ಹಿಂದಿಯಲ್ಲಿ ಒಂದು ಗಾದೆ ಮಾತಿದೆ- ‘ಜಿಸ್‌ಕೀ ಲಾಠೀ ಉಸ್‌ಕೀ ಭೈನ್ಸ್’. ಅಂದರೆ, ‘ದೊಡ್ಡ ಕೋಲು ಹಿಡಿದವನೇ ಎಮ್ಮೆಯ ಮಾಲೀಕ’ ಎಂದರ್ಥ. ಭಾರತದ ಗ್ರಾಮ್ಯ ಜೀವನದಲ್ಲಿ ಬೇರೂರಿರುವ ಇಂಥ ಗಾದೆಗಳಲ್ಲಿ ಸಾರ್ವತ್ರಿಕ ಮತ್ತು ಕಾಲಾತೀತ ಅರ್ಥ ಅಡಗಿರುತ್ತದೆ. ಉದಾಹರಣೆಗೆ, ಈ ಹಿಂದೆ ವಿಯೆಟ್ನಾಂ, ಇರಾಕ್, ಅಫ್ಗಾನಿಸ್ತಾನದಂತಹ ಅನೇಕ ದೇಶಗಳ ಮೇಲೆ ವಿಧ್ವಂಸಕಾರಿ ದಾಳಿ ನಡೆಸಿ, ಸಾವಿರಾರು ಜನರ ಸಾವಿಗೆ ಕಾರಣವಾದ ವಿಶ್ವದ ಅತಿ ಬಲಾಢ್ಯ ರಾಷ್ಟ್ರದ ಇಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಜಾ ಪಟ್ಟಿಗೆ ಸಂಬಂಧಿಸಿದಂತೆ ತಳೆದಿರುವ ಉದ್ಧಟತನದ ನಿಲುವು. ಪ್ಯಾಲೆಸ್ಟೀನ್ ಜನರಿಗೆ ಸೇರಿರುವ ಸಮುದ್ರದಂಡೆಯ ಸುಂದರವಾದ ಜಾಗವನ್ನು ಬಲವಂತವಾಗಿ ವಶಪಡಿಸಿಕೊಂಡು, ಅಲ್ಲಿಯ ಇಪ್ಪತ್ತು ಲಕ್ಷ ಮೂಲನಿವಾಸಿಗಳನ್ನು ಹೊರಗೆ ದೂಕಿ, ಅಲ್ಲಿ ಜಗತ್ತಿನ ಅತಿ ಶ್ರೀಮಂತರಿಗಾಗಿ ಭವ್ಯ ರೆಸಾರ್ಟ್ ಒಂದನ್ನು ನಿರ್ಮಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಇದು ಅನೈತಿಕ, ಅಕ್ರಮ, ಅಮಾನವೀಯ, ಅಂತರರಾಷ್ಟ್ರೀಯ ಕಾನೂನಿನ ಅವಹೇಳನ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಗಾಜಾ ಹಾಗೂ ವೆಸ್ಟ್‌ಬ್ಯಾಂಕ್ ಪ್ರದೇಶಗಳ ಒಡೆತನ ಪ್ಯಾಲೆಸ್ಟೀನಿಯನ್ನರದೇ ಎಂಬುದನ್ನು ವಿಶ್ವಸಂಸ್ಥೆ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಈ ಭೂಮಿಯ ಮೇಲೆ ಪ್ಯಾಲೆಸ್ಟೀನಿಯನ್ನರ ಸ್ವತಂತ್ರ ರಾಷ್ಟ್ರ ನಿರ್ಮಾಣವಾಗಬೇಕು, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಶಾಂತಿಯುತವಾಗಿ ಕೂಡಿ ಬದುಕಬೇಕು ಎಂಬ ‘ದ್ವಿರಾಷ್ಟ್ರ ಪರಿಹಾರೋಪಾಯ’ವನ್ನು ಭಾರತವೂ ಸೇರಿದಂತೆ ಬಹುಪಾಲು ಎಲ್ಲ ದೇಶಗಳೂ ಅನೇಕ ದಶಕಗಳಿಂದ ಹೇಳುತ್ತಾ ಬಂದಿವೆ. ಆದರೆ ಅಮೆರಿಕ ಮತ್ತು ಇಸ್ರೇಲ್ ಇದನ್ನು ಒಪ್ಪುತ್ತಿಲ್ಲ. ಅಮೆರಿಕವು ಇಲ್ಲಿಯವರೆಗೆ ಇಸ್ರೇಲ್‌ಗೆ ಸಾವಿರಾರು ಕೋಟಿ ಡಾಲರ್ ಆರ್ಥಿಕ ಸಹಾಯ ನೀಡಿದ್ದಲ್ಲದೆ, ಅತಿ ವಿನಾಶಕಾರಿ ಶಸ್ತ್ರಾಸ್ತ್ರಗಳ ‘ಕೋಲನ್ನೂ’ ಅದರ ಕೈಯಲ್ಲಿ ಕೊಟ್ಟಿದೆ.
1948ರಲ್ಲಿ ಇಸ್ರೇಲ್‌ನ ಸ್ಥಾಪನೆಯಾದದ್ದೇ ಪ್ಯಾಲೆಸ್ಟೀನಿಯನ್ನರ ನೆಲದ ಮೇಲೆ ನಡೆದ ಅತಿಕ್ರಮಣದ ಫಲವಾಗಿ. ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಎರಡನೇ ಮಹಾಯುದ್ಧದಲ್ಲಿ ಯುರೋಪಿನ ಯಹೂದಿಯರ ಮೇಲೆ ಹಿಟ್ಲರ್ ದೌರ್ಜನ್ಯ ನಡೆಸಿದಾಗ, ಯಹೂದಿಯರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದು ಪ್ಯಾಲೆಸ್ಟೀನ್‌ನಲ್ಲಿ ತಮ್ಮ ರಾಷ್ಟ್ರವನ್ನು ಕಟ್ಟಿಕೊಂಡರು. ನಂತರ 1967ರ ಅರಬ್- ಇಸ್ರೇಲ್ ಯುದ್ಧದಲ್ಲಿ ಅರಬ್ಬರನ್ನು ಸೋಲಿಸಿ ಪ್ಯಾಲೆಸ್ಟೀನಿಯನ್ನರಿಗೆ ಸೇರಿದ ಮತ್ತಷ್ಟು ಪ್ರದೇಶವನ್ನು ವಶಪಡಿಸಿಕೊಂಡರು. ಇಷ್ಟೇ ಅಲ್ಲ, ವೆಸ್ಟ್‌ಬ್ಯಾಂಕ್‌ನಲ್ಲಿ ಇಸ್ರೇಲ್ ತನ್ನ ನಾಗರಿಕರಿಗಾಗಿ ವಸತಿ ಪ್ರದೇಶ
ಗಳನ್ನು ಕಟ್ಟಿ ಅತಿಕ್ರಮಣ ನಡೆಸುತ್ತಲೇ ಬಂದಿದೆ. ವೆಸ್ಟ್‌ಬ್ಯಾಂಕ್ ಮತ್ತು ಗಾಜಾ ಎರಡೂ ಪ್ರದೇಶಗಳಿಂದ ಪ್ಯಾಲೆಸ್ಟೀನಿಯನ್ನರನ್ನು ಸಂಪೂರ್ಣವಾಗಿ ಹೊರಗೆ ತಳ್ಳಿ, ಆ ಜಾಗಗಳನ್ನು ಕಬಳಿಸಿ, ಅಲ್ಲಿ ಒಂದು ಬೃಹತ್ ಇಸ್ರೇಲ್ ಸ್ಥಾಪಿಸಬೇಕು ಅನ್ನುವ ಕನಸನ್ನು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅನೇಕ ದಶಕಗಳಿಂದ ಕಾಣುತ್ತಲೇ ಬಂದಿದ್ದಾರೆ.
ಈ ಕನಸು ನನಸಾಗಬಹುದು ಎಂಬ ಭರವಸೆ ಅವರಿಗೆ ಸಿಕ್ಕಿದ್ದು 2023ರ ಅಕ್ಟೋಬರ್ 7ರಂದು. ವಿಪರ್ಯಾಸವೆಂದರೆ, ಆ ಅವಕಾಶವನ್ನು ನೆತನ್ಯಾಹು ಅವರಿಗೆ ನೀಡಿದವರು ಗಾಜಾದಲ್ಲಿನ ಹಮಾಸ್ ಎಂಬ ಇಸ್ಲಾಮಿ ಸಂಘಟನೆಯ ಬಂಡುಕೋರರು. ಅವರು ಆ ದಿನ ಇಸ್ರೇಲ್ ಮೇಲೆ ದಾಳಿ ಮಾಡಿ ಸುಮಾರು ಒಂದು ಸಾವಿರ ನಾಗರಿಕರನ್ನು ಕೊಂದು, ಅನೇಕ ಇಸ್ರೇಲಿಯನ್ನರನ್ನು ಒತ್ತೆಯಾಳುಗಳಾಗಿ ಸೆರೆಹಿಡಿದರು. ಅವರ ಈ ಘೋರ ಅಪರಾಧ ಅತ್ಯಂತ ಖಂಡನೀಯ. ಆದರೆ ಇದನ್ನೇ ನೆಪ ಮಾಡಿಕೊಂಡು ನೆತನ್ಯಾಹು ನೇತೃತ್ವದ ಸರ್ಕಾರವು ಗಾಜಾದಲ್ಲಿ ಹದಿನೈದು ತಿಂಗಳು ನರಮೇಧ ನಡೆಸಿ 50,000ಕ್ಕೂ ಹೆಚ್ಚು ನಾಗರಿಕರನ್ನು (ಅವರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಮತ್ತು ಮಕ್ಕಳು) ಕೊಂದುಹಾಕಿತು. ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು ನೆತನ್ಯಾಹು ಮತ್ತು ಹಮಾಸ್ ಬಂಡುಕೋರರನ್ನು ದೋಷಿಗಳು ಎಂದು ತೀರ್ಪು ನೀಡಿದೆ.
ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಯೇ ನನ್ನ ಪ್ರಮುಖ ಧ್ಯೇಯ’ ಎಂದು ಘೋಷಿಸಿದರು. ಯಾವುದೇ ಕಲಹದಲ್ಲಿ ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ಇರಬೇಕಾದುದು ಶಾಂತಿದೂತನ ಆದ್ಯ ಕರ್ತವ್ಯ. ಹೀಗಿರುವಾಗ, ಗಾಜಾದಲ್ಲಿ ಅಮೆರಿಕಕ್ಕೆ ಭಾರಿ ಲಾಭ ತಂದುಕೊಡುವ ರೆಸಾರ್ಟ್ ನಿರ್ಮಿಸುವುದೇಕೆ ಎಂಬ ಪ್ರಶ್ನೆಗೆ ಟ್ರಂಪ್ ಕೊಟ್ಟ ಉತ್ತರ- ‘ಆ ಜಾಗವೆಲ್ಲ ಧ್ವಂಸಗೊಂಡಿದೆ, ಅಲ್ಲಿ ಮನುಷ್ಯರು ವಾಸಿಸಲು ಸಾಧ್ಯವಿಲ್ಲ’. ಇದು ಹಾಸ್ಯಾಸ್ಪದ. ಗಾಜಾದಲ್ಲಿನ ಪ್ಯಾಲೆಸ್ಟೀನಿಯನ್ನರ ಸುಮಾರು ಎಲ್ಲ ಮನೆಗಳು, ಶಾಲೆಗಳು, ಆಸ್ಪತ್ರೆಗಳು, ಜಮೀನುಗಳು ನಾಶವಾಗಿರುವುದು ನಿಜ. ಆದರೆ ಆ ಪ್ರದೇಶದ ಮೇಲೆ ಅವಿರತವಾಗಿ ಬಾಂಬ್ ದಾಳಿ ನಡೆಸಿ ಈ ನಿರ್ಮಾಣಗಳನ್ನೆಲ್ಲಾ ಧ್ವಂಸ ಮಾಡಿದವರು ಯಾರು? ಇಸ್ರೇಲ್ ಅಲ್ಲವೇ? ಆದರೆ ಟ್ರಂಪ್ ಅವರು ನೆತನ್ಯಾಹು ಅವರನ್ನು ಬಾಯಿ ತುಂಬಾ ಹೊಗಳಿದರೇ ವಿನಾ ‘ನೀನೇ ಇದಕ್ಕೆ ದೋಷಿ’ ಎಂದು ಹೇಳುವ ನೈತಿಕ ಶಕ್ತಿಯನ್ನು ತೋರಿಸಲಿಲ್ಲ. ಅಷ್ಟೇ ಅಲ್ಲದೆ ‘ಗಾಜಾಪಟ್ಟಿಯನ್ನು ಪ್ಯಾಲೆಸ್ಟೀನಿಯನ್ನರಿಗೆ ಒಪ್ಪಿಸಿ ಅದರ ಪುನರ್‌ನಿರ್ಮಾಣಕ್ಕಾಗಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಮುಂದೆ ಬರೋಣ ಹಾಗೂ ಪಶ್ಚಿಮ ಏಷ್ಯಾದಲ್ಲಿ ಒಂದು ಹೊಸ ಶಾಂತಿಯುಗವನ್ನು ಸ್ಥಾಪಿಸೋಣ’ ಎಂದು ಕರೆ ಕೊಡುವ ದೊಡ್ಡ ಮನಸ್ಸನ್ನು ಟ್ರಂಪ್ ಮಾಡಲಿಲ್ಲ.
ಪ್ಯಾಲೆಸ್ಟೀನಿಯನ್ನರನ್ನು ನೆರೆಯ ಈಜಿಪ್ಟ್ ಮತ್ತು ಜೋರ್ಡನ್‌ಗೆ ತಳ್ಳಿ ಗಾಜಾದಲ್ಲಿ ರೆಸಾರ್ಟ್ ಕಟ್ಟಿ ಸ್ವರ್ಗದಂತೆ ಮಾಡುವೆ ಎಂಬ ಟ್ರಂಪ್ ಅವರ ದರ್ಪೋಕ್ತಿಯನ್ನು ಎಲ್ಲ ಅರಬ್, ಆಫ್ರಿಕನ್ ರಾಷ್ಟ್ರಗಳಲ್ಲದೆ ಚೀನಾ, ರಷ್ಯಾ, ಫ್ರಾನ್ಸ್‌ನಂತಹ ದೇಶಗಳೂ ಟೀಕಿಸಿವೆ. ಆದರೆ ಮೌನವಾಗಿರುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಸೇರಿದೆ. ಗಾಜಾದಲ್ಲಿ ಇಸ್ರೇಲ್ ನರಸಂಹಾರ ಮಾಡುತ್ತಿದ್ದಾಗಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತು ನೆತನ್ಯಾಹು ಅವರ ಪ್ರಶಂಸಕರಾದ, ಆಡಳಿತಾರೂಢ ಬಿಜೆಪಿಗೆ ಸೇರಿದವರು ಕಣ್ಣು-ಬಾಯಿ ಮುಚ್ಚಿಕೊಂಡಿದ್ದರು.
ಪ್ಯಾಲೆಸ್ಟೀನ್- ಇಸ್ರೇಲ್ ಕಲಹದಲ್ಲಿ ಈ ಹಿಂದೆ ಭಾರತ ಮೌನವಾಗಿ ಇರಲಿಲ್ಲ. ಉದಾಹರಣೆಗೆ, ಈ ವಿಷಯದ ಬಗ್ಗೆ ಮಹಾತ್ಮ ಗಾಂಧಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಮತ್ತು ಅಟಲ್ ಬಿಹಾರಿ ವಾಜಪೇಯಿ ಏನು ಹೇಳಿದ್ದರು ಎಂಬುದನ್ನು ನೋಡೋಣ. ‘ಇಂಗ್ಲೆಂಡ್ ಇಂಗ್ಲಿಷ್‌ಗೆ ಅಥವಾ ಫ್ರಾನ್ಸ್ ಫ್ರೆಂಚ್‌ಗೆ ಸೇರಿದಂತೆಯೇ ಪ್ಯಾಲೆಸ್ಟೀನ್ ಅರಬ್ಬರಿಗೆ ಸೇರಿದೆ’ ಎಂದು ಗಾಂಧೀಜಿ ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದರು. ಹಿಟ್ಲರ್‌ನ ಜರ್ಮನಿಯಲ್ಲಿ ಯಹೂದಿಯರ ಮೇಲೆ ನಡೆದ ಹತ್ಯಾಕಾಂಡದಿಂದಾಗಿ ಗಾಂಧೀಜಿಗೆ ಅವರ ಬಗ್ಗೆ ಆಳವಾದ ಸಹಾನುಭೂತಿ ಇತ್ತು. ಆದರೆ ಅವರು ‘ಯಹೂದಿಯರನ್ನು ಅರಬ್ಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ’ ಎಂದು ಸ್ಪಷ್ಟವಾಗಿ ಹೇಳಿದ್ದರು.
ಬಿಜೆಪಿ ಮತ್ತು ಅದರ ಹಿಂದಿನ ಅವತಾರವಾದ ಭಾರತೀಯ ಜನಸಂಘದ ಸೈದ್ಧಾಂತಿಕ ಗುರುಗಳಾದ ಉಪಾಧ್ಯಾಯ ಅವರು, 1967ರಲ್ಲಿ ಅರಬ್-ಇಸ್ರೇಲ್ ಯುದ್ಧ ಪ್ರಾರಂಭವಾದಾಗ, ಅವರ ಪಕ್ಷದ ಬಹುತೇಕ ಎಲ್ಲರೂ ಇಸ್ರೇಲ್ ಪರವಾಗಿದ್ದರೂ ಒಂದು ಎಚ್ಚರಿಕೆಯ ಮಾತನ್ನು ಹೇಳಿದ್ದರು. ‘ಕಾಂಗ್ರೆಸ್ ಕುರುಡಾಗಿ ಅರಬ್ ಪರವಾಗಿದೆ ಎಂದ ಮಾತ್ರಕ್ಕೆ ನಾವೂ ಕುರುಡಾಗಿ ಇಸ್ರೇಲ್ ಪರವಾಗಿ ಇರಬಾರದು. ಈ ಜಗತ್ತು ದೇವತೆಗಳು ಮತ್ತು ರಾಕ್ಷಸರಿಂದ ತುಂಬಿದೆ ಎಂದು ನಾವು ನಂಬಬಾರದು. ಪ್ರತಿ ವಿಷಯವನ್ನೂ ಅದರ ಅರ್ಹತೆಯ ಆಧಾರದ ಮೇಲೆ ನಾವು ನಿರ್ಣಯಿಸಬೇಕು’ (ಇದನ್ನು ಎಲ್.ಕೆ. ಅಡ್ವಾಣಿ ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ).
ಇದೇ ರೀತಿ ಜನತಾ ಪಕ್ಷದ ನೇತೃತ್ವದ ಸರ್ಕಾರದಲ್ಲಿ ಭಾರತದ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ಕೂಡ, ‘ಪ್ಯಾಲೆಸ್ಟೀನಿಯನ್ನರ ಭೂಮಿಯನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಅದನ್ನು ಇಸ್ರೇಲ್ ಖಾಲಿ ಮಾಡಲೇಬೇಕು’ ಎಂದು ಸ್ಪಷ್ಟವಾಗಿ ಹೇಳಿದ್ದರು. ‘ಇಸ್ರೇಲ್ 1967ರ ಹಿಂದಿನ ಸೀಮೆಗೆ ಹಿಂತಿರುಗಬೇಕು ಹಾಗೂ ಪ್ಯಾಲೆಸ್ಟೀನಿಯನ್ನರು ತಮ್ಮ ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸಲು ಅನುವು ಮಾಡಿಕೊಡಬೇಕು’ ಎಂದು ಅವರು ಆಗ್ರಹಿಸಿದ್ದರು.
ಪ್ರಬಲನೇ ಜಗತ್ತಿನ ಒಡೆಯ ಎಂಬ ‘ಜಂಗ್ಲಿ’ ಕಾನೂನನ್ನು ವಿಶ್ವಗುರು ಆಗಬಯಸುವ ಭಾರತ ಒಪ್ಪಬೇಕೆ? ಇದಕ್ಕೆ ಮೋದಿ ಅವರ ಸಮರ್ಥಕರೇ ಉತ್ತರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.