ADVERTISEMENT

ವಿಶ್ವ ತಂಬಾಕು ರಹಿತ ದಿನ| ತಂಬಾಕು ಉದ್ದಿಮೆಗಳ ಪರಿಣಾಮ ವಿನಾಶಕಾರಿ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 31 ಮೇ 2022, 12:42 IST
Last Updated 31 ಮೇ 2022, 12:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಿನೀವಾ: ವಿಶ್ವದಲ್ಲಿರುವ ಬೃಹತ್‌ ತಂಬಾಕು ಉತ್ಪನ್ನಗಳ ಕಂಪನಿಗಳಿಂದ ಪರಿಸರಕ್ಕೆ ಭಾರಿ ಹಾನಿಯುಂಟಾಗುತ್ತಿದ್ದು, ಇದು ಅತ್ಯಂತ ವಿನಾಶಕಾರಿಯೂ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕಳವಳ ವ್ಯಕ್ತಪಡಿಸಿದೆ.

‘ಪರಿಸರಕ್ಕೆ ಹಾನಿ ಮಾಡುವ ಇತರ ಅಂಶಗಳಿಗೆ ಹೋಲಿಸಿದರೆ, ವಿಶ್ವದಲ್ಲಿ ತಂಬಾಕು ಉದ್ದಿಮೆಗಳೇ ಹೆಚ್ಚು ಮಾಲಿನ್ಯಕಾರಕಗಳು ಎಂಬುದು ತಿಳಿದುಬರುತ್ತದೆ. ಅಪಾಯಕಾರಿ ತ್ಯಾಜ್ಯಗಳ ರಾಶಿಗಳ ಸೃಷ್ಟಿಯಿಂದ ಹಿಡಿದು ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಪರಿಣಾಮಗಳಿಗೆ ಈ ಉದ್ದಿಮೆಗಳು ಕಾರಣವಾಗಿವೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಹೇಳಿದೆ.

‘ವಿಶ್ವ ತಂಬಾಕು ರಹಿತ ದಿನ’ದ ಹಿನ್ನೆಲೆಯಲ್ಲಿ ಡಬ್ಲ್ಯುಎಚ್‌ಒ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಪರಿಸರಕ್ಕೆ ಆಗುತ್ತಿರುವ ಹಾನಿಗೆ ತಂಬಾಕು ಉದ್ದಿಮೆಗಳನ್ನೇ ಹೊಣೆ ಮಾಡಬೇಕು ಹಾಗೂ ಅವುಗಳಿಂದಾಗುವ ಮಾಲಿನ್ಯವನ್ನು ತಡೆಯಲು ತಗಲುವ ವೆಚ್ಚವನ್ನು ಸಹ ಈ ಉದ್ದಿಮೆಗಳಿಂದಲೇ ವಸೂಲಿ ಮಾಡಬೇಕು ಎಂದು ಡಬ್ಲ್ಯುಎಚ್‌ಒ ಪ್ರತಿಪಾದಿಸಿದೆ.

‘ತಂಬಾಕು ಉತ್ಪನ್ನಗಳಿಂದ ಅರಣ್ಯ ನಾಶವಾಗುತ್ತಿದೆ. ತಂಬಾಕು ಉದ್ದಿಮೆಗಳು ಬಡ ರಾಷ್ಟ್ರಗಳಲ್ಲಿ ಕೃಷಿ ಭೂಮಿ ಹಾಗೂ ನೀರನ್ನು ಅನುಪಯುಕ್ತವನ್ನಾಗಿ ಮಾಡುತ್ತಿವೆ’ ಎಂದು ಡಬ್ಲ್ಯುಎಚ್‌ಒದ ನಿರ್ದೇಶಕ (ಆರೋಗ್ಯಕರ ಕ್ರಮಗಳಿಗೆ ಪ್ರೋತ್ಸಾಹ ವಿಭಾಗ) ರುಡಿಗರ್ ಕ್ರೆಚ್‌ ಹೇಳಿದ್ದಾರೆ.

‘ಈ ಉದ್ದಿಮೆಗಳಿಂದಾಗಿ ಪ್ಲಾಸ್ಟಿಕ್‌ ಹಾಗೂ ರಾಸಾಯನಿಕ ತ್ಯಾಜ್ಯಗಳು ಪರಿಸರವನ್ನು ಸೇರುತ್ತಿದ್ದರೆ, ನಾವು ಉಸಿರಾಡುವ ಗಾಳಿಯನ್ನು ಲಕ್ಷ ಟನ್‌ ಪ್ರಮಾಣದಷ್ಟು ಇಂಗಾಲದ ಡೈಆಕ್ಸೈಡ್‌ ಸೇರುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.