ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್
ಕೃಪೆ: ರಾಯಿಟರ್ಸ್
ಬೀಜಿಂಗ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು, ಪಾಶ್ಚಾತ್ಯ ರಾಷ್ಟ್ರಗಳ ಒತ್ತಡದ ನಡುವೆಯೂ ಬೀಜಿಂಗ್‌ನಲ್ಲಿ ನಡೆಯುವ ಚೀನಾ ಸೇನಾ ಮೆರವಣಿಗೆಯಲ್ಲಿ ಅಧ್ಯಕ್ಷ ಷಿ ಜಿನ್ ಪಿಂಗ್ ಅವರೊಂದಿಗೆ ಭಾಗವಹಿಸಲಿದ್ದಾರೆ. ಇದರೊಂದಿಗೆ ಈ ಇಬ್ಬರೂ ನಾಯಕರು ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ.
ಮುಂದಿನ ವಾರ ನಡೆಯುವ ಮೆರವಣಿಗೆಯಲ್ಲಿ ಯುರೋಪಿಯನ್ ಒಕ್ಕೂಟದ ಸ್ಲೊವಾಕಿಯಾ ಪ್ರಧಾನಿ ರಾಬರ್ಡ್ ಫಿಕೊ ಸೇರಿದಂತೆ 26 ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ಫಿಕೊ ಅವರನ್ನು ಹೊರತುಪಡಿಸಿ, ಪಾಶ್ಚಾತ್ಯ ರಾಷ್ಟ್ರಗಳ ಯಾವೊಬ್ಬ ನಾಯಕನೂ ಭಾಗಿಯಾಗುವುದಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯ ಇಂದು (ಗುರುವಾರ) ತಿಳಿಸಿದೆ.
ಸೆಪ್ಟೆಂಬರ್ 3ರಂದು ನಡೆಯಲಿರುವ 'ವಿಜಯ ದಿನ' ಮೆರವಣಿಗೆಯಲ್ಲಿ ಚೀನಾದ ಮಿಲಿಟರಿ ಶಕ್ತಿ ಅನಾವರಣಗೊಳ್ಳಲಿದೆ. ಅದಷ್ಟೇ ಅಲ್ಲದೆ, ಈ ಮೂವರು ನಾಯಕರು ಒಂದಾಗುವುದು ಜಾಗತಿಕ ನಿರ್ಬಂಧಗಳಿಂದ ಬಳಲುತ್ತಿರುವ ರಷ್ಯಾ ಮತ್ತು ಉತ್ತರ ಕೊರಿಯಾಗೆ ಒಗ್ಗಟ್ಟು ಪ್ರದರ್ಶನದ ವೇದಿಕೆಯಾಗಲಿದೆ.
ಚೀನಾ ತನ್ನ ಕಾರ್ಯತಂತ್ರದ ಪಾಲುದಾರ ಎಂದು ಪರಿಗಣಿಸಿರುವ ರಷ್ಯಾ, 2022ರಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಾಗಿನಿಂದ ಪಾಶ್ಚಾತ್ಯ ರಾಷ್ಟ್ರಗಳಿಂದ ಹಲವು ನಿರ್ಬಂಧಗಳನ್ನು ಎದುರಿಸುತ್ತಿದೆ. ಆ ದೇಶದ ಆರ್ಥಿಕತೆಯು ಹಿಂಜರಿಕೆಯತ್ತ ಕುಸಿಯುವ ಅಪಾಯದಲ್ಲಿದೆ. ಹಾಗೆಯೇ, ಪುಟಿನ್ ಅವರು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವಾಂಟೆಡ್ ಲಿಸ್ಟ್‌ನಲ್ಲಿದ್ದಾರೆ.
ಚೀನಾದ ಮಿತ್ರರಾಷ್ಟ್ರವಾಗಿರುವ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ 2006ರಂದ ನಿರ್ಬಂಧ ಹೇರಿದೆ. ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿದೆ.
ಕಿಮ್ ಅವರು 2019ರಲ್ಲಿ ಮತ್ತು ಪುಟಿನ್ 2024ರಲ್ಲಿ ಕೊನೆಯ ಸಲ ಚೀನಾಗೆ ಪ್ರವಾಸ ಕೈಗೊಂಡಿದ್ದರು.
2ನೇ ವಿಶ್ವಯುದ್ಧ ಸಂದರ್ಭದಲ್ಲಿ ಜಪಾನ್‌ನ ಶರಣಾಗತಿಯನ್ನು ಗುರುತಿಸುವ 'ವಿಜಯ ದಿನ' ಮೆರವಣಿಗೆಯಲ್ಲಿ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ, ಇರಾನ್ ಅಧ್ಯಕ್ಷ ಮಸೌದ್ ಪೆಝಷ್ಕಿಯಾನ್, ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ಸೆರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಹಾಗೂ ದಕ್ಷಿಣ ಕೊರಿಯಾ ಸಂಸತ್ತಿನ ಸ್ಪೀಕರ್ ವೂ ವಾನ್–ಶಿಕ್ ಅವರೂ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.