ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಉಕ್ರೇನ್ ಜತೆಗಿನ ಯುದ್ಧವನ್ನು ಕೊನೆಗೊಳಿಸಲು 50 ದಿನಗಳಲ್ಲಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಜತೆ ಓವಲ್ ಕಚೇರಿಯಲ್ಲಿ ಸೋಮವಾರ ನಡೆದ ಮಾತುಕತೆ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.
‘ರಷ್ಯಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 100ರಷ್ಟು ಸುಂಕ ಹಾಗೂ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಲು ಟ್ರಂಪ್ ಬಯಸಿದ್ದಾರೆ’ ಎಂದು ಶ್ವೇತಭವನ ತಿಳಿಸಿದೆ.
ಉಕ್ರೇನ್‌ಗೆ ಪೇಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆ ಮತ್ತು ಇತರ ಕ್ಷಿಪಣಿ ಮಾರಾಟ ಮಾಡುವುದಾಗಿ ಟ್ರಂಪ್ ಹಾಗೂ ರುಟ್ಟೆ ಜಂಟಿಯಾಗಿ ಹೇಳಿಕೆ ನೀಡಿದ್ದಾರೆ.
ರಷ್ಯಾದ ದಾಳಿ ಎದುರಿಸಲು ಉಕ್ರೇನ್‌ಗೆ ಪೇಟ್ರಿಯಟ್ ವಾಯು ರಕ್ಷಣಾ ವ್ಯವಸ್ಥೆಯನ್ನು ಪೂರೈಕೆ ಮಾಡುವುದಾಗಿ ಟ್ರಂಪ್ ಭಾನುವಾರ ಹೇಳಿದ್ದರು. ‘ಪುಟಿನ್ ಒಳ್ಳೆಯ ಮಾತುಗಳನ್ನಾಡುತ್ತಾರೆ. ಆ ಬಳಿಕ ಎಲ್ಲರ ಮೇಲೆ ಬಾಂಬ್ ಹಾಕುತ್ತಾರೆ’ ಎಂದು ರಷ್ಯಾದ ಅಧ್ಯಕ್ಷರನ್ನು ಟೀಕಿಸಿದ್ದರು.
ಕೀವ್‌ಗೆ ಬಂದ ಕೆಲಾಗ್:
ಉಕ್ರೇನ್ ಮತ್ತು ರಷ್ಯಾಕ್ಕೆ ಅಮೆರಿಕ ಅಧ್ಯಕ್ಷರ ವಿಶೇಷ ಪ್ರತಿನಿಧಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಕೀತ್ ಕೆಲಾಗ್ ಅವರು ಸೋಮವಾರ ಕೀವ್‌ಗೆ ಬಂದಿಳಿದರು.
ಟ್ರಂಪ್ ಬ್ರಿಟನ್ ಭೇಟಿ
ಲಂಡನ್: ಡೊನಾಲ್ಡ್ ಟ್ರಂಪ್ ಅವರು ಸೆಪ್ಟೆಂಬರ್ 17ರಿಂದ 19ರವರೆಗೆ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ 2019ರಲ್ಲೂ ಬ್ರಿಟನ್‌ಗೆ ಭೇಟಿ ಕೊಟ್ಟಿದ್ದರು. ಅಮೆರಿಕದ ಯಾವುದೇ ಅಧ್ಯಕ್ಷರನ್ನು ಬ್ರಿಟನ್ ಎರಡು ಸಲ ಆಹ್ವಾನಿಸಿಲ್ಲ.
ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಮತ್ತು ಪತ್ನಿ ರಾಣಿ ಕ್ಯಾಮಿಲಾ ಅವರು ಟ್ರಂಪ್ ಅವರಿಗೆ ಅಧಿಕೃತ ಸ್ವಾಗತ ನೀಡಲಿದ್ದಾರೆ ಎಂದು ಬಕ್ಕಿಂಗ್‌ಹ್ಯಾಂ ಅರಮನೆಯ ಪ್ರಕಟಣೆ ತಿಳಿಸಿದೆ. ಮೂರು ದಿನಗಳ ಭೇಟಿ ವೇಳೆ ಟ್ರಂಪ್ ಜತೆ ಪತ್ನಿ ಮೆಲಾನಿಯಾ ಕೂಡಾ ಇರುವರು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.