡುವ ಮೂಲಕ ವಿದೇಶಿಗರನ್ನು ನೇಮಕ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿದೆ ಎಂದೂ ಆದೇಶದಲ್ಲಿ ಹೇಳಲಾಗಿದೆ.

ಕಂಪ್ಯೂಟರ್‌ ಸೈನ್ಸ್‌ ಹಾಗೂ ಕಂಪ್ಯೂಟರ್‌ ಎಂಜಿನಿಯರಿಂಗ್ ಪದವೀಧರರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಅಮೆರಿಕದ ಕಂಪನಿಗಳು ಅರ್ಹ ಹಾಗೂ ಅಧಿಕ ಕೌಶಲವುಳ್ಳ ಅಮೆರಿಕನ್‌ ಪದವೀಧರರನ್ನು ಕೆಲಸದಿಂದ ತೆಗೆದು, ಎಚ್‌–1ಬಿ ವೀಸಾ ನೀಡಿ, ಸಾವಿರಾರು ಜನ ವಿದೇಶಿಗರನ್ನು ನೇಮಕ ಮಾಡಿಕೊಂಡಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ವೀಸಾ ಶುಲ್ಕ ಹೆಚ್ಚಳ ಮಾಡಿರುವುದು ಐ.ಟಿ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಮೆರಿಕದ ಹಲವು ಸಂಸದರು ಹಾಗೂ ನಾಗರಿಕ ಸಂಘಟನೆಗಳ ಮುಖಂಡರು ಕಳವಳ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವಂತಹ ಉದ್ಯಮಗಳನ್ನು ಕಟ್ಟುವುದಕ್ಕೆ ಇತರ ದೇಶಗಳಿಂದ ಬಂದಿರುವ ಅಧಿಕ ಕೌಶಲ ಹೊಂದಿರುವ ಉದ್ಯೋಗಿಗಳ ಕೊಡುಗೆ ಅಪಾರ. ಈಗ, ಎಚ್1–ಬಿ ವೀಸಾ ಶುಲ್ಕ ಹೆಚ್ಚಿಸಿರುವುದು ವಿವೇಚನಾರಹಿತ ನಡೆ’ ಎಂದು ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ.

‘ಟ್ರಂಪ್‌ ಆಡಳಿತದ ಈ ನಡೆ ಅಮೆರಿಕದ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಕಷ್ಟ ತಂದೊಡ್ಡಬಹುದು’ ಎಂದು ಮಾಜಿ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಸಲಹೆಗಾರರಾಗಿದ್ದ ಅಜಯ್ ಭುಟೋರಿಯಾ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.