ADVERTISEMENT

ನನ್ನ ಮಧ್ಯಸ್ಥಿಕೆಯಿಂದ ಭಾರತ–ಪಾಕ್ ಪರಮಾಣು ಯುದ್ಧ ತಪ್ಪಿತು: ಡೊನಾಲ್ಡ್‌ ಟ್ರಂಪ್

ಪಿಟಿಐ
Published 23 ಜುಲೈ 2025, 5:42 IST
Last Updated 23 ಜುಲೈ 2025, 5:42 IST
   

ನ್ಯೂಯಾರ್ಕ್‌/ವಾಷಿಂಗ್ಟನ್‌: ‘ಭಾರತ ಮತ್ತು ಪಾಕಿಸ್ತಾನ ನಡುವೆ ಇತ್ತೀಚೆಗೆ ನಡೆದಿದ್ದ ಸೇನಾ ಸಂಘರ್ಷವನ್ನು ನಾನೇ ನಿಲ್ಲಿಸಿದ್ದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಪುನರುಚ್ಚರಿಸಿದರು. ಅಲ್ಲದೆ ಈ ಸಂಘರ್ಷದಲ್ಲಿ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದೂ ಅವರು ಇನ್ನೊಮ್ಮೆ ಹೇಳಿದರು.

ಶ್ವೇತಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ– ಪಾಕ್‌ ನಡುವಿನ ಸೇನಾ ಸಂಘರ್ಷವನ್ನು ನಿಲ್ಲಿಸದಿದ್ದರೆ ಅದು ಬಹುಷಃ ಪರಮಾಣು ಯುದ್ಧದಲ್ಲಿ ಅಂತ್ಯವಾಗುತ್ತಿತ್ತು’ ಎಂದು ತಿಳಿಸಿದರು.

‘ಅವರು ಒಂದರ ಹಿಂದೆ ಒಂದರಂತೆ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದರು. ಈ ವೇಳೆ ಅವರೊಂದಿಗೆ ನಾನು ದೂರವಾಣಿ ಮೂಲಕ ಮಾತನಾಡಿದೆ. ಇದನ್ನು ಹೀಗೇ ಮುಂದುವರಿಸಿದರೆ ನಿಮ್ಮೊಂದಿಗೆ ಯಾವುದೇ ವ್ಯಾಪಾರ ನಡೆಸುವುದಿಲ್ಲ. ಅದು ನಿಮಗೆ ಮಾರಕವಾಗುತ್ತದೆ ಎಂಬುದಾಗಿ ಎಚ್ಚರಿಸಿದ್ದೆ’ ಎಂದು ಟ್ರಂಪ್ ಹೇಳಿದರು.

ADVERTISEMENT

‘ಅಣ್ವಸ್ತ್ರಗಳನ್ನು ಹೊಂದಿರುವ ಈ ಎರಡೂ ಶಕ್ತಿಶಾಲಿ ದೇಶಗಳ ನಡುವಿನ ಸಂಘರ್ಷ ನಿಲ್ಲಿಸದಿದ್ದರೆ, ಆ ಅಸ್ತ್ರಗಳು ಬಳಕೆಯಾಗುವ ಸಾಧ್ಯತೆಯಿತ್ತು. ಹಾಗಾಗಿದ್ದರೆ ಪರಿಣಾಮ ಏನಾಗುತ್ತಿತ್ತು ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿರಲಿಲ್ಲ. ಅಂಥ ಸ್ಥಿತಿ ಎದುರಾಗದಂತೆ ನಾನು ತಡೆದಿದ್ದೇನೆ’ ಎಂದು ಅವರು ತಿಳಿಸಿದರು.

‘ಇದೇ ಅಲ್ಲದೆ, ಕಾಂಗೊ ಗಣರಾಜ್ಯ ಮತ್ತು ರುವಾಂಡ ನಡುವಿನ ಯುದ್ಧವನ್ನೂ ನಾವು ನಿಲ್ಲಿಸಿದ್ದೇವೆ. ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಹೊಂದುವ ಸಾಮರ್ಥ್ಯವನ್ನು ತಡೆದಿದ್ದೇವೆ. ಕೊಸೊವೊ ಮತ್ತು ಸರ್ಬಿಯಾ ನಡುವಿನ ಸಂಘರ್ಷವನ್ನೂ ನಿಲ್ಲಿಸಿದ್ದೇವೆ’ ಎಂದು ಟ್ರಂಪ್‌ ಪ್ರತಿಪಾದಿಸಿದರು.

‘ಇಷ್ಟೆಲ್ಲ ಸಂಘರ್ಷಗಳನ್ನು ಮಾಜಿ ಅಧ್ಯಕ್ಷ ಜೋ ಬೈಡನ್‌ ನಿಲ್ಲಿಸುತ್ತಿದ್ದರು ಎಂದು ನೀವು ಭಾವಿಸುತ್ತೀರಾ? ನಾನಂತೂ ಹಾಗೆ ಭಾವಿಸುವುದಿಲ್ಲ. ಅವರು ಆ ದೇಶಗಳ ಬಗ್ಗೆ ಎಂದಾದರೂ ಕೇಳಿದ್ದಾರಾ?’ ಎಂದು ಅವರು ಪ್ರಶ್ನಿಸಿದರು.

5 ಯುದ್ಧವಿಮಾನ ನಾಶ
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಐದು ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ಹೇಳಿದ್ದರು. ಎರಡೂ ದೇಶಗಳು ಸೇರಿ ಒಟ್ಟು ಐದು ಯುದ್ಧವಿಮಾನಗಳು ನಾಶವಾಗಿವೆಯೇ? ಅಥವಾ ಯಾವ ದೇಶವು ಮತ್ತೊಂದು ದೇಶದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬುದನ್ನು ಟ್ರಂಪ್‌ ಅವರು ನಿರ್ದಿಷ್ಟವಾಗಿ ಹೇಳಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.