ADVERTISEMENT

ಲಷ್ಕರ್ ನಾಯಕ ಹಫೀಜ್ ಸಯೀದ್ ಸಹಚರ ಪಾಕಿಸ್ತಾನದಲ್ಲಿ ಹತ್ಯೆ: ಯಾರು ಈ ಅಬು ಕ್ವತಲ್?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2025, 11:17 IST
Last Updated 16 ಮಾರ್ಚ್ 2025, 11:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಪ್ರಮುಖ ನಾಯಕ ಹಾಗೂ ಮೋಸ್ಟ್‌ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಫೈಸಲ್‌ ನದೀಮ್‌ ಅಲಿಯಾಸ್‌ ಅಬು ಕ್ವತಲ್‌, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಝೇಲಂ ಜಿಲ್ಲೆಯ ದಿನಾ ಪ್ರದೇಶದಲ್ಲಿ ಶನಿವಾರ ರಾತ್ರಿ ಹತ್ಯೆಯಾಗಿದ್ದಾನೆ. ಈ ಬಗ್ಗೆ 'ಇಂಡಿಯಾ ಟುಡೇ' ವರದಿ ಮಾಡಿದೆ.

ಕ್ವತಲ್‌ ರಕ್ಷಣೆಯ ಹೊಣೆಯನ್ನು ಪಾಕಿಸ್ತಾನ ಸೇನೆಯೇ ಹೊತ್ತಿತ್ತು. ಎಲ್‌ಇಟಿಯೂ ಹೆಚ್ಚುವರಿ ಭದ್ರತೆ ಒದಗಿಸಿತ್ತು. ಆದಾಗ್ಯೂ, ಆತನ ಮೇಲೆ ಶನಿವಾರ ರಾತ್ರಿ 7ರ ಸುಮಾರಿಗೆ ಅಪರಿಚಿತರು ದಾಳಿ ಮಾಡಿದ್ದಾರೆ. ಅವರು, 15–20 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಕ್ವತಲ್‌, ಲಷ್ಕರ್‌–ಎ–ತಯಬಾ ಸಂಸ್ಥಾಪಕ ಹಾಗೂ 2008ರ ನವೆಂಬರ್‌ 26ರಂದು ಮುಂಬೈ ಮೇಲೆ ನಡೆದ ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌ನ ಸಂಬಂಧಿ ಹಾಗೂ ಸಹಚರ. ಆತನನ್ನು ಸಂಘಟನೆಯ ಮುಖ್ಯ ಕಾರ್ಯಾಚರಣಾ ಕಮಾಂಡರ್‌ ಆಗಿ ನೇಮಿಸಿದ್ದ ಸಯೀದ್‌, ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸಲು ಆದೇಶಿಸಿದ್ದ.

ಲಷ್ಕರ್‌–ಎ–ತಯಬಾ ಸಂಸ್ಥಾಪಕ ಹಾಗೂ ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಹಫೀಜ್‌ ಸಯೀದ್‌

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡಾಂಗ್ರಿಯಲ್ಲಿ 2023ರ ಜನವರಿಯ 1ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕ್ವತಲ್‌ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ. ಆ ದಿನ ಉಗ್ರರು ಏಕಾಏಕಿ ನಡೆಸಿದ ಗುಂಡಿನ ಈ ದಾಳಿಯಲ್ಲಿ 7 ನಾಗರಿಕರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದರು.

ಸಂಘಟನೆಗೆ ಉಗ್ರರ ಸೇರ್ಪಡೆ ಹಾಗೂ ಭಾರತದ ಗಡಿಯುದ್ದಕ್ಕೂ ನಿಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ವತಲ್‌, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ, ಅದರಲ್ಲೂ ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿ ಮೇಲೆ ದಾಳಿ ಸಂಘಟಿಸುತ್ತಿದ್ದ.

2002–03ರಲ್ಲಿ ಭಾರತದ ಗಡಿ ಪ್ರವೇಶಿಸಿದ್ದ ಕ್ವತಲ್‌ಗೆ, ಅಲಿ, ಹಬೀಬುಲ್ಲಾ, ನೌಮನ್‌, ಮೊಹಮ್ಮದ್‌ ಕ್ವಾಸಿಂ ಎಂಬಿತ್ಯಾದಿ ಹೆಸರುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.