ADVERTISEMENT

ಖಮೇನಿ ಸಾವನ್ನುಮಹಿಳೆಯರು ಸಂಭ್ರಮಿಸಿದ್ದು 79ರ ಬಳಿಕದ ಈ ಕ್ರೌರ್ಯಗಳಿಗಾಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮಾರ್ಚ್ 2026, 14:11 IST
Last Updated 3 ಮಾರ್ಚ್ 2026, 14:11 IST
Venugopala K.
   Venugopala K.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಖಮೇನಿ ಹತರಾಗಿದ್ದಾರೆ. ಈ ಹತ್ಯೆಯನ್ನು ಇರಾನ್‌ನ ಕೆಲವು ನಾಗರಿಕರು ಖಂಡಿಸಿ, ಪ್ರತೀಕಾರದ ಮಾತುಗಳನ್ನಾಡಿದ್ದಾರೆ. ಆದರೆ, ಹಲವು ಮಹಿಳೆಯರು ಬೀದಿಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇರಾನಿಗೆ ಈಗ ಸ್ವಾತಂತ್ರ್ಯ ಸಿಕ್ಕಿತು ಎಂಬಂತೆ ಜಯಘೋಷ ಮೊಳಗಿಸಿದ್ದಾರೆ. ಬೀದಿಗಳಲ್ಲಿ ಖಮೇನಿ ಚಿತ್ರಗಳನ್ನು ಸುಟ್ಟು ತಮ್ಮ ದಶಕಗಳ ಅಜ್ಞಾತವಾಸಕ್ಕೆ ಬಿಡುಗಡೆ ಎಂಬಂತೆ ಜೋರು ದನಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

ಹಾಗಾದರೆ, ಖಮೇನಿ ಆಡಳಿತದಲ್ಲಿ ಇರಾನ್‌ನಲ್ಲಿ ಅಂತದ್ದೇನಿತ್ತು? ಮಹಿಳೆಯರು, ಯುವತಿಯರು ಅವರ ಮೇಲೆ ಅಷ್ಟು ಆಕ್ರೋಶ ಗೊಳ್ಳಲು ಕಾರಣವೇನು? ಅವರ ಸಾವನ್ನು ಸಂಭ್ರಮಿಸಲು ಅಂತದ್ದೇನು ವಿಷಯವಿದೆ? ಎಂದು ಹುಡುಕುತ್ತಾ ಹೋದರೆ ನಮ್ಮ ಗಮನಕ್ಕೆ ಬರುವುದೇ ಅಲ್ಲಿ 1979ರಿಂದ, ಅಂದರೆ ಖಮೇನಿ ಆಡಳಿತ ಶುರುವಾದಾಗಿನಿಂದ ಇರುವ ಕಠಿಣ ಷರಿಯಾ ಕಾನೂನು.

ಆ ಕಾನೂನು ಹೇಗಿತ್ತು? ಮಹಿಳೆಯರ ಸ್ಥಿತಿ ಏನಾಗಿದೆ ಎಂಬುದರ ಬಗ್ಗೆ ತಿಳಿಯುವ ಮೊದಲು ಅಮೆರಿಕದಿಂದ ಅಲ್ಲಿಗೆ ಹೋದಾಗ ತಾನು ಅನುಭವಿಸಿದ ನರಕಯಾತನೆ ಬಗ್ಗೆ ಇರಾನ್ ಮೂಲದವರೇ ಆದ ನಟಯೊಬ್ಬರು ವಿವರಿಸಿರುವುದನ್ನು ನೋಡಬಹುದಾಗಿದೆ.. .

ADVERTISEMENT

ಮಹಿಳೆಯರು ಒಂದು ಕ್ಷಣವೂ ಆರಾಮಾಗಿ ಇರುವಂತಿಲ್ಲ

ಟಿಕ್‌ಟಾಕ್ ಮತ್ತು ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೊ ಕ್ಲಿಪ್‌ನಲ್ಲಿ, ಇರಾನ್ ಮೂಲದ ಅಮೇರಿಕನ್ ನಟಿ ಕಮ್ ಕಂಟೆಂಟ್ ಕ್ರಿಯೇಟರ್ ಒಬ್ಬರು 2023ರ ಆಸುಪಾಸಿನಲ್ಲಿ ಇರಾನ್‌ಗೆ ಭೇಟಿ ನೀಡಿದ ಅನುಭವವನ್ನು ವಿವರಿಸಿದ್ದಾರೆ. ಎರಡು ವಾರಗಳ ಕಾಲ ತಾನು ಅಲ್ಲಿ ಅನುಭವಿಸಿದ ಸಂಕಷ್ಟವನ್ನು ವಿವರಿಸಿದ್ದಾರೆ. ಅದು ನಿರಂತರ ಆತಂಕ ಮತ್ತು ಒತ್ತಡದಿಂದ ಕೂಡಿದ ವಾತಾವರಣವಾಗಿತ್ತು ಎಂದು ಅವರು ಹೇಳಿದ್ದಾರೆ.

ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್‌, ಹೊರಹೋಗಲು ಇರುವ ನಿರ್ಬಂಧಗಳು, ನೈತಿಕ ಪೊಲೀಸರ ಕಾಟ, ಆರ್ಥಿಕ ಸಂಕಷ್ಟ ಮತ್ತು ನಿರಂತರ ಪರಿಶೀಲನೆ ಸೇರಿದಂತೆ ತಾವು ಅನುಭವಿಸಿದ, ಅಲ್ಲಿನ ಮಹಿಳೆಯರಿಗಿರುವ ನಿರ್ಬಂಧಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇರಾನ್‌ನಲ್ಲಿ ಮಹಿಳೆಯರು ಒಂದು ಕ್ಷಣವೂ ತಮಗೆ ಇಷ್ಟ ಬಂದಹಾಗೆ ಇರಲು ಸಾಧ್ಯವಿರಲಿಲ್ಲ. ಇರಾನಿಗೆ ಹೆಜ್ಜೆ ಇಟ್ಟಾಗಿನಿಂದ ನನಗೆ ಆತಂಕ ಕಾಡುತ್ತಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲಿಗ ತೆರಳಿದ್ದೆ. ಪ್ರವಾಸದುದ್ದಕ್ಕೂ ನನಗೆ ಅನಾನುಕೂಲತೆಯೇ ಎದುರಾಯಿತು.. ಮಹಿಳೆಯರು ನಿರ್ಬಂಧಗಳ ಕುರಿತಾದ ನಿರಂತರ ಪ್ರಕಟಣೆಗಳು, ನಿಯಮಗಳ ಕಠಿಣ ಜಾರಿ ಮತ್ತು ಸದಾ ಮೇಲ್ವಿಚಾರಣೆ ನಡೆಸುವ ನೈತಿಕ ಪೊಲೀಸರ ನಡವಳಿಕೆ ನಿಜಕ್ಕೂ ಉಸಿರುಗಟ್ಟಿಸುವ ಮತ್ತು ಒತ್ತಡದಿಂದ ಕೂಡಿದ ವಾತಾವರಣ ಸೃಷ್ಟಿಸಿತ್ತು ಎಂದಿದ್ಧಾರೆ.

ಮಹಿಳೆಯರು ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂಬ ಕಠಿಣ ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರು ನಿತ್ಯ ಡ್ರೆಸ್ ಕೋಡ್ ಮತ್ತು ನಡವಳಿಕೆಯಲ್ಲಿ ಅಲ್ಲಿನ ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ತಪ್ಪದೇ ಪಾಲಿಸಬೇಕಿತ್ತು ಎಂದಿರುವ ಅವರು, ಖಾಸಗಿ ಜೀವನದ ಮೇಲೆ ಈ ನಿರ್ಬಂಧಗಳ ಪರಿಣಾಮವನ್ನು ವಿವರಿಸಿದ್ದಾರೆ.

ಮಹಿಳೆಯರು ಸಾರ್ವಜನಿಕವಾಗಿ ನೃತ್ಯ ಮಾಡುವಂತಿಲ್ಲ, ಹಾಡು ಹಾಡುವಂತಿಲ್ಲ ಮತ್ತು ಪುರುಷರ ಜೊತೆ ಮಿಶ್ರ ಕೂಟಗಳಲ್ಲಿ ಭಾಗವಹಿಸುವಂತಿಲ್ಲ. ಆದರೆ, ಗುಟ್ಟಾಗಿ ಮಹಿಳೆಯರು ಮತ್ತು ಪುರುಷರು ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಗುಪ್ತವಾಗಿ ಹಾಡುಗಾರಿಕೆ, ನೃತ್ಯ ಮತ್ತು ಸಣ್ಣ ಪಾರ್ಟಿಗಳು ಅಧಿಕಾರಿಗಳ ಕಣ್ಣುತಪ್ಪಿಸಿ ನಡೆಯುತ್ತಿದ್ದವು ಎಂದು ತಿಳಿಸಿದ್ದಾರೆ.‌

ದೈನಂದಿನ ಜೀವನದಲ್ಲಿ ಸಾಮಾಜಿಕ ನಿಯಂತ್ರಣದ ಜೊತೆಗೆ ಆರ್ಥಿಕ ಒತ್ತಡವನ್ನು ಸಹ ಉಲ್ಲೇಖಿಸಿರುವ ಅವರು, ಕೆಲಸಕ್ಕೆ ಹೋಗಲು ಪತಿಯ ಅನುಮತಿ ಪಡೆಯಬೇಕು, ತಮಗೆ ಇಷ್ಟವಾದ ಕೆಲಸಕ್ಕೆ ತೆರಳಲು ನಿರ್ಬಂಧ ಸೇರಿದಂತೆ ಅಲ್ಲಿನ ದಬ್ಬಾಳಿಕೆ ಕುರಿತಂತೆ ಬೆಳಕು ಚೆಲ್ಲಿದ್ದಾರೆ.

2022ರಲ್ಲಿ ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದಾಗ ಮಹ್ಸಾ ಅಮಿನಿ ಎಂಬ ಯುವತಿ ಮೃತಪಟ್ಟ ಬಳಿಕ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಇದು ಇರಾನ್‌ನಲ್ಲಿ ಜಾರಿಯಲ್ಲಿರುವ ಕಠಿಣ ಪದ್ಧತಿಗಳು ಮತ್ತು ಮಹಿಳಾ ಹಕ್ಕುಗಳ ದಮನದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು.

ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಇರಾನ್‌ನಲ್ಲಿ, ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸಬೇಕು. ಅವರ ಕೂದಲು ಮತ್ತು ದೇಹವನ್ನು ಮುಚ್ಚಿಕೊಳ್ಳಬೇಕು ಎಂದು ಕಠಿಣ ಕಾನೂನುಗಳು ಹೇಳುತ್ತವೆ. ಇದನ್ನು ಪಾಲಿಸದಿದ್ದರೆ ದಂಡ, ದಂಡ ಜೊತೆಗೆ ಅಧಿಕಾರಿಗಳಿಂದ ಚಿತ್ರಹಿಂಸೆ ಅನುಭವಿಸಬೇಕಾಗುತ್ತದೆ. ಮಹಿಳೆಯರು ಗಮನಾರ್ಹ ಕಾನೂನು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಉದ್ಯೋಗಕ್ಕೆ ತೆರಳಲು ಪತಿಯ ಅನುಮತಿಯ ಅಗತ್ಯವಿರುತ್ತದೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ರಕ್ಷಣೆಯ ಕೊರತೆ ಎದ್ದು ಕಾಣುತ್ತದೆ.

ಹಿಜಾಬ್ ಕಡ್ಡಾಯ: ಮಹಿಳೆಯರು ತಮ್ಮ ಕೂದಲು ಮತ್ತು ದೇಹವನ್ನು ಸಾರ್ವಜನಿಕವಾಗಿ ಮುಚ್ಚಿಕೊಳ್ಳಬೇಕು. ಈ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲು ಹಿಜಾಬ್ ಗಾರ್ಡ್‌ಗಳು ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲಾಗುತ್ತದೆ.

ಪ್ರಯಾಣ ಮತ್ತು ಕಾನೂನು ನಿರ್ಬಂಧಗಳು: ವಿವಾಹಿತ ಮಹಿಳೆಯರು ಪಾಸ್‌ಪೋರ್ಟ್ ಪಡೆಯಲು ಮತ್ತು ದೇಶದ ಹೊರಗೆ ಪ್ರಯಾಣಿಸಲು ತಮ್ಮ ಗಂಡನಿಂದ ಅನುಮತಿ ಪಡೆಯಬೇಕು.

ಉದ್ಯೋಗ ಅಡೆತಡೆಗಳು: ಹೆಂಡತಿಯರು ಕುಟುಂಬ ಹಿತಾಸಕ್ತಿಗೆ ವಿರುದ್ಧವೆಂದು ಪರಿಗಣಿಸಲಾದ ಕೆಲಸಗಳಿಗೆ ಸೇರುವುದನ್ನು ತಡೆಯಲು ನಾಗರಿಕ ಸಂಹಿತೆಗಳು ಗಂಡಂದಿರಿಗೆ ಅಧಿಕಾರ ನೀಡುತ್ತವೆ. ನೇಮಕಾತಿಯಲ್ಲಿ ಅಥವಾ ಸಮಾನ ವೇತನಕ್ಕಾಗಿ ಲಿಂಗ ತಾರತಮ್ಯದ ವಿರುದ್ಧ ಯಾವುದೇ ಕಾನೂನುಗಳಿಲ್ಲ.

ಕೌಟುಂಬಿಕ ಕಾನೂನು: ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ವಿಚ್ಛೇದನ, ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದಲ್ಲಿ ಸೀಮಿತ ಹಕ್ಕುಗಳಿವೆ.

ಜಾರಿ: ಸರ್ಕಾರ ನಿಯೋಜಿಸಿದ ಪಡೆಗಳು ಮತ್ತು ಹಿಜಾಬ್ ಗಾರ್ಡ್‌ಗಳು ಡ್ರೆಸ್ ಕೋಡ್‌ಗಳನ್ನು ಜಾರಿಗೊಳಿಸುತ್ತವೆ. ಉದ್ಯಮ ವಲಯದಲ್ಲಿ ನಿಯಮಗಳನ್ನು ಜಾರಿಗೊಳಿಸದಿದ್ದರೆ ದಂಡ ತೆರಬೇಕಾಗುತ್ತದೆ.

ಇರಾನ್ ಕೌಟುಂಬಿಕ ಕಾನೂನಿನ ಪ್ರಮುಖ ಅಂಶಗಳು

ಮದುವೆ: ಇರಾನ್‌ನಲ್ಲಿ ಹುಡುಗಿಯರ ಮದುವೆಯ ವಯಸ್ಸು 13 ವರ್ಷವಾಗಿದ್ದು, ಹುಡುಗರಿಗೆ 15 ವರ್ಷವಾಗಿರಬೇಕು. ಆದರೆ, ಹುಡುಗಿಯರು 9 ವರ್ಷದವರಿದ್ದಾಗಲೇ ಪೋಷಕರ ಅನುಮತಿ ಪಡೆದು ವಿವಾಹವಾಗಬಹುದಾಗಿದೆ. ಇದನ್ನು ತಾತ್ಕಾಲಿಕ ವಿವಾಹ ಎಂದು ಗುರುತಿಸಲಾಗಿದ್ದು, ಕಾನೂನಿನ ಮಾನ್ಯತೆ ಇದೆ.

ವಿಚ್ಛೇದನ: ಪುರುಷರಿಗೆ ವಿಚ್ಛೇದನಕ್ಕೆ ಏಕಪಕ್ಷೀಯ ಹಕ್ಕಿದೆ. ಮಹಿಳೆಯರು ನಿರ್ದಿಷ್ಟ, ನಿರ್ಬಂಧಿತ ಪರಿಸ್ಥಿತಿಗಳಲ್ಲಿ (ಉದಾ., ಜೀವನಾಂಶ ಪಾವತಿಸದಿರುವುದು, ನಿಂದನೆ) ಅಥವಾ ಮದುವೆ ಒಪ್ಪಂದದಲ್ಲಿ ನಿಗದಿಪಡಿಸಿದರೆ ಮಾತ್ರ ವಿಚ್ಛೇದನವನ್ನು ಪಡೆಯಬಹುದಾಗಿದೆ.

ಕ್ಕಳ ಪಾಲನೆ: ಚಿಕ್ಕ ವಯಸ್ಸಿನಲ್ಲಿ ಮಕ್ಳಳ ಪಾಲನೆಯ ಹೊಣೆಯನ್ನು ತಾಯಿಗೆ ನೀಡಲಾಗುತ್ತದೆ. ಆದರೆ, ತಂದೆ ಅಂತಿಮ ಪಾಲನೆ ಹಕ್ಕುಗಳನ್ನು ಹೊಂದಿರುತ್ತಾರೆ. ವಿಶೇಷವಾಗಿ ಮಕ್ಕಳು ವಯಸ್ಸಾದಂತೆ ಷರಿಯಾ ತತ್ವಗಳಿಂದ ನಿಯಂತ್ರಿಸಲ್ಪಡುತ್ತಾರೆ. ಅಲ್ಲಿ ಪುರುಷ ಉತ್ತರಾಧಿಕಾರಿಗಳು ಸಾಮಾನ್ಯವಾಗಿ ಮಹಿಳಾ ಉತ್ತರಾಧಿಕಾರಿಗಳಿಗಿಂತ ಹೆಚ್ಚಿನ ಪಾಲನ್ನು ಪಡೆಯುತ್ತಾರೆ.

ವಿದೇಶಿ ವಿವಾಹ: ಇರಾನಿನ ಮಹಿಳೆಯರನ್ನು ಮದುವೆಯಾಗುವ ವಿದೇಶಿಯರು ಮದುವೆಯನ್ನು ನೋಂದಾಯಿಸಿಕೊಳ್ಳಬೇಕು. ಆದರೆ ಗಂಡ ಸ್ವಯಂಚಾಲಿತವಾಗಿ ಪೌರತ್ವವನ್ನು ಪಡೆಯುವುದಿಲ್ಲ.

ಇಷ್ಟೆಲ್ಲ, ಕಠಿಣ ಕಾನೂನುಗಳ ನಡುವೆ ಇರಾನ್‌ನಲ್ಲಿ ಮಹಿಳೆಯರು ಅಕ್ಷರಶಃ ಪಂಜರದ ಗಿಳಿಯಾಗಿದ್ದರು ಎನ್ನುತ್ತವೆ ವರದಿಗಳು. ಹೀಗಾಗಿಯೇ, ಖಮೇನಿ ಹತ್ಯೆ ಬಳಿಕ ಹಲವರು ಸಂಭ್ರಮಾಚರಣೆ ಮಾಡಿ ತಮ್ಮ ನೋವುಗಳಿಗೆ ಅಂತ್ಯ ಕಾಲ ಬಂದಿದೆ ಎಂದು ಸಂತಸ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.