ಮಕ್ಕಳು ನಮ್ಮ ಸಮಾಜದ ಭವಿಷ್ಯ ರೂಪಿಸುವವರು. ಅವರು ದೈಹಿಕವಾಗಿ ಮಾನಸಿಕವಾಗಿ ಶಕ್ತಿಶಾಲಿಗಳಾಗಿ, ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸುವ ಜವಾಬ್ದಾರಿಯುತ ಪ್ರಜೆಯಾಗಿ ರೂಪುಗೊಳ್ಳಬೇಕು. ಮಕ್ಕಳು ಈ ರೀತಿಯಾಗಿ ರೂಪುಗೊಳ್ಳಬೇಕು ಎಂದಾದರೆ, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. ಸುರಕ್ಷಿತವಾದ ಮತ್ತು ಆರೋಗ್ಯಪೂರ್ಣವಾದ ವಾತಾವರಣವನ್ನು ಈ ಸಮಾಜದ ಮಕ್ಕಳಿಗೆ ಕೊಡಬೇಕು.
ನಿಜ. ಸುರಕ್ಷಿತ ವಾತಾವರಣ ರೂಪಿಸುವ ಜವಾಬ್ದಾರಿ ಈ ಸಮಾಜದ ಮೇಲಿದೆಯಾದರೂ ಅದನ್ನು ಈ ಸಮಾಜ ನಿರ್ವಹಿಸುತ್ತಿಲ್ಲ. ಲೈಂಗಿಕ ದೌರ್ಜನ್ಯದಂಥ ಕ್ರೌರ್ಯಕ್ಕೆ ಪುಟ್ಟ ಪುಟ್ಟ ಮಕ್ಕಳು ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಬೆಳವಣಿಗೆಯು ಕುಂಠಿತಗೊಳ್ಳುತ್ತಿದೆ. ಮಕ್ಕಳು ಕೂಡ ಗೌರವಯುತವಾದ ಉತ್ತಮ ಬದುಕನ್ನು ಬದುಕುವುದಕ್ಕೆ ಹಕ್ಕುದಾರರಾಗಿದ್ದಾರೆ. ಆದರೆ, ಇಂಥ ಹೀನ ಅಪರಾಧಗಳು ಮಕ್ಕಳ ಆ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗದಷ್ಟು ಪ್ರಮಾಣದಲ್ಲಿ ಮಕ್ಕಳಿದ್ದಾರೆ. ವಯಸ್ಕರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಹೋಲಿಸಿಕೊಂಡರೆ, ಮಕ್ಕಳ ಮೇಲೆಯೇ ಅತಿಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತವೆ ಎಂದು ಕೆಲವು ಸಂಸ್ಥೆಗಳು ಅಂಕಿ–ಅಂಶಗಳ ಸಮೇತ ವರದಿ ಬಿಡುಗಡೆ ಮಾಡಿವೆ.
ಹಾಗಾದರೆ, ಇಂಥ ಘಟನೆಗಳು ಯಾಕಾಗಿ ಹೆಚ್ಚಾಗುತ್ತಿವೆ ಎನ್ನುವ ಕಾರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಇವಕ್ಕೆಲ್ಲಾ ಪ್ರಮುಖ ಕಾರಣ, ನಮ್ಮ ಸಮಾಜದಲ್ಲಿ ಬೇರೂರಿರುವ ಸಾಂಪ್ರದಾಯಿಕ ಕಟ್ಟುಪಾಡುಗಳು. ಇವೇ ಇಂಥ ಅಪರಾಧಗಳಿಗೆ ಮೂಲ ಬೇರು. ಮಕ್ಕಳನ್ನು ಸ್ವತಂತ್ರವಾಗಿ ಬೆಳಯಲು ಬಿಡುವುದಿಲ್ಲ, ಅವರು ಮುಕ್ತವಾಗಿ ಪ್ರಶ್ನೆ ಕೇಳುವುದನ್ನು ಈ ಸಮಾಜ ಸಹಿಸುವುದಿಲ್ಲ. ಹಿರಿಯರು ಹೇಳಿದ್ದನ್ನು ಪ್ರಶ್ನೆ ಮಾಡದೆಯೇ ಮಕ್ಕಳು ಒಪ್ಪಿಕೊಳ್ಳಬೇಕು ಎಂದು ಈ ಸಮಾಜ ಬಯಸುತ್ತದೆ. ಪ್ರಶ್ನೆ ಕೇಳುವ ಸ್ವಭಾವವು ಅಶಿಸ್ತಿನ ನಡವಳಿಕೆ ಎನ್ನುತ್ತಾರೆ ಹಿರಿಯರು. ಯಜಮಾನಿಕ ನಡವಳಿಕೆಯ ಮೂಲಕ ಮಕ್ಕಳನ್ನು ನಿಯಂತ್ರಿಸಲು ಇವರು ಬಯಸುತ್ತಾರೆ. ಹಿರಿಯರ ಕುರಿತು ಮಕ್ಕಳು ಪ್ರಶ್ನಾತೀತವಾದ ಮತ್ತು ಆಜ್ಞಾಪಾಲಕ ಮನಃಸ್ಥಿತಿ ಹೊಂದಿರಬೇಕು ಎನ್ನುವುದೇ ಇಂಥ ಯಜಮಾನಿಕೆಯ ಮುಖ್ಯ ಗುರಿ.
ಹಿರಿಯರ ಇಂಥ ವರ್ತನೆಗಳಿಂದ ಮಕ್ಕಳು ಭಯಪಡುತ್ತಾರೆ. ಹಿರಿಯರ ಮುಂದೆ ಬಾಯಿ ತೆರೆಯಲೂ ಪುಟ್ಟ ಮಕ್ಕಳು ಭಯಪಡುತ್ತಾರೆ. ತಮ್ಮ ಆಸೆಯನ್ನೂ ಬೇಡಿಕೆಯನ್ನೂ ಹಿರಿಯರ ಮುಂದೆ ಹೇಳಿಕೊಳ್ಳಲು ಭಯಪಡುವ ಮಕ್ಕಳು ತಮ್ಮ ಮೇಲಾಗುವ ದೌರ್ಜನ್ಯದ ಬಗ್ಗೆ ಹೇಗೆ ಕೇಳಿಕೊಂಡಾರು?
ತಮ್ಮ ಮೇಲಾಗುವ ಎಲ್ಲ ರೀತಿಯ ದೌರ್ಜನ್ಯಗಳನ್ನೂ ಮಕ್ಕಳು ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬೇಕಾಗುತ್ತದೆ. ಲೈಂಗಿಕ ದೌರ್ಜನ್ಯ, ಕಿರುಕುಳದ ಬಗ್ಗೆ ನಾವು ನಮ್ಮ ಮಕ್ಕಳಿಗೆ ಜಾಗೃತಿಯನ್ನೂ ಮೂಡಿಸಿರುವುದಿಲ್ಲ. ಲೈಂಗಿಕ ವಿಚಾರಗಳನ್ನು ಹಂಚಿಕೊಳ್ಳುವ ಬಗ್ಗೆ ಮಕ್ಕಳು ನಾಚಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳಿಂದ ಮಕ್ಕಳ ಮೌನವು ದೌರ್ಜನ್ಯ ಎಸಗುವವರಿಗೆ ಉತ್ತೇಜನ ನೀಡಿದಂತಾಗುತ್ತದೆ ಮತ್ತು ಇಂಥ ಕೃತ್ಯ ಎಸಗುವ ಅಪರಾಧಿಗಳಿಗೆ ಶಿಕ್ಷೆಯೂ ಆಗುತ್ತಿಲ್ಲ.
ಲೈಂಗಿಕ ಕಿರುಕುಳ, ಅತ್ಯಾಚಾರದಂಥ ಘಟನೆಗಳು ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅವರು ಖಿನ್ನತೆಗೆ ಒಳಗಾಗುತ್ತಾರೆ. ಅಭದ್ರತಾ ಭಾವ ಅವರನ್ನು ಯಾವಾಗಲು ಕಾಡುತ್ತಲೇ ಇರುತ್ತದೆ. ಮಕ್ಕಳು ಅಸಹಾಯಕರಾಗುತ್ತಾರೆ. ಅವರಲ್ಲಿನ ಆತ್ಮವಿಶ್ವಾಸವೇ ಹುದುಗಿಹೋಗುತ್ತದೆ.
ಇನ್ನು ಇಂಥ ಅಪರಾಧಗಳಿಗೆ ಇರುವ ಕಾನೂನುಗಳ ಬಗ್ಗೆ ಬರೋಣ. ಪುಟ್ಟ ಮಕ್ಕಳು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾಗದೇ ಗೌರವಯುತವಾದ ಮತ್ತು ಸ್ವತಂತ್ರ ಬದುಕನ್ನು ಜೀವಿಸುವ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಹೊಣೆಗಾರಿಕೆ ಎಂದು ಸಂವಿಧಾನದ 39ನೇ ವಿಧಿ ಹೇಳುತ್ತದೆ.
ಮಕ್ಕಳಿಗಾಗಿ ಸುರಕ್ಷಿತ ವಾತಾವರಣ ರೂಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿ ಸರ್ಕಾರಗಳು ಹಲವು ಕಾನೂನುಗಳನ್ನು ಜಾರಿಗೆ ತಂದಿವೆ. ಕಾನೂನುಗಳು ಬಹಳ ಪರಿಣಾಮಕಾರಿಯಾಗಿದ್ದು, ಇವುಗಳಲ್ಲಿ ಸರ್ಕಾರಗಳ ಜವಾಬ್ದಾರಿಗಳನ್ನೂ ನಮೂದಿಸಲಾಗಿವೆ. ಆದ್ದರಿಂದ, ಈ ಕಾನೂನುಗಳು ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಿವೆ.
ಮಕ್ಕಳನ್ನು ಲೈಂಗಿಕ ಕ್ರಿಯೆಗೆ ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಅಂಥ ಕೃತ್ಯವನ್ನು ಚಿತ್ರೀಕರಿಸಿಕೊಳ್ಳುವುದು ‘ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ (ಸಿಎಸ್‌ಎಎಂ)’ ಎಂದು ಎನಿಸಿಕೊಳ್ಳುತ್ತದೆ. ಮಕ್ಕಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶದ ನಿರ್ಣಯಗಳಿಗೆ ಭಾರತವು 1992ರ ಡಿ.11ರಂದು ಸಹಿ ಹಾಕಿದೆ. ಈ ಪ್ರಕಾರ, ಮಕ್ಕಳನ್ನು ಲೈಂಗಿಕ ಕ್ರಿಯೆಗಳಿಗೆ ಮತ್ತು ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದನ್ನು ಸರ್ಕಾರವು ತಡೆಯಬೇಕು. 1974 ಮತ್ತು 2013ರ ರಾಷ್ಟ್ರೀಯ ಮಕ್ಕಳ ನೀತಿ ಮತ್ತು 2003ರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಪ್ರತಿಜ್ಞಾವಿಧಿಗಳು ಸರ್ಕಾರದ ಹೊಣೆಗಾರಿಕೆಯನ್ನು ಪುನರುಚ್ಚರಿಸುತ್ತವೆ.
ಮಕ್ಕಳು ಎಲ್ಲ ರೀತಿಯ ಹಿಂಸೆ, ದೌರ್ಜನ್ಯ, ಕಳಂಕ, ತಾರತಮ್ಯ, ವಂಚನೆಗೆ ಒಳಗಾಗುವುದನ್ನು ಸರ್ಕಾರ ತಡೆಯಲೇಬೇಕು. ಇದನ್ನು 2013ರ ಮಕ್ಕಳ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಜೊತೆಗೆ ಮಕ್ಕಳು ಆರ್ಥಿಕ ಅಥವಾ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುವುದನ್ನು ತಡೆಯಬೇಕು ಎಂದೂ ಹೇಳಲಾಗಿದೆ.
ಹೆತ್ತಮಕ್ಕಳನ್ನು ಕಸದ ಬುಟ್ಟಿಗಳಲ್ಲಿ, ರಸ್ತೆಗಳಲ್ಲಿ ಬಿಟ್ಟುಬರುವಂಥ ಅಪರಾಧಗಳನ್ನು ತಡೆಯಬೇಕು. ಮಕ್ಕಳ ಮಾರಾಟ, ನೀಲಿಚಿತ್ರಗಳಲ್ಲಿ ಬಳಕೆ ಮಾಡಿಕೊಳ್ಳುವಂಥ ಕೃತ್ಯಗಳನ್ನು ನಿಗ್ರಹಿಸಬೇಕು. ಮಕ್ಕಳ ಕಳ್ಳಸಾಗಣೆ ತಪ್ಪಿಸಬೇಕು. ಮಕ್ಕಳಿಗೆ ಮಾದಕವಸ್ತು ಅಥವಾ ಮದ್ಯವನ್ನು ನೀಡಿ ನಶೆ ತರಿಸಿ ಅವರ ಮೇಲೆ ದೌರ್ಜನ್ಯ ನಡೆಸುವುದುನ್ನು ತಡೆಯುವುದು ಕೂಡ ಸರ್ಕಾರದ ಹೊಣೆ.
ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಲು ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡಲು ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸಲಾಗಿದೆ. ಮಕ್ಕಳ ಮೇಲೆ ಆನ್‌ಲೈನ್ ಜಗತ್ತಿನಲ್ಲಿ ನಡೆಯುವ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳಗಳನ್ನು ತಡೆಯುವುದೂ ಈ ಆಯೋಗದ ಕೆಲಸವಾಗಿದೆ. ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯನ್ನು (ಪೋಕ್ಸೊ) 2012ರಲ್ಲಿ ಜಾರಿಗೆ ತರಲಾಯಿತು. ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿರುವ ಮಕ್ಕಳಿಗೆ ಕಾನೂನಾತ್ಮಕ ರಕ್ಷಣೆ ನೀಡುವುದು ಈ ಕಾಯ್ದೆಯ ಮೂಲ ಉದ್ದೇಶ. ದೌರ್ಜನ್ಯದ ಬಗ್ಗೆ ದೂರು ನೀಡುವುದು, ಈ ಪ್ರಕರಣಗಳ ತನಿಖೆ ಹೇಗಿರಬೇಕು, ನ್ಯಾಯಾಲಯಗಳಲ್ಲಿ ಇಂಥ ಪ್ರಕರಣಗಳ ವಿಚಾರಣೆಗಳನ್ನು ಹೇಗೆ ನಡೆಸಬೇಕು ಎನ್ನುವ ಕುರಿತು ಈ ಕಾಯ್ದೆ ಬಹಳ ಪರಿಣಾಮಕಾರಿಯಾಗಿ ವಿವರಿಸುತ್ತದೆ.
‘2013ರ ಅಪರಾಧ ಕಾನೂನು ತಿದ್ದುಪಡಿ ಕಾಯ್ದೆ’ಯು ಪೋಕ್ಸೊ ಕಾಯ್ದೆಯನ್ನು ಮತ್ತಷ್ಟು ಬಿಗಿಗೊಳಿಸಿತು. ಲೈಂಗಿಕ ದೌರ್ಜನ್ಯದ ಬೇರೆ ಬೇರೆ ಸ್ವರೂಪದ ಅಪರಾಧಗಳಿಗೆ ವಿವಿಧ ಶಿಕ್ಷೆಗಳನ್ನು ನೀಡುವ ಬಗ್ಗೆ ಈ ತಿದ್ದುಪಡಿ ಕಾಯ್ದೆಯಲ್ಲಿ ವಿವರಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಲ್ಲಿ ಶೀಘ್ರವಾಗಿ ತನಿಖೆ ನಡೆಸುವ ಮತ್ತು ನ್ಯಾಯಾಲಯಗಳಲ್ಲಿ ತ್ವರಿತವಾಗಿ ವಿಚಾರಣೆ ನಡೆಸುವ ಬಗ್ಗೆ 2018ರಲ್ಲಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಲಾಗಿದೆ.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಚಿತ್ರೀಕರಿಸಿಕೊಳ್ಳುವುದು, ಅದನ್ನು ಇನ್ನೊಬ್ಬರಿಗೆ ಹಂಚುವುದು ಮತ್ತು ಇಂಥ ವಿಡಿಯೊಗಳನ್ನು ಇಟ್ಟುಕೊಳ್ಳುವುದು ಕೂಡ ಅಪರಾಧವಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಕಾಯ್ದೆಯ 67ಬಿ ಸೆಕ್ಷನ್ ಹೇಳುತ್ತದೆ. ರಾಷ್ಟ್ರೀಯ ಸೈಬರ್ ರಿಪೋರ್ಟಿಂಗ್ ಪೋರ್ಟಲ್‌ನಲ್ಲಿ ಇಂಥ ಘಟನೆಗಳ ಬಗ್ಗೆ ದೂರು ನೀಡುವ ಅವಕಾಶವನ್ನು ಮಾಡಿಕೊಡಲಾಗಿದೆ.
ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ತಡೆಯಲು ಬಹಳಷ್ಟು ಕಾನೂನುಗಳು ಇವೆಯಾದರೂ ಅವುಗಳ ಪರಿಣಾಮಕಾರಿ ಜಾರಿಯಲ್ಲಿ ಸಮಸ್ಯೆಯಾಗುತ್ತಿದೆ. ಕಾನೂನು ಜಾರಿಯಲ್ಲಿ ಮುಖ್ಯ ಭೂಮಿಕೆ ವಹಿಸುವ ಎಲ್ಲರಿಗೂ ಈ ಬಗ್ಗೆ ಅತೀವ ಜವಾಬ್ದಾರಿ ಮತ್ತು ಆಸಕ್ತಿ ಬೇಕಾಗುತ್ತದೆ. ಪೋಕ್ಸೊ ಕಾಯ್ದೆ ಜಾರಿಯಾದ ಬಳಿಕ ರಾಜ್ಯದಲ್ಲಿ ಸುಮಾರು 28,153 ಪ್ರಕರಣಗಳ ದಾಖಲಾಗಿವೆ. ಆದರೆ, ಇಂಥ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವುದರ ಪ್ರಮಾಣವು ಶೇ 16ರಷ್ಟು ಮಾತ್ರವೇ ಇದೆ.
ಹಾಗಾಗಿ, ಈ ಎಲ್ಲ ದೌರ್ಜನ್ಯಗಳಿಂದ ಮಕ್ಕಳನ್ನು ಕಾಪಾಡಲು ಕೆಲವು ಕ್ರಮಗಳನ್ನು ಕೈಗೊಳ್ಳಲೇ ಬೇಕಾಗಿದೆ. ಇಂಥ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ:
1. ತಮ್ಮ ಹಕ್ಕುಗಳ ಬಗ್ಗೆ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಂಥ ಸಂದರ್ಭದಲ್ಲಿ ಅಂಥ ಘಟನೆಗಳ ಬಗ್ಗೆ ದೂರು ನೀಡುವ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಒಳ್ಳೆಯ ಉದ್ದೇಶದ ಮತ್ತು ಕೆಟ್ಟ ಉದ್ದೇಶ ಸ್ಪರ್ಶಗಳ ಬಗೆಗಿನ ಪಾಠಗಳನ್ನು ಪಠ್ಯಕ್ರಮಗಳಲ್ಲಿ ಅಳವಡಿಸಬೇಕು
2. ಕೆಟ್ಟ ಚಟಗಳಿಗೆ ಒಳಗಾಗಿ ತಮ್ಮ ಮಕ್ಕಳು ಅಸಹಜವಾಗಿ ವರ್ತಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಪೋಷಕರು ಗಮನಹರಿಸಬೇಕು
3. ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿ ಎನ್‌ಜಿಒಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಇರಬೇಕು
4. ಮಕ್ಕಳಸ್ನೇಹಿ ನ್ಯಾಯಾಂಗ ವ್ಯವಸ್ಥೆ ಸೃಷ್ಟಿಸಬೇಕು. ಪೊಲೀಸರು ಸೇರಿ ಇಡೀ ವ್ಯವಸ್ಥೆಯು ಮಕ್ಕಳ ಸುರಕ್ಷತೆಗೆ ಕಟಿಬದ್ಧವಾಗಿರಬೇಕು
5. ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳನ್ನು ರಕ್ಷಿಸಲು ತುರ್ತು ಸೇವಾ ವ್ಯವಸ್ಥೆಯೊಂದು ರೂಪಿಸಬೇಕು
6. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ಗುರುತು ಬಹಿರಂಗವಾಗುವುದನ್ನು ತಡೆಯಲು ಪೊಲೀಸರು ಮತ್ತು ಮಾಧ್ಯಮದವರನ್ನು ಸಂವೇದನಾಶೀಲರನ್ನಾಗಿಸಬೇಕು
7. ಮಕ್ಕಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ತನಿಖೆಯ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ಗಮನ ಕೇಂದ್ರೀಕರಿಸಬೇಕು. ಆ ಮೂಲಕ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು
ಈ ಮೇಲೆ ಹೇಳಿರುವ ಕ್ರಮಗಳು ಕೆಲವು ಉದಾಹರಣೆಗಳಷ್ಟೆ. ಮಕ್ಕಳು ಈ ದೇಶದ ಅತ್ಯುತ್ತಮ ನಾಗರಿಕರು ಮತ್ತು ದೇಶದ ಸಂಪತ್ತಾಗವಂತೆ ಬೆಳೆಯಲು ಉತ್ತಮ ವಾತಾವರಣವನ್ನು ರೂಪಿಸಲು ಸರ್ಕಾರ ಮತ್ತು ನಾಗರಿಕ ಸಮಾಜವು ತನ್ನೆಲ್ಲಾ ಶಕ್ತಿಯನ್ನು ಸಂಚಯಿಸಬೇಕಾಗಿದೆ.
ಲೇಖಕ: ಪೊಲೀಸ್ ಮಹಾನಿರ್ದೇಶಕ, ಸಿ.ಐ.ಡಿ. ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.