ADVERTISEMENT

ಭಾರತ ನಕ್ಷೆಯಿಂದ ಜಮ್ಮು-ಕಾಶ್ಮೀರ, ಲಡಾಖ್ ಪ್ರತ್ಯೇಕಿಸಿದ ಡಬ್ಲ್ಯುಎಚ್‌ಒ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2021, 10:19 IST
Last Updated 11 ಜನವರಿ 2021, 10:19 IST
   

ನವದೆಹಲಿ: ಬಣ್ಣಗಳ ಮೂಲಕ ದೇಶಗಳನ್ನು ಸೂಚಿಸುವ ನಕ್ಷೆಯಲ್ಲಿ ಭಾರತದಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಭೂಪ್ರದೇಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತ್ಯೇಕಿಸಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಅಂಕಿಅಂಶಗಳಿಗೆ ಸಂಬಂಧಪಟ್ಟಂತೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಈ ಎಡವಟ್ಟು ಮಾಡಿದ್ದು, ಅನೇಕ ಭಾರತೀಯರನ್ನು ಕೆರಳಿಸಿದೆ.

ಹಾಗಿದ್ದರೂ ವಿಶ್ವಸಂಸ್ಥೆಯು ನಿಗದಿಪಡಿಸಿದ ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ಸ್ಪಷ್ಟನೆಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ADVERTISEMENT

ನಕ್ಷೆಯಲ್ಲಿ ಭಾರತವನ್ನು ನೇವಿ ಬ್ಲ್ಯೂ ಬಣ್ಣದಲ್ಲಿ ತೋರಿಸುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಪ್ರತ್ಯೇಕ ಭೂಪ್ರದೇಶವಾಗಿ ಬೂದು ಬಣ್ಣದಲ್ಲಿ ಗುರುತಿಸಲಾಗಿದೆ.

ಇಲ್ಲಿ ಆಸಕ್ತಿದಾಯಕ ಸಂಗತಿಯೆಂದರೆ ಭಾರತ ಹಾಗೂ ಚೀನಾ ನಡುವಣ ವಿವಾದಿತ ಗಡಿ ಪ್ರದೇಶವಾದ ಅಕ್ಸಾಯ್ ಚಿನ್ ಭೂಪ್ರದೇಶವನ್ನು ಬೂದು ಬಣ್ಣದೊಂದಿಗೆ ನೀಲಿ ಪಟ್ಟಿಗಳಿಂದ ಗುರುತಿಸಲಾಗಿದೆ. ಇಲ್ಲಿ ಚೀನಾವನ್ನು ನೀಲಿ ಬಣ್ಣದೊಂದಿಗೆ ಗುರುತಿಸಿದೆ ಎಂಬುದು ಗಮನಾರ್ಹವೆನಿಸುತ್ತದೆ.

ಕೋವಿಡ್-19 ಹೋರಾಟದಲ್ಲಿ ಭಾರತಕ್ಕೆ ಧನ್ಯವಾದ ಹೇಳುವ ಬದಲು ಭಾರತವನ್ನು ನೋಯಿಸುವ ಉದ್ದೇಶಪೂರ್ವಕ ಪ್ರಯತ್ನಕ್ಕೆ ಅನಿವಾಸಿ ಭಾರತೀಯರಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕ್ಷಮೆಯಾಚಿಸಬೇಕೆಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ.

ಕೆಲವು ಸಮಯಗಳ ಹಿಂದೆಯಷ್ಟೇ ಪಾಕಿಸ್ತಾನ ಹಾಗೂ ನೇಪಾಳ ರಾಷ್ಟ್ರಗಳು ಬಿಡುಗಡೆ ಮಾಡಿದ ನಕ್ಷೆಯಲ್ಲಿ ಭಾರತದ ಭೂಪ್ರದೇಶವನ್ನು ತನ್ನ ತೆಕ್ಕೆಗೆ ಸೇರಿಸುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.