ADVERTISEMENT

ಮೇ.21ರಿಂದ ಆಸ್ಟ್ರೇಲಿಯಾದಲ್ಲಿರುವ ಭಾರತೀಯರನ್ನು ಕರೆತರಲಿದೆ ಏರ್ ಇಂಡಿಯಾ ವಿಮಾನ

ಪಿಟಿಐ
Published 13 ಮೇ 2020, 9:55 IST
Last Updated 13 ಮೇ 2020, 9:55 IST
ಏರ್ ಇಂಡಿಯಾ  ವಿಮಾನ
ಏರ್ ಇಂಡಿಯಾ ವಿಮಾನ   

ಕ್ಯಾನ್‌ಬೆರಾ: ಲಾಕ್‍ಡೌನ್‌ನಿಂದಾಗಿಆಸ್ಟ್ರೇಲಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಮೇ.21ರಿಂದ 7 ವಿಶೇಷ ವಿಮಾನ ಸೇವೆ ಆರಂಭಿಸಲಿದೆ ಎಂದು ಕ್ಯಾನ್‌ಬೆರಾದಲ್ಲಿರುವಭಾರತೀಯ ರಾಯಭಾರಕಚೇರಿ ಬುಧವಾರ ಹೇಳಿದೆ.

ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ ವಿಶೇಷ ವಿಮಾನಗಳು ಭಾರತೀಯರನ್ನು ಕರೆತರಲಿವೆ. ಈ ಮಿಷನ್‌ನ ಮೊದಲ ಹಂತದಲ್ಲಿ ಏರ್ ಇಂಡಿಯಾ ವಿಮಾನವು ಮೇ 21ರಿಂದ 28ರವರೆಗೆ ಆಸ್ಟ್ರೇಲಿಯಾದಿಂದ ಭಾರತದ ವಿವಿಧ ನಗರಗಳಿಗೆ ಸೇನೆ ಆರಂಭಿಸಲಿದೆ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ನಿಗದಿತ ಸೀಟುಗಳು ಮಾತ್ರ ಲಭ್ಯವಿದ್ದು, ತುರ್ತಾಗಿ ಭಾರತಕ್ಕೆ ಬರಲಿರುವ ಪ್ರಯಾಣಿಕರಿಗೆ ಆದ್ಯತೆ ನೀಡಲಾಗುವುದು.
ಶಾರ್ಟ್ ಲಿಸ್ಟ್ ಮಾಡಿದ ಪ್ರಯಾಣಿಕರು 24 ಗಂಟೆಗಳೊಳಗೆ ಟಿಕೆಟ್ ಖರೀದಿಸದೇ ಇದ್ದರೆ ಆ ಸೀಟು ಮತ್ತೊಬ್ಬ ಪ್ರಯಾಣಿಕರಿಗೆ ನೀಡಲಾಗುವುದು. ಪ್ರಯಾಣದ ಖರ್ಚನ್ನು ಪ್ರಯಾಣಿಕರೇ ಭರಿಸಬೇಕು. ಶಾರ್ಟ್ ಲಿಸ್ಟ್‌ನಲ್ಲಿರುವ ಪ್ರಯಾಣಿಕರಿಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗುವುದು ಎಂದು ರಾಯಭಾರ ಕಚೇರಿ ಹೇಳಿದೆ.

ADVERTISEMENT

ವಿಮಾನ ಹತ್ತುವ ಮುನ್ನ ಎಲ್ಲ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು ಮತ್ತು ರೋಗ ಲಕ್ಷಣಗಳು ಇಲ್ಲದೇ ಇರುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗುವುದು.

ಭಾರತಕ್ಕೆ ಬಂದ ನಂತರಸರ್ಕಾರದ ಸೂಚನೆಯಂತೆ 14 ದಿನ ಕ್ವಾರಂಟೈನ್‌ನಲ್ಲಿಬೇಕು. 14 ದಿನಗಳ ನಂತರ ಅಗತ್ಯವಿದ್ದರೆ ಕೋವಿಡ್ ಪರೀಕ್ಷೆಗೊಳಪಡಬೇಕು.ಇದರ ಹೊರತಾಗಿ ಪ್ರಯಾಣಿಕರು ಗುರುತಿನ ಕರಾರುಪತ್ರಕ್ಕೆ ಸಹಿಹಾಕಬೇಕು. ನಿರ್ದಿಷ್ಟ ಸಂಸ್ಥೆಗಳು ಹೇಳುವ ಸೂಚನೆಗೆ ಬದ್ಧವಾಗಿದ್ದೇವೆ ಎಂಬುದಕ್ಕಾಗಿ ಈ ಕರಾರುಪತ್ರಕ್ಕೆ ಸಹಿಹಾಕಬೇಕಿದೆ.

ಹೆತ್ತವರ ಆರೋಗ್ಯ ಸರಿ ಇಲ್ಲ. ಆದಷ್ಟು ಬೇಗ ಊರಿಗೆ ಬರಲು ನಾನು ಕಾತರನಾಗಿದ್ದೇನೆ ಎಂದು ಸೀಟು ಖಚಿತವಾಗಲು ಕಾಯುತ್ತಿರುವ ಬ್ರಿಸ್ಬೇನ್‌ನಲ್ಲಿರುವ ಟೆಕಿ ವರುಣ್ ಮಲಿಕ್ ಹೇಳಿದ್ದಾರೆ. ಕೋವಿಡ್-19 ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಮರಳಲು ನೂರರಷ್ಟು ಜನರು ಕಾಯುತ್ತಿದ್ದಾರೆ ಅಂತಾರೆ ಮಲಿಕ್.

ಆಸ್ಟ್ರೇಲಿಯಾದಲ್ಲಿ ಸುಮಾರು 7 ಲಕ್ಷದಷ್ಟು ಭಾರತೀಯರಿದ್ದಾರೆ. ಸುಮಾರು 90,000 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಆಸ್ಟ್ರೇಲಿಯಾದಲ್ಲಿ 6,972 ಮಂದಿಗೆ ಕೊರೊನಾವೈರಸ್ಸೋಂಕು ತಗುಲಿದ್ದು, 98 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.