ADVERTISEMENT

ವೆನಿಜುವೆಲಾದಲ್ಲಿ ಅಮೆರಿಕ ಕೈಗೊಂಡ ಕ್ರಮಗಳು ಅಪಾಯಕಾರಿ: ಗುಟೆರಸ್ ಕಳವಳ

ಏಜೆನ್ಸೀಸ್
Published 4 ಜನವರಿ 2026, 9:27 IST
Last Updated 4 ಜನವರಿ 2026, 9:27 IST
<div class="paragraphs"><p>ಆಂಟೊನಿಯೊ ಗುಟೇರಸ್</p></div>

ಆಂಟೊನಿಯೊ ಗುಟೇರಸ್

   

ವಿಶ್ವಸಂಸ್ಥೆ: ಅಮೆರಿಕ ಹಾಗೂ ವೆನಿಜುವೆಲಾ ನಡುವೆ ಉಲ್ಬಣಿಸಿರುವ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರೆಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವೆನಿಜುವೆಲಾ ರಾಜಧಾನಿ ಕಾರಕಸ್‌ ಮೇಲೆ ಶುಕ್ರವಾರ ತಡರಾತ್ರಿ ವಾಯು ದಾಳಿ ನಡೆಸಿದ್ದ ಅಮೆರಿಕ ಸೇನೆಯು, ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡೂರೊ ಹಾಗೂ ಅವರ ಪತ್ನಿ ಸಿಲಿಯಾ ಪ್ಲೋರ್ಸ್‌ ಅವರನ್ನು ಸೆರೆಹಿಡಿದಿದೆ.

ADVERTISEMENT

ಮಡೂರೊ ಮತ್ತು ಪ್ಲೋರ್ಸ್ ಅವರನ್ನು ನ್ಯೂಯಾರ್ಕ್‌ಗೆ ಕರೆದೊಯ್ಯಲಾಗಿದೆ. ಮಡೂರೊ ಅವರನ್ನು ಸೆರೆಹಿಡಿದಿರುವ ಚಿತ್ರವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.  

'ವೆನೆಜುವೆಲಾದಲ್ಲಿ ಇತ್ತೀಚೆಗೆ ತಲೆದೋರಿರುವ ಉದ್ವಿಗ್ನತೆಯ ಬಗ್ಗೆ ಗುಟೆರಸ್‌ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದು, ಯುಎಸ್‌ ಮಿಲಿಟರಿ ಕಾರ್ಯಾಚರಣೆಯ ಪರಾಕಾಷ್ಠೆಯಾಗಿದ್ದು, ಮತ್ತಷ್ಟು ಅಪಾಯಗಳನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ಆತಂಕಗೊಂಡಿದ್ದಾರೆ' ಎಂಬುದಾಗಿ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್‌ ಡುಜಾರಿಕ್‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

'ವೆನೆಜುವೆಲಾದಲ್ಲಿ ಸದ್ಯದ ಪರಿಸ್ಥಿತಿ ಏನೇ ಇದ್ದರೂ, ಅಮೆರಿಕ ಕೈಗೊಂಡಿರುವ ಕ್ರಮಗಳು ಅಪಾಯಕಾರಿ ನಿದರ್ಶನಗಳಿಗೆ ನಾಂದಿಯಾಗುತ್ತವೆ. ಅಂತರರಾಷ್ಟ್ರೀಯ ಕಾನೂನನ್ನು ಎಲ್ಲರೂ ಗೌರವಿಸುವುದು ಅಗತ್ಯ' ಎಂದು ಗುಟೆರಸ್‌ ಒತ್ತಿ ಹೇಳಿರುವುದಾಗಿ ತಿಳಿಸಿದ್ದಾರೆ.

ಮಾನವ ಹಕ್ಕುಗಳು ಹಾಗೂ ಅಂತರರಾಷ್ಟ್ರೀಯ ಕಾನೂನಿನನ್ವಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಕರೆ ನೀಡಿರುವ ಅವರು, 'ವೆನೆಜುವೆಲಾದ ಜನರ ರಕ್ಷಣೆ ಅಗತ್ಯ' ಎಂದು ಪ್ರತಿಪಾದಿಸಿದ್ದಾರೆ.

ನಾಳೆ ಭದ್ರತಾ ಮಂಡಳಿ ಸಭೆ
ನ್ಯೂಯಾರ್ಕ್‌ನಲ್ಲಿ ತುರ್ತಾಗಿ ಅಧಿವೇಶನ ನಡೆಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ವೆನಿಜುವೆಲಾ ಮನವಿ ಮಾಡಿದೆ. ಅದರಂತೆ, ನಾಳೆ (ಸೋಮವಾರ) ಬೆಳಿಗ್ಗೆ 10ಕ್ಕೆ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.