ADVERTISEMENT

‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

ಜಿ.ಕೃಷ್ಣ ಪ್ರಸಾದ್
Published 8 ಫೆಬ್ರುವರಿ 2019, 20:35 IST
Last Updated 8 ಫೆಬ್ರುವರಿ 2019, 20:35 IST
   

ಭರವಸೆ ಹುಟ್ಟಿಸುವ, ಗ್ರಾಮೀಣ ಬದುಕನ್ನು ಸಹನೀಯವಾಗಿಸುವ ಹೊಸ ಚಿಂತನೆಯ ಯೋಜನೆಗಳು ಬಜೆಟ್‍ನಲ್ಲಿರುವುದು ಸ್ವಾಗತಾರ್ಹ. ಗ್ರಾಮೀಣ ಸಂತೆಗಳಿಗೆ ಮೂಲ ಸೌಲಭ್ಯ , ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆ, ಹಾಪ್‍ಕಾಮ್ಸ್‌, ನಂದಿನಿ ಪಾರ್ಲರ್ ಮೂಲಕ ಸಿರಿಧಾನ್ಯ ಮಾರಾಟ, ನಾಟಿ ಕೋಳಿ ಸಾಕಾಣಿಕೆಗೆ ಉತ್ತೇಜನ, ಸಿರಿಧಾನ್ಯ ಬೆಳೆಗಾರರರಿಗೆ ಉತ್ತೇಜನ, ಕರಾವಳಿ ಮತ್ತು ಮಲೆನಾಡು ಭಾಗದ ರೈತರಿಗೆ ಭತ್ತ ಬೆಳೆಯಲು ಪ್ರೋತ್ಸಾಹ, ಬರ ನಿರೋಧಕ ಜಲಾನಯನ ಚಟುವಟಿಕೆ, ಪ್ರತ್ಯೇಕ ಬೆಳೆ ವಿಮಾ ಯೋಜನೆಗಳು ರೈತರನ್ನು ನೇರ ತಲುಪುತ್ತವೆ. ಇದರಿಂದ ಹಳ್ಳಿಗಳಲ್ಲಿ ಒಂದಿಷ್ಟು ಹಣ ಓಡಾಡಲು ಸಹಕಾರಿಯಾಗು
ತ್ತವೆ. ಆದರೆ ಇವುಗಳಿಗೆ ಮೀಸಲಿಟ್ಟ ಹಣ ಅತ್ಯಲ್ಪ. ಏನೇನಕ್ಕೂ ಬಾರದು.

ರೈತರು ಬೆಳೆದ ಉತ್ಪನ್ನಗಳಿಗೆ ನೇರ ಮಾರಾಟದ ಅವಕಾಶ ಮಾಡಿಕೊಡುವ ‘ರೈತರ ಸಂತೆಗಳನ್ನು’ ಬಲಗೊಳಿಸುವ ಕೆಲಸ ಜಗತ್ತಿನಾದ್ಯಂತ ನಡೆಯುತ್ತಿದೆ. ಸಾಲದ ಕೂಪದಲ್ಲಿ ಬಿದ್ದಿರುವ ಹಳ್ಳಿಗಳನ್ನು ಮೇಲೆತ್ತುವ ಅವಕಾಶವಿದು. 500 ಗ್ರಾಮೀಣ ಸಂತೆ ಮೂಲ ಸೌಕರ್ಯಕ್ಕೆ ₹1ಕೋಟಿ ಎತ್ತಿಡಲಾಗಿದೆ. ಅಂದರೆ, ಪ್ರತಿ ಸಂತೆಗೆ ₹16 ಸಾವಿರ ವರ್ಷಕ್ಕೆ ಸಿಗುತ್ತದೆ!. ಭಗವಂತನೇ ಭೂಮಿಗಿಳಿದರೂ ಹದಿನಾರು ಸಾವಿರಕ್ಕೆ ಮಾರುಕಟ್ಟೆ ಸೌಲಭ್ಯ ಕೊಡಲಾಗದು. ಇಂಥ ಮಹತ್ವಾಕಾಂಕ್ಷಿಯ ಕಾರ್ಯಕ್ರಮಗಳನ್ನು ರೂಪಿಸಲು ಸಂಪನ್ಮೂಲ ಮುಖ್ಯ ಎಂಬುದನ್ನು ಬಜೆಟ್ ಮರೆತಿದೆ.

ಅದೇ ರೀತಿ ಸಾವಯವ ಕೃಷಿ ಯೋಜನೆಗೆ ₹35 ಕೋಟಿ ನೀಡಲಾಗಿದೆ. ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅಧಿಕಾರಾವಧಿಯಲ್ಲಿ ಅನುಷ್ಠಾನಗೊಳಿಸಿದ ಸಾವಯವ ಗ್ರಾಮ ಯೋಜನೆ ರೈತರನ್ನು ಸಾವಯವ ಕೃಷಿಯಲ್ಲಿ ಮುಂದುವರಿಯುವಂತೆ ಮಾಡುವ ಪ್ರಯತ್ನಕ್ಕೆ ₹35 ಕೋಟಿ ಏನೇನೂ ಸಾಲದು. ಮತ್ತೆ ಆ ರೈತರು ರಾಸಾಯನಿಕ ಕೃಷಿಗೆ ಮರಳಿದರೆ, ಇಲ್ಲಿವರೆಗೆ ಮಾಡಿದ ಖರ್ಚು ನೀರಲ್ಲಿ ತೇಲಿಬಿಟ್ಟಂತೆ. ಆಹಾರ ಸಂರಕ್ಷಣೆ ಮತ್ತು ಗುಣಮಟ್ಟದ ಪ್ರಾಧಿಕಾರ ದೇಶದ ಎಲ್ಲ ಸಾವಯವ ಕೃಷಿಕರನ್ನು ಧೃಢೀಕರಣ ಪರಿಧಿಗೆ ತರುವ, ಬ್ರ್ಯಾಂಡಿಂಗ್‌ ಮಾಡುವ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುತ್ತಿದೆ. ಸಾವಯವ ಕೃಷಿ ನೀತಿಯನ್ನು ದೇಶದಲ್ಲಿಯೇ ಮೊದಲ ಬಾರಿ ಹೊರ ತಂದ ರಾಜ್ಯ ಎಂಬ ಹೆಗ್ಗಳಿಕೆ ಪಡೆದಿರುವ ಕರ್ನಾಟಕ ಸಾವಯವ ಕೃಷಿ ಕ್ಷೇತ್ರ ಕುಸಿಯದಂತೆ ಎಚ್ಚರಿಕೆ ವಹಿಸಬೇಕಿದೆ.

ADVERTISEMENT

ಸಿರಿಧಾನ್ಯಗಳನ್ನು ಹಾಪ್ ಕಾಮ್ಸ್, ನಂದಿನಿ ಪಾರ್ಲರ್ ಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆಗೆ ಮುಂದಾಗಿರುವ ಸರ್ಕಾರ, ಈ ವರ್ಷವೂ ಸಿರಿಧಾನ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ ಮತ್ತು ಸಂಶೋಧನೆಗೆ ನಯಾಪೈಸೆ ತೆಗೆದಿಟ್ಟಿಲ್ಲ. ರಾಜ್ಯದಲ್ಲಿ ಪರಿಪೂರ್ಣ ಎನಿಸಬಲ್ಲ ಸಿರಿಧಾನ್ಯ ಘಟಕ ಒಂದೂ ಇಲ್ಲ. ಕರ್ನಾಟಕದ ಸಿರಿಧಾನ್ಯವೆಲ್ಲ ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಹೋಗುತ್ತಿದೆ.

ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಹೆಕ್ಟೇರಿಗೆ ₹ 10 ಸಾವಿರ ನಗದು ಪ್ರೋತ್ಸಾಹ ನೀಡುವ ಉತ್ತಮ ಕೆಲಸಕ್ಕೆ ಮುಂದಾಗಿರುವ ಸರ್ಕಾರ, ಇದಕ್ಕೆ ಮೀಸಲಿಟ್ಟಿರುವ ಹಣ ಕೇವಲ ₹ 10 ಕೋಟಿ. ಇದರಿಂದ 10 ಸಾವಿರ ಹೆಕ್ಟೇರ್ ಭೂಮಿಯನ್ನು ಸಿರಿಧಾನ್ಯದ ವ್ಯಾ‍ಪ್ತಿಗೆ ತರಬಹುದು. ರಾಜಸ್ಥಾನದ ನಂತರ ಎರಡನೇ ದೊಡ್ಡ ಒಣಭೂಮಿ ಪ್ರದೇಶ ಹೊಂದಿರುವ ರಾಜ್ಯಕ್ಕೆ ಇದು ಕವಡೆ ಕಾಸು.

ಒಣಭೂಮಿಯಲ್ಲಿ ಕೊಳವೆ ಬಾವಿತೋಡಿ, ಅಂತರ್ಜಲ ಬರಿದು ಮಾಡಿ, ರಾಸಾಯಿನಿಕ ಸುರಿದು ನೆಲ ಹಾಳುಗೆಡವಿದ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರ ಉದ್ಧಾರಕ್ಕೆ ಮೀಸಲಿಟ್ಟ ಹಣ ₹ 150 ಕೋಟಿ. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಯಾರು ಬಲಾಢ್ಯರೋ ಅವರು ಹೆಚ್ಚಿನ ಲಾಭ ಪಡೆಯಬಹುದು ಎಂಬುದನ್ನು ಈ ಬಜೆಟ್ ನಿಜ ಮಾಡಿದೆ.

ಹಿಂದಿನ ಯಾವ ಸರ್ಕಾರಗಳೂ ಮಾಡದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭತ್ತ ಬೆಳೆಸಲು ಪ್ರೇರೇಪಿಸುವ ’ಕರಾವಳಿ ಪ್ಯಾಕೇಜ್’ ದೂರದೃಷ್ಟಿಯ ಯೋಜನೆ. ಅನ್ನದ ಋಣ ಕಳೆದುಕೊಳ್ಳುವ ಮುನ್ನ ಅನ್ನಭಾಗ್ಯ ಕರುಣಿಸುವ ಈ ಯೋಜನೆಗೆ ಇಟ್ಟಿರುವ ₹ 5 ಕೋಟಿ ಬರೀ ತೋರಿಕೆಗೆ ಎನ್ನುವಂತಿದೆ. ಇಸ್ರೇಲ್ ಮಾದರಿ ಕೃಷಿ ಯೋಜನೆ ಅನುಷ್ಟಾನಕ್ಕೆ 145 ಕೋಟಿ ರೂ ಮೀಸಲಿಟ್ಟಿರುವ ಮುಖ್ಯಮಂತ್ರಿ, ಕನ್ನಡ ನಾಡಿನಲ್ಲೇ ಬರ ನಿರೋಧಕ ಜಾಣ್ಮೆ ಸಾಕಷ್ಟಿದೆ ಎಂಬುದನ್ನು ಮರೆತಂತಿದೆ.

ಪ್ರತಿ ಬಜೆಟ್‌ನಲ್ಲೂ ಕೋಟಿ ಕೋಟಿ ಹಣದ ಲೆಕ್ಕ ಕಾಣಸಿಗುತ್ತದೆ. ಇದರ ಲಾಭ ಯಾರಿಗೆ ಸಿಗುತ್ತದೆ? ಉತ್ತರವಿಲ್ಲದ ಪ್ರಶ್ನೆ ಹಾಗೇ ಉಳಿಯುತ್ತದೆ.

* ಇವನ್ನೂ ಓದಿ...

*ಸಣ್ಣ ನೀರಾವರಿ, ಅಂತರ್ಜಲ ವೃದ್ಧಿಗೆ ಆದ್ಯತೆ

* ‘ಉಕ್ಕುವ ಹಾಲಿಗೆ ನೀರು ಚಿಮುಕಿಸಿದಂತೆ’

*ಅನ್ನದಾತನಿಗೆ ಹತ್ತಾರು ಯೋಜನೆ, ರಾಜ್ಯದಲ್ಲಿ ಪ್ರತ್ಯೇಕ ಬೆಳೆ ವಿಮೆ ಯೋಜನೆ

*ಬಜೆಟ್‌: ಯಾರು ಏನಂತಾರೆ?

*ಉದ್ಯಮ ವಲಯಕ್ಕೆ ಉತ್ತೇಜಕ ಬುತ್ತಿ

*ಬಜೆಟ್: ಪರಿಶಿಷ್ಟ ವರ್ಗಕ್ಕೆ ಭರ್ಜರಿ ಕೊಡುಗೆ

*ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

*ಸಾಲ ಮನ್ನಾಕ್ಕೆ ಇನ್ನೂ ಹಣ ಕೊಡುವೆ: ಕುಮಾರಸ್ವಾಮಿ

*ಬೆಂಗಳೂರೇ ಮೊದಲು; ಉಳಿದವು ನಂತರ...

*ಪ್ರತಿಭಟನೆ ಮಧ್ಯೆಯೇ ಬಜೆಟ್ ಭಾಷಣ

*ಬಜೆಟ್‌ನಲ್ಲಿ ಜಿಲ್ಲಾವಾರು ಹಂಚಿಕೆ; ಸಮತೋಲನದ ಸರ್ಕಸ್

*ಬರ ಪರಿಸ್ಥಿತಿ: ಆರ್ಥಿಕ ವೃದ್ಧಿ ದರ ಕುಸಿತ

*ಮತ ಫಸಲಿಗಾಗಿ ಕುಮಾರ ಬಿತ್ತನೆ

*ವಿಶ್ವವಿಖ್ಯಾತ ತಾಣವಾಗಿ ಬಾದಾಮಿ ಅಭಿವೃದ್ಧಿ

*ಸಹಸ್ರ ಶಾಲೆಗಳ ಸ್ಥಾಪನೆ

*ಸ್ವಾಮೀಜಿ ಊರುಗಳಲ್ಲಿ ಸಾಂಸ್ಕೃತಿಕ ಕೇಂದ್ರಗಳು

*ಹೊಸ ಕ್ರೀಡಾ ವಸತಿ ನಿಲಯಗಳ ಘೋಷಣೆ

*ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಆದ್ಯತೆ

*‘ಮಾತೃಶ್ರೀ’ ಯೋಜನೆ ಸಹಾಯಧನ ಹೆಚ್ಚಳ

*ಆನ್‌ಲೈನ್‌ ಮೂಲಕ ಸಿಇಟಿ, ವಿದ್ಯಾರ್ಥಿಗಳಿಗೆ ಡಿಜಿಟಲ್‌ ಅಂಕಪಟ್ಟಿ

*ಬಜೆಟ್‌ನಲ್ಲಿ ಮಠಮಾನ್ಯಗಳ ತೃಪ್ತಿಪಡಿಸುವ ಯತ್ನ

*ಬಜೆಟ್‌: ಯಾರು ಏನಂತಾರೆ?

*ಚಲನಶೀಲ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.