ನ್ಯೂಯಾರ್ಕ್: ಜಗತ್ತಿಗೆ ಜಾಗತಿಕ ಕಾರ್ಯಪಡೆಯ ಅಗತ್ಯವಿದೆ ಮತ್ತು ಅನಿಶ್ಚಿತತೆಯ ನಡುವೆಯೂ ಹೊಸ ವಾಣಿಜ್ಯ ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ನಡುವೆ ‘ಅಬ್ಸರ್‌ವರ್ ರಿಸರ್ಚ್ ಫೌಂಡೇಶನ್’ (ಒಆರ್‌ಎಫ್) ಸಭೆಯಲ್ಲಿ ಮಾತನಾಡಿದ ಅವರು, ‘ಅನಿಶ್ಚಿತತೆ ಮಧ್ಯೆಯೂ ವಾಣಿಜ್ಯ ವ್ಯಾಪಾರವು ತನ್ನ ಮಾರ್ಗವನ್ನು ತಾನೇ ಹುಡುಕಿಕೊಂಡು ಸಾಗುತ್ತದೆ’ ಎಂದು ಆಶಾವಾದ ವ್ಯಕ್ತಪಡಿಸಿದರು.
ಭಾರತವು ವ್ಯಾಪಾರ ಮತ್ತು ಪಾಲುದಾರಿಕೆಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಲ್ಯಾಟಿನ್ ಅಮೆರಿಕ ಮತ್ತು ಕೆರೀಬಿಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿದೆ ಎಂದು ತಿಳಿಸಿದರು.
ದೊಡ್ಡ ರಾಷ್ಟ್ರಗಳು ‘ಕ್ಷೋಭೆಯ ವಾತಾವರಣ’ವನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಸ್ವಾವಲಂಬಿಯಾಗಲು ಸಾಮರ್ಥ್ಯ ವೃದ್ಧಿ ಅವಶ್ಯಕ ಎಂದು ಹೇಳಿದರು.
ಹಲವು ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಮಧ್ಯೆಯೇ ಎಸ್.ಜೈಶಂಕರ್ ಅವರು ಸರಣಿ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರನ್ನು ಭೇಟಿಯಾಗಿ ಭೌಗೋಳಿಕ ರಾಜಕೀಯ ಬೆಳವಣಿಗೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷೆ ಅನ್ನಾಲೆನಾ ಬೇರ್ಬಾಕ್ ಅವರೊಂದಿಗೂ ಮಾತುಕತೆ ನಡೆಸಿದರು. ಸೌದಿ ಅರೇಬಿಯಾ ಮತ್ತು ಅಲ್ಗೇರಿಯಾದ ವಿದೇಶಾಂಗ ಸಚಿವರಾದ ಫೈಸಲ್ ಬಿನ್ ಫರ್ಹಾನ್ ಮತ್ತು ಅಹ್ಮದ್ ಅತ್ತಾಫ್ ಅವರೊಂದಿಗೂ ಪ್ರತ್ಯೇಕವಾಗಿ ಸಂವಾದ ನಡೆಸಿದರು.
ಭಯೋತ್ಪಾದನೆಗೆ ಕುಮ್ಮಕ್ಕು: ಒಪ್ಪಿಕೊಂಡ ಪಾಕ್
ವಿಶ್ವಸಂಸ್ಥೆ: ಸಾಮಾನ್ಯಸಭೆಯ ಅಧಿವೇಶನದಲ್ಲಿ ಭಯೋತ್ಪಾದನೆ ವಿರುದ್ಧ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
‘ಜೈಶಂಕರ್ ಅವರು ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಿರಲಿಲ್ಲ. ಆದರೂ ಅವರ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ಪಾಕಿಸ್ತಾನವು ಗಡಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ಒಪ್ಪಿಕೊಂಡಿದೆ’ ಎಂದು ಹೇಳಿದೆ.
‘ಪ್ರಮುಖ ಅಂತರರಾಷ್ಟ್ರೀಯ ಭಯೋತ್ಪಾದಕ ಕೃತ್ಯಗಳ ಹಿಂದೆ ಇರುವುದು ಒಂದೇ ದೇಶ. ಅದು ಭಯೋತ್ಪಾದನೆಯ ಕೇಂದ್ರ ಬಿಂದು’ ಎಂದು ಜೈಶಂಕರ್ ಅವರು ಶನಿವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನದ ಪ್ರತಿನಿಧಿಯೊಬ್ಬರು ‘ಭಾರತವು ದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿದೆ’ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.