ಜಿಂಬಾಬ್ವೆಯ ಹ್ವಾಂಗೆ ರಾಷ್ಟ್ರೀಯ ಉದ್ಯಾನದಲ್ಲಿ ನೀರಿನ ಹುಡುಕಾಟದಲ್ಲಿ ಆನೆಗಳ ಹಿಂಡು
ರಾಯಿಟರ್ಸ್ ಚಿತ್ರ
ಹರಾರೆ: ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಬೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರು ಆಹಾರವಿಲ್ಲದೆ ತತ್ತರಿಸಿದ್ದಾರೆ. ಜನರ ಹಸಿವು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಹತ್ಯೆಗೈದು, ಜನರಿಗೆ ಉಣಬಡಿಸಲು ನಿರ್ಧರಿಸಲಾಗಿದೆ ಎಂದು ಜಿಂಬಾಬ್ವೆಯ ವನ್ಯಜೀವಿ ಪ್ರಾಧಿಕಾರದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಳೆ ಮಾರುತಗಳ ನಿರ್ಧರಿಸುವ ಎಲ್–ನಿನೊ ಪರಿಣಾಮವಾಗಿ ಆಫ್ರಿಕಾ ಖಂಡದ ದಕ್ಷಿಣ ಭಾಗದಲ್ಲಿ ತೀವ್ರ ಬರಗಾಲ ಸೃಷ್ಟಿಯಾಗಿದೆ. ಇದರಿಂದಾಗಿ ಸುಮಾರು ಏಳು ಕೋಟಿ ಜನ ಆಹಾರ ಸಿಗದೆ ಹಸಿವಿನಿಂದ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.
‘ದೇಶದಾದ್ಯಂತ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಈ ಕಾರ್ಯವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಬರಗಾಲ ಎದುರಿಸುತ್ತಿರುವ ಪ್ರದೇಶಗಳ ಜನರಿಗೆ ಆನೆಯ ಮಾಂಸವನ್ನು ಹಂಚಲಾಗುವುದು’ ಎಂದು ಜಿಂಬಾಬ್ವೆ ಉದ್ಯಾನಗಳು ಮತ್ತು ವನ್ಯಜೀವಿ ಪ್ರಾಧಿಕಾರದ ವಕ್ತಾರ ಟಿನಾಶೆ ಫರಾವೊ ತಿಳಿಸಿದ್ದಾರೆ.
1988ರ ನಂತರ ಇದೇ ಮೊದಲ ಬಾರಿಗೆ ಜಿಂಬಾಬ್ವೆ ಆನೆಗಳನ್ನು ಕೊಲ್ಲಲು ನಿರ್ಧರಿಸಿದೆ. ಹ್ವಾಂಗೆ, ಎಂಬೈರ್, ಶೊಲೊಟ್ಶೊ ಹಾಗೂ ಷಿರೆಡ್ಜಿ ಜಿಲ್ಲೆಯಲ್ಲಿರುವ ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಜಿಂಬಾಬ್ವೆ ಪಕ್ಕದ ನಮೀಬಿಯಾದಲ್ಲಿ ಕಳೆದ ತಿಂಗಳು ಇದೇ ರೀತಿಯ ನಿರ್ಧಾರ ಕೈಗೊಂಡ ಪರಿಣಾಮ 83 ಆನೆಗಳನ್ನು ಕೊಂದು, ಅವುಗಳ ಮಾಂಸವನ್ನು ಬರ ಪೀಡಿತ ಪ್ರದೇಶಗಳ ಜನರಿಗೆ ಹಂಚಲಾಗಿತ್ತು.
ಆಫ್ರಿಕಾ ಖಂಡದ ದಕ್ಷಿಣ ಭಾಗದ ಜಿಂಬಾಬ್ವೆ, ಝಾಂಬಿಯಾ, ಬೋತ್ಸ್‌ವಾನಾ, ಅಂಗೋಲಾ ಹಾಗೂ ನಮೀಬಿಯಾ ರಾಷ್ಟ್ರಗಳಲ್ಲಿನ ಅಭಯಾರಣ್ಯಗಳಲ್ಲಿ ಸುಮಾರು 2 ಲಕ್ಷ ಆನೆಗಳಿವೆ ಎಂದು ಅಂದಾಜಿಸಲಾಗಿದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಆನೆಗಳಿರುವ ಪ್ರದೇಶ ಎಂದೇ ಕರೆಯಲಾಗುತ್ತದೆ.
‘ಆನೆಗಳನ್ನು ಕೊಲ್ಲುವುದು ಜನರ ಹಸಿವು ನೀಗಿಸುವುದು ಒಂದು ಉದ್ದೇಶವಾದರೆ, ಉದ್ಯಾನದಲ್ಲಿನ ಹೆಚ್ಚಾಗಿರುವ ಆನೆಗಳ ಸಂಖ್ಯೆ ಕಡಿಮೆ ಮಾಡುವುದು ಮತ್ತೊಂದು ಉದ್ದೇಶವಾಗಿದೆ. ಇಲ್ಲಿರುವ ಸ್ಥಳಾವಕಾಶದಲ್ಲಿ 55 ಸಾವಿರ ಆನೆಗಳಿಗೆ ಮಾತ್ರ ಜಾಗವಿದೆ. ಆದರೆ ಜಿಂಬಾಬ್ವೆಯಲ್ಲಿ 84 ಸಾವಿರ ಆನೆಗಳಿವೆ. ಅವುಗಳಲ್ಲಿ 200 ಆನೆಗಳನ್ನಷ್ಟೇ ನಾವು ಕೊಲ್ಲುತ್ತಿದ್ದೇವೆ. ಇದು ಸಾಗರದಿಂದ ಒಂದು ಹನಿಯನ್ನಷ್ಟೇ ತೆಗೆದಂತೆ’ ಎಂದು ಫರಾವೊ ಹೇಳಿದ್ದಾರೆ.
‘ಬರಗಾಲದ ಸಂದರ್ಭದಲ್ಲಿ ಮಾನವ – ವನ್ಯಜೀವಿಗಳ ನಡುವಿನ ಸಂಘರ್ಷವೂ ಏರ್ಪಟ್ಟಿದೆ. ಆನೆಗಳ ದಾಳಿಯಿಂದಾಗಿ ಈವರೆಗೂ ಜಿಂಬಾಬ್ವೆಯಲ್ಲಿ 50 ಜನ ಮೃತಪಟ್ಟಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ಆನೆಗಳ ಸಂತತಿ ಹೆಚ್ಚಳ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಧ್ವನಿ ಎತ್ತಿದ್ದ ಜಿಂಬಾಬ್ವೆ ಇದೀಗ, ಅಳಿವಿನಂಚಿನಲ್ಲಿರುವ ಪ್ರಬೇಧಗಳ ಮಾರಾಟ, ದಂತ ವ್ಯಾಪಾರ ಹಾಗೂ ಜೀವಂತ ಆನೆಗಳ ಮಾರಾಟ ಕುರಿತಂತೆ ವಿಶ್ವ ಸಂಸ್ಥೆಯಲ್ಲಿ ಲಾಬಿ ನಡೆಸುತ್ತಿದೆ. ಜಿಂಬಾಬ್ವೆಯಲ್ಲಿ ಸದ್ಯ ಮಾರಲು ಸಾಧ್ಯವಿಲ್ಲದ ₹5 ಕೋಟಿ ಮೌಲ್ಯದ ದಂತದ ದಾಸ್ತಾನು ಇದೆ’ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.