ADVERTISEMENT

ಕೊರೊನಾ ವೈರಸ್‌ ವುಹಾನ್ ಲ್ಯಾಬ್‌ನಿಂದ ಬಂದಿರಬಹುದು: ಅಮೆರಿಕ ಅಧ್ಯಯನ ವರದಿ

ರಾಯಿಟರ್ಸ್
Published 8 ಜೂನ್ 2021, 5:09 IST
Last Updated 8 ಜೂನ್ 2021, 5:09 IST
ಚೀನಾದ ವುಹಾನ್‌ ವೈರಾಣು ಲ್ಯಾಬ್‌ (ಎಎಫ್‌ಪಿ ಚಿತ್ರ)
ಚೀನಾದ ವುಹಾನ್‌ ವೈರಾಣು ಲ್ಯಾಬ್‌ (ಎಎಫ್‌ಪಿ ಚಿತ್ರ)   

ವಾಷಿಂಗ್ಟನ್‌: ‘ಚೀನಾದ ವುಹಾನ್‌ ಲ್ಯಾಬ್‌ನಿಂದ ಕೊರೊನಾ ವೈರಸ್‌ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಊಹೆಯು ಸಮರ್ಥನೀಯ ಮತ್ತು ತನಿಖೆಗೆ ಅರ್ಹವಾಗಿದೆ,‘ ಎಂದು ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯದ ಅಧ್ಯಯನ ಹೇಳಿರುವುದಾಗಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಪ್ರಕಟಿಸಿದೆ.

ಕ್ಯಾಲಿಫೋರ್ನಿಯಾದ ‘ಲಾರೆನ್ಸ್ ಲಿವರ್ಮೋರ್ ರಾಷ್ಟ್ರೀಯ ಪ್ರಯೋಗಾಲಯ’ವು ಈ ಅಧ್ಯಯನವನ್ನು ಮೇ 2020 ರಲ್ಲಿ ಸಿದ್ಧಪಡಿಸಿತ್ತು.

ADVERTISEMENT

‘ಲಾರೆನ್ಸ್ ಲಿವರ್ಮೋರ್‌’ನ ಅಧ್ಯಯನವು ಕೊರೊನಾ ವೈರಸ್‌ನ ವಂಶವಾಹಿ ವಿಶ್ಲೇಷಣೆಯ ಬಗ್ಗೆ ಗಮನ ಸೆಳೆದಿತ್ತು ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ಹೇಳಿದೆ. ಆದರೆ, ‘ವಾಲ್‌ಸ್ಟ್ರೀಟ್‌ ಜರ್ನಲ್‌‘ನ ವರದಿಯ ಕುರಿತು ಪ್ರತಿಕ್ರಿಯಿಸಲು ‘ಲಾರೆನ್ಸ್‌ ಲಿವರ್ಮೋರ್‌‘ ನಿರಾಕರಿಸಿದೆ.

ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರು ವೈರಸ್‌ನ ಉಗಮದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ಕಳೆದ ತಿಂಗಳು ಆದೇಶಿಸಿದ್ದರು.

ವೈರಸ್‌ನ ಉಗಮಕ್ಕೆ ಸಂಬಂಧಿಸಿದಂತೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಎರಡು ಸಂಭವನೀಯ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಪ್ರಯೋಗಾಲಯದಲ್ಲಿ ಸಂಭವಿಸಿದ ಅವಘಡದಿಂದ ಹೊರಹೊಮ್ಮಿದ ವೈರಸ್‌ ಮಾನವರಿಗೆ ಹರಡಿರಬಹುದು ಎಂಬುದು ಒಂದು ಸಾಧ್ಯತೆಯಾದರೆ, ಸೋಂಕಿತ ಪ್ರಾಣಿಯೊಂದಿಗಿನ ಮಾನವ ಸಂಪರ್ಕದಿಂದ ವೈರಸ್‌ ಹರಡಿರಬಹುದು ಎಂಬುದು ಎರಡನೇ ಸಾಧ್ಯತೆ. ಆದರೆ ಅಮೆರಿಕ ಗುಪ್ತಚರ ಸಂಸ್ಥೆಗಳು ಈ ಎರಡೂ ಸಾಧ್ಯತೆಗಳಲ್ಲಿ ಯಾವುದಾದರೂ ಒಂದನ್ನು ದೃಢವಾಗಿ ಪ್ರತಿಪಾದಿಸುವ ನಿರ್ಧಾರಕ್ಕೆ ಬಂದಿಲ್ಲ.

ಕೊರೊನಾ ವೈರಸ್‌ ಪಿಡುಗಾಗಿ ವ್ಯಾಪಿಸುವುದಕ್ಕೂ ಮೊದಲು ವುಹಾನ್‌ನ ಪ್ರಯೋಗಾಲಯದ ಮೂವರು ಸಂಶೋಧಕರು 2019ರ ನವೆಂಬರ್‌ನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ವಿಷಯ ಕಳೆದ ತಿಂಗಳು ಬಹಿರಂಗವಾದ ಅಮೆರಿಕ ಗುಪ್ತಚರ ಇಲಾಖೆ ಮಾಹಿತಿಯಿಂದ ಗೊತ್ತಾಗಿತ್ತು

ಅಮೆರಿಕದ ಈ ಹಿಂದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕೊರೊನಾ ವೈರಸ್‌ ಅನ್ನು ಚೀನಾದ ವೈರಸ್‌ ಎಂದು ಕರೆದಿದ್ದರು. ಜಗತ್ತಿಗೆ ಕೊರೊನಾ ವೈರಸ್‌ ವ್ಯಾಪಿಸಿದ್ದಕ್ಕಾಗಿ ಚೀನಾ ಪರಿಹಾರ ನೀಡಬೇಕು ಎಂದೂ ಆಗ್ರಹಿಸಿದ್ದರು. ವೈರಸ್ ಮೂಲದ ವಿಚಾರವಾಗಿ ಪಾರದರ್ಶಕತೆಯ ಕೊರತೆ ಇದೆ ಎಂದು ಅಮೆರಿಕ ಅಧಿಕಾರಿಗಳು ಈ ವರೆಗೆ ಚೀನಾವನ್ನು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ, ಚೀನಾ ಈ ಆರೋಪಗಳನ್ನು ನಿರಾಕರಿಸುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.