ADVERTISEMENT

ಬೈಡನ್‌ ಈಗ ಅಮೆರಿಕ ಅಧ್ಯಕ್ಷ: ಕ್ಯಾಪಿಟಲ್‌ನಲ್ಲಿ ಭಾರಿ ಭದ್ರತೆಯಲ್ಲಿ ಪ್ರಮಾಣ ವಚನ

ಏಜೆನ್ಸೀಸ್
Published 20 ಜನವರಿ 2021, 19:52 IST
Last Updated 20 ಜನವರಿ 2021, 19:52 IST
ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಪ್ರಮಾಣ ವಚನದ ಬಳಿಕ, ಬೈಡನ್‌ ಶುಭಾಶಯ ಹೇಳಿದರು ‍ ಪಿಟಿಐ ಚಿತ್ರ
ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಪ್ರಮಾಣ ವಚನದ ಬಳಿಕ, ಬೈಡನ್‌ ಶುಭಾಶಯ ಹೇಳಿದರು ‍ ಪಿಟಿಐ ಚಿತ್ರ   

ವಾಷಿಂಗ್ಟನ್‌ :ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ದಾಂದಲೆ ನಡೆಸಬಹುದು ಎಂಬ ಭೀತಿಯಿಂದಾಗಿ ಸಂಸತ್‌ ಭವನ ಪ್ರದೇಶವನ್ನು (ಕ್ಯಾಪಿಟಲ್‌) ಭದ್ರತಾ ಸಿಬ್ಬಂದಿ ಭದ್ರಕೋಟೆಯಾಗಿ ಪರಿವರ್ತಿಸಿದ್ದರು. ಐತಿಹಾಸಿಕ ಕಾರ್ಯಕ್ರಮವು ಸರಳವಾಗಿ ನಡೆಯಿತು.

ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್‌ ಅವರು 78 ವರ್ಷದ ಬೈಡನ್‌ಗೆ ಕ್ಯಾಪಿಟಲ್‌ನ ವೆಸ್ಟ್‌ ಫ್ರಂಟ್‌ನಲ್ಲಿ ಪ್ರಮಾಣ ವಚನ ಬೋಧಿಸಿದರು.ಸೇನೆಯ (ನ್ಯಾಷನಲ್ ಗಾರ್ಡ್ಸ್‌) 25 ಸಾವಿರಕ್ಕೂ ಹೆಚ್ಚು ಯೋಧರು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಿದ್ದರು.

1869ರಲ್ಲಿ ಆ್ಯಂಡ್ರ್ಯೂ ಜಾನ್ಸನ್‌ ಅವರು ತಮ್ಮ ಉತ್ತರಾಧಿಕಾರಿಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಅದಾಗ ಬಳಿಕ ಇದೇ ಮೊದಲಿಗೆ ಟ್ರಂಪ್‌ ಅವರು ಅದನ್ನು ಅನುಸರಿಸಿದ್ದಾರೆ.

ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿ ಬೈಡನ್‌ ಅವರು ದಾಖಲೆ ಸೇರಿದ್ದಾರೆ. ಅವರು ತಮ್ಮ ಕುಟುಂಬದ 127 ವರ್ಷ ಹಳೆಯ ಬೈಬಲ್ ಪ್ರತಿಯ ಮೇಲೆ ಎಡಕೈಯನ್ನು ಇರಿಸಿ ಪ್ರಮಾಣವಚನ ಉಚ್ಚರಿಸಿದರು. ಉಪಾಧ್ಯಕ್ಷರಾಗಿ ಮತ್ತು ಏಳು ಬಾರಿ ಸೆನೆಟರ್‌ ಆಗಿದ್ದಾಗಲೂ ಅವರು ಈ ಬೈಬಲ್‌ನ ಮೇಲೆ ಕೈ ಇರಿಸಿಯೇ ಪ್ರಮಾಣವಚನ ಸ್ವೀಕರಿಸಿದ್ದರು.

ಮಾಜಿ ಅಧ್ಯಕ್ಷರಾದ ಬರಾಕ್‌ ಒಬಾಮ, ಜಾರ್ಜ್‌ ಡಬ್ಲ್ಯು. ಬುಷ್‌ ಮತ್ತು ಬಿಲ್‌ ಕ್ಲಿಂಟನ್ ಕಾರ್ಯಕ್ರಮದಲ್ಲಿ ‌ ಹಾಜರಿದ್ದರು.

‘ಪ್ರಜಾಪ್ರಭುತ್ವದ ಗೆಲುವು’

‘ಇಂದು ನಾವು ಒಬ್ಬ ಅಭ್ಯರ್ಥಿಯ ಗೆಲುವನ್ನು ಸಂಭ್ರಮಿಸುತ್ತಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳಿಗೆ ಸಿಕ್ಕಿರುವ ಗೆಲುವನ್ನು ಸಂಭ್ರಮಿಸುತ್ತಿದ್ದೇವೆ’ ಎಂದು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್‌ ಬುಧವಾರ ಹೇಳಿದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು.

***

ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಮಲಾ ಹ್ಯಾರಿಸ್ ಅವರು, ‘ಸೇವೆಗೆ ಸಿದ್ಧ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ: ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಬೈಡನ್ ಜತೆ ಕಲಸ ಮಾಡುವುದನ್ನು ಮತ್ತು ಭಾರತ–ಅಮೆರಿಕ ವ್ಯೂಹಾತ್ಮಕ ಸಹಭಾಗಿತ್ವವನ್ನು ಗಟ್ಟಿಗೊಳಿಸುವುದನ್ನು ಎದುರುನೋಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.