
ಜಿಡಿಪಿ ಹೆಚ್ಚಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತ ಎನ್ನುವ ಪ್ರಮೇಯ ಗಟ್ಟಿಯಾಗಿ ಕೇಳಿಬರುತ್ತಿದೆ. ಇನ್ನೊಂದು ತುದಿಯಲ್ಲಿ, ದೇಶದಲ್ಲಿನ ಅಸಮಾನತೆ ಹೆಚ್ಚಾಗುತ್ತಿದೆ. ಭಾರತೀಯ ಸರಕುಗಳ ಖರೀದಿ ಕುಗ್ಗಿ, ಆಮದು ಹೆಚ್ಚುತ್ತಿದೆ. ಮನುಷ್ಯರ ಸ್ವಾತಂತ್ರ್ಯ ಹೆಚ್ಚಿಸುವುದಕ್ಕೆ ಗಮನಕೊಡದೆ ಹೋದರೆ, ಅಭಿವೃದ್ಧಿ ಪ್ರಕ್ರಿಯೆ ಅಪೂರ್ಣವಾಗುತ್ತದೆ.
ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ರಾಷ್ಟ್ರದ ಪ್ರಗತಿಯ ಸಂಕೇತ ವಾಗಿ ನೋಡುತ್ತಿದ್ದೇವೆ. ಜಿಡಿಪಿ ಹೆಚ್ಚಾದರೆ ಸಂಭ್ರಮಿಸುತ್ತೇವೆ. ಅದು ಕುಸಿದರೆ ನಾವೂ ಕುಸಿಯು ತ್ತೇವೆ. ಜಿಡಿಪಿಯನ್ನು ದೇಶದ ಅಭಿವೃದ್ಧಿಯ ಸೂಚಿಯಾಗಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಸ್ವತಃ ಈ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಅರ್ಥಶಾಸ್ತ್ರಜ್ಞ ಸೈಮನ್ ಕುಜ್ನೆಟ್ಸ್ ಎಚ್ಚರಿಸಿದ್ದರು. ಆದರೆ, ಜಿಡಿಪಿ ಬೆಳೆದರೆ, ಬೆಳವಣಿಗೆಯ ಫಲ ಜನರಿಗೆ ಹರಿದು ಬರುತ್ತದೆ ಎಂದು ನಮ್ಮ ರಾಜಕೀಯ ನಾಯಕರು ಮತ್ತು ಕೆಲವು ಅರ್ಥಶಾಸ್ತ್ರಜ್ಞರು ನಮ್ಮನ್ನು ನಂಬಿಸುತ್ತಾ ಬಂದಿದ್ದಾರೆ. ‘ಸಂಪತ್ತು ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತವಾಗಿದ್ದರೆ ಜಿಡಿಪಿ ಅರ್ಥಹೀನವಾಗುತ್ತದೆ’ ಎಂದು ಸ್ವತಃ ಕುಜ್ನೆಟ್ಸ್ ಹೇಳಿದ್ದರೂ, ಜಿಡಿಪಿಯನ್ನು ಪ್ರತಿಷ್ಠೆಯ ವಿಷಯ ಮಾಡಿಕೊಂಡಿದ್ದೇವೆ. ಬೇರೆ ದೇಶಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದೇವೆ. ಅಸಮಾನತೆ ಒಂದೇ ಸಮ ಹೆಚ್ಚುತ್ತಿದೆ ಎನ್ನುತ್ತಿವೆ ಎಲ್ಲಾ ವರದಿಗಳು. ಭಾರತವು ಜಗತ್ತಿನಲ್ಲೇ ಹೆಚ್ಚು ಅಸಮಾನತೆ ಉಳ್ಳ ದೇಶವೆಂಬ ವರದಿಯೂ ಇದೆ. ಆದರೂ ಬೆಳವಣಿಗೆಯ ಫಲ ಎಲ್ಲರಿಗೂ ಹರಿದುಬರುತ್ತದೆಂಬ ಭ್ರಮೆ ಹೋಗಿಲ್ಲ.
ಸ್ವಾತಂತ್ರ್ಯಾನಂತರದ ಹಲವು ದಶಕಗಳಲ್ಲಿ, ಹಕ್ಕುಗಳು ಹಾಗೂ ಸಂಪತ್ತು ಸಮಾನವಾಗಿ ಎಲ್ಲರಿಗೂ
ದಕ್ಕುವಂತಾಗುವುದು ಆರ್ಥಿಕತೆಯ ಗುರಿಯಾಗಿತ್ತು. ಇತ್ತೀಚಿನ ಒಂದೆರಡು ದಶಕಗಳಿಂದ, ಭಾರತವನ್ನು ಜಗತ್ತಿನಲ್ಲೇ ಅತಿದೊಡ್ಡ ಶಕ್ತಿಯನ್ನಾಗಿ ಬೆಳೆಸುವುದು ನಮ್ಮ ಗುರಿಯಾಗಿದೆ. ಆ ಪ್ರತಿಷ್ಠೆಯ ಮುಂದೆ ಸಾಮಾನ್ಯ ಮನುಷ್ಯನ ಹಸಿವು, ಅಸಮಾನತೆ ಗೌಣವಾಗ ತೊಡಗಿವೆ. ರಾಷ್ಟ್ರವನ್ನು ದೊಡ್ಡ ಶಕ್ತಿಯನ್ನಾಗಿ ಬೆಳೆಸುವ ಹಾದಿಯಲ್ಲಿ ಇವೆಲ್ಲವೂ ಅನಿವಾರ್ಯವಾದ ‘ಸಣ್ಣ ತ್ಯಾಗ’ಗಳಂತೆ ಬಿಂಬಿತವಾಗುತ್ತಿವೆ. ಪ್ರಭಾತ್ ಪಟ್ನಾಯಕ್ ಇದನ್ನು ‘ಜಿಡಿಪಿ ರಾಷ್ಟ್ರೀಯತೆ’ ಅನ್ನುತ್ತಾರೆ. ‘ಇದು ನಮ್ಮ ಗಮನವನ್ನು ಮೂಲಭೂತ ಸಮಸ್ಯೆಗಳಿಂದ ಸೆಳೆದು, ಅಮೂರ್ತ ಶಕ್ತಿಯ ಬೆನ್ನಟ್ಟಿ ಹೋಗುವಂತೆ ಮಾಡುತ್ತಿದೆ’ ಎನ್ನುತ್ತಾರೆ.
ಜಿಡಿಪಿ ಅಂದಾಜಿನ ಬಗ್ಗೆಯೂ ಹಲವು ಅನುಮಾನಗಳಿವೆ. ಕೇಂದ್ರ ಸರ್ಕಾರದ ಆರ್ಥಿಕ ಸಲಹೆ
ಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಜಿಡಿಪಿ ಯನ್ನು ಕನಿಷ್ಠ ಶೇ 2.5ರಷ್ಟು ಹೆಚ್ಚಾಗಿ ಅಂದಾಜು ಮಾಡಲಾಗಿದೆ ಎನ್ನುತ್ತಾರೆ. ಜಿಡಿಪಿ ಸರ್ಕಾರ ಹೇಳುವಷ್ಟು ಹೆಚ್ಚಾಗಿದ್ದರೆ ವಿದ್ಯುತ್ ಬಳಕೆ, ದ್ವಿಚಕ್ರ
ಮತ್ತು ವಾಣಿಜ್ಯ ವಾಹನಗಳ ಮಾರಾಟ, ರೈಲ್ವೆ ಸರಕು ಸಾಗಣೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಇತ್ಯಾದಿ ಗಳಲ್ಲೂ ಸುಮಾರಾಗಿ ಅಷ್ಟೇ ಹೆಚ್ಚಳ ಕಾಣಬೇಕಿತ್ತು. ಹಾಗೆ ಆಗಿಲ್ಲದಿರುವುದನ್ನು ತಮ್ಮ ಅಂದಾಜಿಗೆ ಸಮರ್ಥನೆಯಾಗಿ ಅವರು ಉಲ್ಲೇಖಿಸುತ್ತಾರೆ.
ಸುಬ್ರಮಣಿಯನ್ ಮಾತ್ರವಲ್ಲ, ಅನೇಕರು ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಕೂಡ ನಮ್ಮ ದತ್ತಾಂಶಕ್ಕೆ ‘ಸಿ’ ರೇಟಿಂಗ್ ನೀಡಿ ಅನುಮಾನಗಳಿಗೆ ಪುಷ್ಟಿ ನೀಡಿದೆ. ಐಎಂಎಫ್ ಮಾಡಿರುವ ಟೀಕೆಗಳಲ್ಲಿ ಹೊಸದೇನಿಲ್ಲ. ಇದನ್ನು ಅದು ಮೊದಲೂ ಹೇಳಿತ್ತು. ಬೇರೆಯವರೂ ಹೇಳಿದ್ದಾರೆ. ಅವು ಬಹುತೇಕ ನಿಜ ಕೂಡ.
ನಮ್ಮ ಜಿಡಿಪಿ ಅಂದಾಜನ್ನು ಕುರಿತ ಕೆಲವು ಪ್ರಮುಖ ಟೀಕೆಗಳನ್ನು ಗಮನಿಸೋಣ. ನಮ್ಮಲ್ಲಿ ಅಸಂಘಟಿತ ವಲಯ ದೊಡ್ಡದು. ನಮ್ಮ ಜಿಡಿಪಿಯ ಸುಮಾರು ಅರ್ಧದಷ್ಟು ಬರುವುದು ಅಲ್ಲಿಂದಲೇ. ಆದರೆ, ಅಸಂಘಟಿತ ವಲಯದ ಬಗ್ಗೆ ಸರಿಯಾದ ಮಾಹಿತಿ ನಮ್ಮಲ್ಲಿಲ್ಲ. ಜಿಡಿಪಿಯನ್ನು ಲೆಕ್ಕ ಹಾಕಲು ಸಂಘಟಿತ ವಲಯದ ಬೆಳವಣಿಗೆಯನ್ನೇ ಅಸಂಘಟಿತ ವಲಯಕ್ಕೂ ಅನ್ವಯಿಸುತ್ತಿದ್ದೇವೆ. ಅದು ಸರಿಯಲ್ಲ. ಎರಡು ವಲಯಗಳು ಒಂದೇ ರೀತಿಯಲ್ಲಿ ಬೆಳೆಯಬೇಕಾಗಿಲ್ಲ. ಐನೂರು ಹಾಗೂ ಸಾವಿರ ರೂಪಾಯಿ ನೋಟು ಅಮಾನ್ಯೀಕರಣ ಆದಾಗ, ಕೋವಿಡ್ ಕಾಲದಲ್ಲಿ ಅಸಂಘಟಿತ ವಲಯ ಸೊರಗಿದ್ದನ್ನು ಗಮನಿಸಿದ್ದೇವೆ. ಅದರ ಬೆಳವಣಿಗೆ ಯನ್ನು ಸಂಘಟಿತ ವಲಯದ ಬೆಳವಣಿಗೆಯ ಮೂಲಕ ನೋಡಿದರೆ ಕುಸಿಯುತ್ತಿರುವ ವಲಯವನ್ನು ಬೆಳೆಯುತ್ತಿರುವಂತೆ ತೋರಿಸಿದಂತಾಗುತ್ತದೆ. ಸಹಜವಾಗಿಯೇ ಜಿಡಿಪಿ ಹೆಚ್ಚಾದಂತೆ ಕಾಣುತ್ತದೆ.
ನಮ್ಮ ಜಿಡಿಪಿ ಲೆಕ್ಕಾಚಾರದ ಬಗ್ಗೆ ಇರುವ ಇನ್ನೊಂದು ಟೀಕೆಯೆಂದರೆ, ನಮ್ಮ ಬೆಳವಣಿಗೆಯನ್ನು ಹೋಲಿಸುವುದಕ್ಕೆ 2011–12ನ್ನೇ ಈಗಲೂ ಮೂಲ ವರ್ಷವನ್ನಾಗಿ ಇಟ್ಟುಕೊಂಡಿದ್ದೇವೆ. ಆದರೆ, ಕಳೆದ 15 ವರ್ಷಗಳಲ್ಲಿ ಭಾರತದ ಆರ್ಥಿಕತೆ ಸಾಕಷ್ಟು ಬದಲಾಗಿದೆ. ಆಗ ಬಳಸುತ್ತಿದ್ದ ಎಷ್ಟೋ ಸರಕು ಸೇವೆಗಳು ಈಗ ಬಳಕೆಯಲ್ಲಿಲ್ಲ. ಎಷ್ಟೋ ಹೊಸ ಸರಕು ಹಾಗೂ ಸೇವೆಗಳು ಮಾರುಕಟ್ಟೆಗೆ ಬಂದಿವೆ. ಹಳೆಯ ಮಾನದಂಡ ಬಳಸಿ ಇಂದಿನ ಬೆಳವಣಿಗೆಯನ್ನು ಅಳೆಯುವುದು ಸರಿಯಲ್ಲ. ಅದು ಬದಲಾದ ಆರ್ಥಿಕತೆಯನ್ನು ಸರಿಯಾಗಿ ಬಿಂಬಿಸುವುದಿಲ್ಲ. ಇದನ್ನು ಸರ್ಕಾರವೂ ಅಲ್ಲಗಳೆಯುತ್ತಿಲ್ಲ. ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.
ಮುಂದಿನದು ದೇಶದ ಒಟ್ಟಾರೆ ಉತ್ಪನ್ನದ ಅಂದಾಜು ಮಾಡುವ, ಅರ್ಥಾತ್ ಜಿಡಿಪಿಯನ್ನು ಅಂದಾಜು ಮಾಡುವ ಸಮಸ್ಯೆ. ಪ್ರತಿ ಆರ್ಥಿಕತೆಯಲ್ಲಿ ಕೊಳ್ಳುವವನು ಮಾಡುವ ಖರ್ಚು ಮಾರುವವನ ಆದಾಯವಾಗಿರುತ್ತದೆ. ಹಾಗಾಗಿ, ಒಂದು ದೇಶದ ಒಟ್ಟು ಉತ್ಪನ್ನವನ್ನು ಅಂದಾಜು ಮಾಡುವುದಕ್ಕೆ ಜನರ, ಸರ್ಕಾರದ ಹಾಗೂ ಕಂಪನಿಗಳ ಒಟ್ಟು ಆದಾಯವನ್ನು ಪರಿಗಣಿಸುವುದು ಒಂದು ವಿಧಾನ. ಹಾಗಿಲ್ಲ ವಾದಲ್ಲಿ ಇವರೆಲ್ಲರೂ ಮಾಡುವ ಒಟ್ಟಾರೆ ಖರ್ಚನ್ನು ಆಧರಿಸಿ ಜಿಡಿಪಿಯನ್ನು ಅಂದಾಜು ಮಾಡಬಹುದು.
ಭಾರತದಲ್ಲಿ ಆದಾಯವನ್ನು ಆಧರಿಸಿದ ಅಂದಾಜನ್ನು ಜಿಡಿಪಿಯೆಂದು ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಖರ್ಚನ್ನು ಆಧರಿಸಿದ ಅಂದಾಜು ಜಿಡಿಪಿಯಾಗುತ್ತದೆ. ತಾತ್ತ್ವಿಕವಾಗಿ ಇವೆರಡೂ ಒಂದೇ ಆಗಿರಬೇಕು. ಆದರೆ, ಎರಡು ಮಾಹಿತಿಗಳ ಮೂಲಗಳೂ ಬೇರೆಯಾಗಿರುವುದರಿಂದ ಒಂದಿಷ್ಟು ವ್ಯತ್ಯಾಸ ಇರುತ್ತದಾದರೂ, ಆ ವ್ಯತ್ಯಾಸ ಹೆಚ್ಚಾಗಬಾರದು. ಅರ್ಥಶಾಸ್ತ್ರಜ್ಞ ಅಶೋಕ್ ಮೋದಿಯವರು ಭಾರತದಲ್ಲಿ ಈ ಎರಡು ಅಂದಾಜುಗಳ ನಡುವಿನ ವ್ಯತ್ಯಾಸ ಹೆಚ್ಚಿದೆ ಅನ್ನುತ್ತಾರೆ. 2025–26ರಲ್ಲಿ ಆದಾಯವನ್ನಾಧರಿಸಿ ಲೆಕ್ಕ ಹಾಕಿದ ಜಿಡಿಪಿ ಶೇ 8ರಷ್ಟಿದೆ. ಖರ್ಚನ್ನು ಒಟ್ಟು ಮಾಡಿ ನೋಡಿದಾಗ ಅದು ಶೇ 5 ಇದೆ. ನಮ್ಮಲ್ಲಿ ಜಿಡಿಪಿ ಶೇ 8ರಷ್ಟು ಎನ್ನುತ್ತೇವೆ. ಅಮೆರಿಕದಲ್ಲಾಗಿದ್ದರೆ ಅದು ಶೇ 5ರಷ್ಟು ಆಗಿರುತ್ತಿತ್ತು. ಎರಡು ಕ್ರಮಗಳಲ್ಲೂ ಸಮಸ್ಯೆಗಳಿರುವುದರಿಂದ ಎರಡರ ಸರಾಸರಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
ಆದಾಯದಷ್ಟು ಖರ್ಚು ಹೆಚ್ಚದಿರುವುದಕ್ಕೆ ಅಶೋಕ್ ಮೋದಿಯವರು ಕೊಡುವ ವಿವರಣೆ ಯೆಂದರೆ, ಅನುಕೂಲಸ್ಥ ಭಾರತೀಯರು ಭಾರತದ ಸರಕುಗಳನ್ನು ಕೊಳ್ಳುವ ಬದಲು ವಿದೇಶಿ ಸರಕು ಗಳನ್ನು ಕೊಳ್ಳುತ್ತಿದ್ದಾರೆ. ವಿದೇಶಿ ಬ್ರ್ಯಾಂಡ್‌ಗಳು ಹೆಚ್ಚು ವ್ಯಾಪಾರವಾಗುತ್ತಿವೆ. ಆಮದಿನ ಪ್ರಮಾಣ ಹೆಚ್ಚುತ್ತಿದೆ.
ಭಾರತೀಯ ಸರಕುಗಳ ಖರೀದಿ ಕಡಿಮೆ ಯಾಗಿದೆ. ಅದು ಆದಾಯ ಹಾಗೂ ಖರ್ಚಿನ ನಡುವಿನ ವ್ಯತ್ಯಾಸಕ್ಕೆ ಕಾರಣವೆಂದು ಅವರು ಸೂಚಿಸುತ್ತಾರೆ.
ಜಿಡಿಪಿ ಕೇಂದ್ರಿತ ಆರ್ಥಿಕತೆಯೇ ನಮ್ಮ ಗುರಿ ಅನ್ನುವುದಾದರೆ, ಅದರ ಲೆಕ್ಕಾಚಾರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರಿಯಾದ ಜಿಡಿಪಿಯನ್ನು ಲೆಕ್ಕ ಹಾಕುವ ಕಡೆ ಗಮನಕೊಡಬೇಕು. ಇದು ದೇಶದ ಆರ್ಥಿಕ ನೀತಿಗಳನ್ನು ರೂಪಿಸುವುದಕ್ಕೆ ತುಂಬಾ ಮುಖ್ಯ. ಬಹುಶಃ, ಸರ್ಕಾರ ಭಾವಿಸಿದಷ್ಟು ವೇಗವಾಗಿ ಜಿಡಿಪಿ ಬೆಳೆಯುತ್ತಿಲ್ಲವೆಂಬ ಅರಿವಿದ್ದಿದ್ದರೆ ಆರ್‌ಬಿಐ ಬಡ್ಡಿದರವನ್ನು ಇಳಿಸುತ್ತಿತ್ತು. ಜನರಿಗೆ ಸಾಲ ಸುಲಭವಾಗಿ ಸಿಗುತ್ತಿತ್ತು. ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವುದು, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಧಾರಿಸುವುದು, ಇತ್ಯಾದಿ ಸುಧಾರಣೆಗಳು ಆದ್ಯತೆಯ ವಿಷಯವಾಗುತ್ತಿದ್ದವು.
ನಮ್ಮಲ್ಲಿನ ದತ್ತಾಂಶಗಳಿಗೆ ಸಂಬಂಧಿಸಿದ ಟೀಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ನಮ್ಮಲ್ಲಿ ಜನಗಣತಿ 2021ರಲ್ಲಿ ಅಗಬೇಕಿತ್ತು. ಈವರೆಗೂ ಆಗಿಲ್ಲ. ಬಹುತೇಕ ಸಮೀಕ್ಷೆಗಳು ಹಳತಾಗಿವೆ. ನಾವು 15 ವರ್ಷಗಳ ಹಿಂದಿನ ಚಿತ್ರಣವನ್ನಿಟ್ಟುಕೊಂಡು ಇಂದಿನ ಆರ್ಥಿಕತೆಯನ್ನು ಅಳೆಯಲು ಯತ್ನಿಸುತ್ತಿ ದ್ದೇವೆ. ತ್ರೈಮಾಸಿಕ ಜಿಡಿಪಿ ಅಂದಾಜು ಮಾಡುವಾಗ ಸಾಕಷ್ಟು ಊಹೆಗಳನ್ನು ಮಾಡುತ್ತೇವೆ. ಏಕೆಂದರೆ, ಎಷ್ಟೋ ವಿಷಯಗಳಿಗೆ ಸಂಬಂಧಿಸಿದಂತೆ ನಮಗೆ ತ್ರೈಮಾಸಿಕ ದತ್ತಾಂಶ ಲಭ್ಯವಿಲ್ಲ. ಹಿಂದೆ ಹೀಗಿತ್ತು ಅಂದುಕೊಂಡು, ಈಗಿನ ಮಾಹಿತಿಯನ್ನು ಅಂದಾಜು ಮಾಡುತ್ತೇವೆ. ನಮಗೆ ಬೇಕಾದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸುವವರೆಗೆ ನಮ್ಮ ಅಂದಾಜು ನಿಖರವಾಗಿರುವುದಕ್ಕೆ ಸಾಧ್ಯವಿಲ್ಲ. ಫೆಬ್ರುವರಿಯಲ್ಲಿ ಪರಿಷ್ಕೃತ ಅಂದಾಜುಗಳು ಬರುವ ನಿರೀಕ್ಷೆಯಿದೆ.
ಜಿಡಿಪಿ ಹೆಚ್ಚಿದ ಮಾತ್ರಕ್ಕೆ ಬಡತನ, ನಿರುದ್ಯೋಗ, ಅಸಮಾನತೆ ಇವೆಲ್ಲಾ ಅದರಷ್ಟಕ್ಕೆ ಸರಿಹೋಗಿಬಿಡುವುದಿಲ್ಲ. ಹಾಗೆ ಆಗುತ್ತದೆ ಅನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ. ಅದಕ್ಕಾಗಿಯೇ ಕಾರ್ಯಕ್ರಮಗಳನ್ನು ಹಾಕಿಕೊಳ್ಳ ಬೇಕು. ಅಭಿವೃದ್ಧಿಯ ಕೇಂದ್ರ ಹಾಗೂ ಉದ್ದೇಶ ಬದಲಾಗಬೇಕು. ಅಮರ್ತ್ಯ ಸೆನ್ ಹೇಳುವಂತೆ, ಅಭಿವೃದ್ಧಿಯನ್ನು ಆರ್ಥಿಕ ಬೆಳವಣಿಗೆಯ ಕಣ್ಣಲ್ಲಿ ನೋಡುವಾಗ ಆರ್ಥಿಕತೆ ಕೇಂದ್ರವಾಗಿಬಿಡುತ್ತದೆ. ಅದನ್ನು ಬೆಳೆಸುವುದೇ ಪ್ರಗತಿಯೆನಿಸಿಕೊಳ್ಳುತ್ತದೆ. ತಲಾ ಆದಾಯವೊ, ನಿವ್ವಳ ರಾಷ್ಟ್ರೀಯ ಉತ್ಪನ್ನವೋ ಅದರ ಬೆಳವಣಿಗೆಯ ಅಳತೆಗೋಲಾಗುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ಅಭಿವೃದ್ಧಿಯನ್ನು ಮಾನವ ಅಭಿವೃದ್ಧಿಯಾಗಿ ನೋಡಿದರೆ, ಆರ್ಥಿಕತೆಯನ್ನು ಅನುಭವಿಸುತ್ತಿರುವ ಮನುಷ್ಯ ಆರ್ಥಿಕತೆಯ ಕೇಂದ್ರ ವಾಗುತ್ತಾನೆ. ಜನರ ಸಾಮರ್ಥ್ಯ ಬೆಳವಣಿಗೆಯ ಅಳತೆಗೋಲಾಗುತ್ತದೆ. ಶಿಕ್ಷಣ, ಆರೋಗ್ಯ, ರಾಜಕೀಯ ಸ್ವಾತಂತ್ರ್ಯ, ಇವೆಲ್ಲಾ ಬೆಳವಣಿಗೆಯ ಸಾಧನಗಳಾಗು ವುದಿಲ್ಲ; ಬೆಳವಣಿಗೆಯ ಅವಶ್ಯಕ ಭಾಗವಾಗುತ್ತವೆ. ಮನುಷ್ಯರಿಗೆ ಇದನ್ನು ಪಡೆಯಲು ಇರುವ ಅಡ್ಡಿಗಳನ್ನು ತೆಗೆಯುವುದು ಅಥವಾ ಸ್ವಾತಂತ್ರ್ಯವನ್ನು ಹೆಚ್ಚಿಸುವುದು ಮುಖ್ಯವಾಗುತ್ತದೆ. ಜಿಡಿಪಿಯನ್ನು ಹೆಚ್ಚಿಸುವುದಕ್ಕೆ ಮಾರ್ಗಗಳನ್ನು ಹಾಗೂ ಸಾಧನ ಗಳನ್ನು ಹುಡುಕುವುದಕ್ಕಿಂತ ಮನುಷ್ಯರ ಸ್ವಾತಂತ್ರ್ಯವನ್ನು ವಿಸ್ತರಿಸುವುದಕ್ಕೆ ನೇರವಾಗಿ ಗಮನಕೊಡ ಬೇಕು. ಆ ಪ್ರಕ್ರಿಯೆಯಲ್ಲಿ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಅನ್ನುವ ವಿವೇಕ ಒಳ್ಳೆಯದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.