ADVERTISEMENT

ವಿಶ್ಲೇಷಣೆ: ಇತಿಹಾಸದಲ್ಲಿ ದಾಖಲಾಗದ ಸತ್ಯ

ಡಿಎಂಕೆ ಒತ್ತಡಕ್ಕೆ ಮನಮೋಹನ ಸಿಂಗ್‌ ಯಾಕೆ ಮಣಿದರು?

ದಿನೇಶ್ ಅಮಿನ್ ಮಟ್ಟು
Published 2 ಜನವರಿ 2025, 23:30 IST
Last Updated 2 ಜನವರಿ 2025, 23:30 IST
   

‘ವರ್ತಮಾನದ ಮಾಧ‍್ಯಮ ಮತ್ತು ವಿರೋಧ ಪಕ್ಷಗಳಿಗಿಂತ ಇತಿಹಾಸ ನನ್ನ ಬಗ್ಗೆ ಕರುಣಾಮಯಿಯಾಗಿರುತ್ತದೆ’ ಎಂಬ ಭರವಸೆಯನ್ನು ಪ್ರಧಾನಿಯಾಗಿ ತಾವು ಎದುರಿಸಿದ್ದ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಮನಮೋಹನ ಸಿಂಗ್ ವ್ಯಕ್ತಪಡಿಸಿದ್ದರು. ಆದರೆ ಇತಿಹಾಸ ಸತ್ಯವನ್ನು ಸೃಷ್ಟಿಸುವುದಿಲ್ಲ, ದಾಖಲಿಸುತ್ತದೆ ಅಷ್ಟೆ. ಸತ್ಯ ಎನ್ನುವುದು ಸಾಪೇಕ್ಷವಾಗಿರುವ ಕಾರಣ, ಇತಿಹಾಸದಲ್ಲಿ ದಾಖಲಾಗುವ ಸತ್ಯ ಕೂಡಾ ಅರ್ಧಸತ್ಯವಾಗಿರುವ ಸಾಧ್ಯತೆಯೇ ಹೆಚ್ಚು.

ಅಂತಹದ್ದೊಂದು ಸತ್ಯ- ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರ ನಡುವಿನ ಸಂಬಂಧ. ಇವರಿಬ್ಬರೂ ಈ ಬಗ್ಗೆ ಮುಕ್ತವಾಗಿ ಮಾತನಾಡಿಲ್ಲ. ಮೂರನೆಯವರ ಬರಹ ಮತ್ತು ಮಾತುಗಳ ಆಧಾರದಲ್ಲಿಯೇ ಇಬ್ಬರ ಸಂಬಂಧವನ್ನು ವ್ಯಾಖ್ಯಾನ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಜಗತ್ತಿಗೆ ತಿಳಿಯದೇ ಇದ್ದ ಸತ್ಯವನ್ನು ಸೋನಿಯಾ ಅವರು ಈಗ ಹೊರಹಾಕಿದರೂ ಅದರ ದೃಢೀಕರಣ ಇಲ್ಲವೇ ನಿರಾಕರಣೆಗೆ ಸಿಂಗ್ ಅವರಿಲ್ಲದ ಕಾರಣ ಅದು ಕೂಡಾ ಅರ್ಧಸತ್ಯವಾಗಿರುತ್ತದೆ.

ಆದ್ದರಿಂದ ಈ ವಿಷಯಕ್ಕೆ ಸಂಬಂಧಿಸಿದ ಸತ್ಯವು ಇತಿಹಾಸದ ಪುಟದಲ್ಲಿ ದಾಖಲಾಗದೆ ಹೋಗುವ ಸಾಧ್ಯತೆಯೇ ಹೆ‍ಚ್ಚು. ಆದರೆ ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿರುವ ಒಂದು ಸತ್ಯ ಇದೆ. ಅದು, ಪ್ರಧಾನಮಂತ್ರಿಯಾಗಿ ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಇಲ್ಲದೇ ಹೋಗಿದ್ದರೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಎರಡು ಅವಧಿಗೆ ಬಿಡಿ, ಮೊದಲನೆಯ ಅವಧಿಯನ್ನೂ ಪೂರ್ಣಗೊಳಿಸುತ್ತಿರಲಿಲ್ಲ ಎಂಬ ಸತ್ಯ.

ADVERTISEMENT

ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅದರ ಮುಂದಿರುವ ಸವಾಲುಗಳಲ್ಲಿ ಮೊದಲನೆಯದು, ಸರ್ಕಾರ ನಡೆಸುವುದು. ಎರಡನೆಯದು, ಪಕ್ಷವನ್ನು ಸಂಭಾಳಿಸುವುದು. ಮೈತ್ರಿ ಸರ್ಕಾರದಲ್ಲಿ ಇದು ಇನ್ನೂ ಹೆಚ್ಚು ಸವಾಲಿನ ಕೆಲಸ. ಈ ಎರಡು ಕೆಲಸಗಳನ್ನು ಮಾಡಲು ಇವರಿಬ್ಬರ ನಡುವೆ ಪರಸ್ಪರ ಒಪ್ಪಿತವಾದ, ಪರಿಪೂರ್ಣವಾದ ಶ್ರಮವಿಭಜನೆಯ ವ್ಯವಸ್ಥೆ ಇತ್ತು. ಸರ್ಕಾರ ನಡೆಸುವ ಕೆಲಸ ಪ್ರಧಾನಿಯವರದ್ದು, ಮೈತ್ರಿಕೂಟವನ್ನು ಸಂಭಾಳಿಸಿಕೊಂಡು ಹೋಗುವುದು ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಅವರದ್ದಾಗಿತ್ತು.

ಆ ಕಾಲದಲ್ಲಿ ಇದ್ದದ್ದು ಈಗಿನ ಸೋನಿಯಾ ಅಲ್ಲ. 2004ರ ಲೋಕಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದೇ ಇದ್ದ ಗೆಲುವು ತಂದುಕೊಟ್ಟ ಸೋನಿಯಾ ಅವರು ಜಗತ್ತಿನ ಆ ಕಾಲದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲೊಬ್ಬರು ಎಂದು ಕೊಂಡಾಡುವ ಮಟ್ಟಿಗೆ ಅವರ ಪ್ರಭಾವಳಿ ಬೆಳೆದಿತ್ತು. ಇದರ ಜೊತೆಗೆ ಮನೆಬಾಗಿಲಿಗೆ ಬಂದಿದ್ದ ಪ್ರಧಾನಿ ಪಟ್ಟವನ್ನು ಬಿಟ್ಟುಕೊಟ್ಟ ಅವರ ಅಪರೂಪದ ನಡವಳಿಕೆ ಕಾಂಗ್ರೆಸ್ ಪಕ್ಷದೊಳಗೆ ಮಾತ್ರವಲ್ಲ ಮಿತ್ರಪಕ್ಷಗಳ ನಡುವೆಯೂ ಅವರಿಗೆ ಗೌರವದ ಸ್ಥಾನವನ್ನು ತಂದುಕೊಟ್ಟಿತ್ತು. ಇಂದಿಗೂ ಬಿಜೆಪಿಯೇತರ ಪಕ್ಷಗಳ ಜೊತೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ಹಾರ್ದಿಕವಾದ ಸಂಬಂಧ ಇದೆ. ನಾಳೆ ಅವರು ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಮಾಯಾವತಿ ಅವರವರೆಗೆ ಯಾರನ್ನೇ ಊಟ- ತಿಂಡಿಗೆ ಕರೆದರೂ ಅವರು ಖಂಡಿತ ಹಾಜರಾಗುತ್ತಾರೆ.

ಸೋನಿಯಾ ಅವರ ಎದುರಿಗೆ ತಮ್ಮ ಪಕ್ಷ ಮತ್ತು ಮಿತ್ರಪಕ್ಷಗಳ ನಾಯಕರ ಭಿನ್ನದನಿಗಳನ್ನು ಸಂಭಾಳಿಸಿಕೊಂಡು ಹೋಗುವ ಕಠಿಣ ಸವಾಲಿತ್ತು. ಸಿಂಗ್ ಅವರು ಕಾಂಗ್ರೆಸ್ ಪಕ್ಷ ಇಲ್ಲವೇ ಮಿತ್ರಪಕ್ಷಗಳ ಸರ್ವಾನುಮತದ ಆಯ್ಕೆಯಾಗಿರಲಿಲ್ಲ. ಪ್ರಧಾನಿ ಪಟ್ಟದ ಆಕಾಂಕ್ಷಿಗಳಾಗಿದ್ದ ಪ್ರಣವ್‌ ಮುಖರ್ಜಿ, ಅರ್ಜುನ್ ಸಿಂಗ್, ನಟವರ್ ಸಿಂಗ್ ಸೇರಿದಂತೆ ಬಹುತೇಕ ಹಿರಿಯ ನಾಯಕರು ಮನಮೋಹನ ಸಿಂಗ್ ಆಯ್ಕೆಯಿಂದ ಅಸಂತುಷ್ಟರಾಗಿದ್ದರು. ಮಿತ್ರಪಕ್ಷಗಳಲ್ಲಿ 61 ಸದಸ್ಯರ ನಿರ್ಣಾಯಕ ಸಂಖ್ಯಾಬಲದ ಎಡಪಕ್ಷಗಳು ಮತ್ತು ಮನಮೋಹನ ಸಿಂಗ್ ನಡುವಿನ ಸೈದ್ಧಾಂತಿಕ ಸಂಘರ್ಷ ಯಾವುದೇ ಕ್ಷಣದಲ್ಲಿ ಸ್ಫೋಟಗೊಳ‍್ಳುವಂತಿತ್ತು. ಸೋನಿಯಾ ಅವರಂತಹ ಒಂದು ರಕ್ಷಣಾ ಕೋಟೆ ಇಲ್ಲದೇ ಹೋಗಿದ್ದರೆ ಸಿಂಗ್ ಮೊದಲ ಆರು ತಿಂಗಳಲ್ಲಿಯೇ ಪ್ರಧಾನಿ ಪಟ್ಟ ತೊರೆದು, ಪಾಠ ಮಾಡಲು ಯಾವುದಾದರೂ ಯೂನಿವರ್ಸಿಟಿ ಹುಡುಕಿಕೊಂಡು ಹೋಗುತ್ತಿದ್ದರು.

ಹಣಕಾಸು ಸಚಿವರಾಗಿ ನೆಹರೂಪ್ರಣೀತ ಸಮಾಜವಾದಿ ಆರ್ಥಿಕ ಚಿಂತನೆಯಿಂದ ಕಾಂಗ್ರೆಸ್ ಪಕ್ಷವನ್ನು ಮಾರುಕಟ್ಟೆ ಆರ್ಥಿಕನೀತಿಯ ಕಡೆಗೆ ಎಳೆದುಕೊಂಡು ಹೋಗುತ್ತಿದ್ದ ಸಿಂಗ್ ಅವರನ್ನು ನಿಯಂತ್ರಣದಲ್ಲಿ ಇಟ್ಟದ್ದು ಕೂಡಾ ಸೋನಿಯಾ ಅವರು. ಇಂದು ಯುಪಿಎ ಸರ್ಕಾರದ ಸಾಧನೆಗಳೆಂದು ಬಿಂಬಿಸಲಾಗುತ್ತಿರುವ ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಮತ್ತು ನರೇಗಾ ಯೋಜನೆಗಳು ಸೋನಿಯಾ ಅಧ್ಯ‍ಕ್ಷರಾಗಿದ್ದ ರಾಷ್ಟ್ರೀಯ ಸಲಹಾ ಮಂಡಳಿಯ ಮೂಸೆಯಿಂದ ರೂಪುಗೊಂಡಂತಹವು. ಆ ಮಂಡಳಿಯ ಅಧ್ಯಕ್ಷೆಯಾಗಿದ್ದ ಸೋನಿಯಾ ಅವರನ್ನು ಟೀಕಿಸುವ ಭರದಲ್ಲಿ ಎಂ.ಎಸ್.ಸ್ವಾಮಿನಾಥನ್, ಹರ್ಷ ಮಂದರ್, ಅರುಣಾ ರಾಯ್, ಜೀನ್ ಡ್ರೀಜ್ ಅವರಂತಹ ಚಿಂತಕರು, ತಜ್ಞರು ಮಂಡಳಿಯ ಸದಸ್ಯರಾಗಿದ್ದದ್ದನ್ನು ಕೂಡಾ ಬಹಳ ಜನ ಮರೆತೇಬಿಟ್ಟಿದ್ದಾರೆ.

ಅಷ್ಟೊತ್ತಿಗೆ ಅನುಭವದಿಂದ ಮಾಗಿದ್ದ ಸಿಂಗ್ ಅವರೊಳಗೆ ತಮ್ಮ ಹೊಸ ಆರ್ಥಿಕ ನೀತಿಯ ತಪ್ಪು-ಒಪ್ಪುಗಳ ವಿಶ್ಲೇಷಣೆ ನಡೆದಿರಬಹುದು. ಮೂಲಭೂತವಾಗಿ ಜನಪರವಾಗಿ ಯೋಚಿಸಬಲ್ಲ ಒಬ್ಬ ಒಳ್ಳೆಯ ಮನುಷ್ಯರಾಗಿದ್ದ ಸಿಂಗ್ ಅವರಲ್ಲಿ, ಸರ್ಕಾರವು ಹೊಸ ಆರ್ಥಿಕ ನೀತಿಯ ಅನೂಕೂಲಗಳಿಂದ ಹೊರಗೆ ಉಳಿದಿರುವ ಜನರನ್ನು ಕೂಡ ತಲುಪಬೇಕೆಂಬ ಅರಿವು ಹುಟ್ಟಿರಬಹುದು. ಸಿಪಿಎಂ ನಾಯಕ ಸೀತಾರಾಮ್ ಯಚೂರಿ ಅಧ್ಯಕ್ಷತೆಯ ಸಮಿತಿಯು ಯುಪಿಎಗಾಗಿ ರಚಿಸಿದ್ದ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ಗಳನ್ನು ಒಪ್ಪಿಕೊಂಡದ್ದು ಮಾತ್ರವಲ್ಲ ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದುದು ಸಿಂಗ್ ಅವರೊಳಗಿನ ಬದಲಾವಣೆಗೆ ಒಂದು ಉದಾಹರಣೆ.

ಇದರ ಅರ್ಥ ಎಡಪಕ್ಷಗಳ ಆರ್ಥಿಕ ಸಿದ್ಧಾಂತವನ್ನು ಅವರು ಒಪ್ಪಿಕೊಂಡಿದ್ದರೆಂದಲ್ಲ, ಯುಪಿಎ ಉಳಿವಿಗೆ ಅವುಗಳ ಬೆಂಬಲದ ಅಗತ್ಯವಿದೆ ಎಂಬ ರಾಜಕೀಯ ವಾಸ್ತವ ಅವರಿಗೆ ಮನವರಿಕೆಯಾಗಿತ್ತು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಖಾಸಗೀಕರಣವನ್ನು ಎಡಪಕ್ಷಗಳು ತೀವ್ರವಾಗಿ ವಿರೋಧಿಸಿದಾಗಲೂ ಮನಮೋಹನ ಸಿಂಗ್ ಜಿದ್ದಿಗೆ ಬೀಳದೆ ಹಿಂದೆ ಸರಿದಿದ್ದರು.

ಆರ್ಥಿಕ ನೀತಿಯ ಈ ಎಡ- ಬಲ ಸಿದ್ಧಾಂತಗಳ ಸಂಘರ್ಷದಿಂದ ಸರ್ಕಾರಕ್ಕೆ ಹಾನಿಯಾಗದಂತೆ ಮಾಡಿದ್ದು ಕೂಡ ಸೋನಿಯಾ ಅವರ ಕೆಲಸವೇ ಆಗಿತ್ತು. ಇವರಿಬ್ಬರ ನಡುವಿನ ಸಂಬಂಧದ ನಿಜವಾದ ಅಗ್ನಿಪರೀಕ್ಷೆ ಎದುರಾಗಿದ್ದದ್ದು ಅಮೆರಿಕದ ಜೊತೆಗಿನ ನಾಗರಿಕ ಪರಮಾಣು ಒಪ್ಪಂದದ ಸಮಯದಲ್ಲಿ. ಎಡಪಕ್ಷಗಳ ಬಹುತೇಕ ಆದೇಶಗಳನ್ನು ಪಾಲಿಸುತ್ತಾ ಬಂದಿದ್ದ ಪ್ರಧಾನಿ ಮನಮೋಹನ ಸಿಂಗ್ ಈ ಒಪ್ಪಂದದ ಬಗ್ಗೆ ಮಾತ್ರ ಹಟಮಾರಿಯಾಗಿ ಬಿಟ್ಟಿದ್ದರು. ಕೋಲ್ಕತ್ತದ ಪತ್ರಿಕೆಯೊಂದರ ಮಹಿಳಾ ವರದಿಗಾರರ ಜೊತೆ ಮಾತನಾಡುತ್ತಾ ‘ನೀವು ಬೆಂಬಲ ವಾಪಸು ಪಡೆಯುವುದಿದ್ದರೆ, ಹಾಗೇ ಮಾಡಿ’ ಎಂದು ಎಡಪಕ್ಷಗಳಿಗೆ ಸವಾಲು ಎಸೆದು ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದರು.

ಮೊದಲನೆಯದಾಗಿ, ನೆಹರೂ ಅವರ ಅಲಿಪ್ತ ನೀತಿಯಿಂದ ದೂರ ಸರಿದು ಅಮೆರಿಕದ ಜೊತೆ ಆ ಮಟ್ಟದ ಮಿತ್ರತ್ವ ಬೆಳೆಸುವುದು ಕಾಂಗ್ರೆಸ್ ಪಕ್ಷದ ಒಪ್ಪಿತ ನೀತಿಗೆ ವಿರುದ್ಧವಾಗಿತ್ತು. ಎರಡನೆಯದಾಗಿ, ಯುಪಿಎ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿಯೂ ಇರದೇ ಇದ್ದ ಪರಮಾಣು ಒಪ್ಪಂದದ ಕಾರಣಕ್ಕೆ ಎಡಪಕ್ಷಗಳನ್ನು ಎದುರು ಹಾಕಿಕೊಂಡು ಸರ್ಕಾರವನ್ನು ಕಳೆದುಕೊಳ್ಳುವುದು ಸೋನಿಯಾ ಅವರನ್ನೂ ಒಳಗೊಂಡಂತೆ ಯುಪಿಎಯಲ್ಲಿ ಯಾರಿಗೂ ಬೇಕಾಗಿರಲಿಲ್ಲ. ಇದರ ಹೊರತಾಗಿಯೂ ಸೋನಿಯಾ ಅವರು ಪ್ರಧಾನಿ ಮನಮೋಹನ ಸಿಂಗ್ ಅವರ ನಿಲುವಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು.

ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸರ್ಕಾರದ ಪತನಕ್ಕೂ ಸಿದ್ಧರಾಗಿದ್ದ ಸಿಂಗ್, 2ಜಿ ಸ್ಪೆಕ್ಟ್ರಮ್ ಪರವಾನಗಿಗೆ ಸಂಬಂಧಿಸಿದಂತೆ ಡಿಎಂಕೆ ಒತ್ತಡಕ್ಕೆ ಯಾಕೆ ಮಣಿದರು ಎನ್ನುವ ಯಕ್ಷಪ್ರಶ್ನೆ ಹಾಗೆಯೇ ಉಳಿದಿದೆ. ಯಾಕೆಂದರೆ ಸೋನಿಯಾ ಅವರಿಗೆ ಡಿಎಂಕೆ ಜೊತೆ ಎಡಪಕ್ಷಗಳಷ್ಟು ಆಪ್ತ ಸಂಬಂಧ ಇರಲಿಲ್ಲ. ಒಂದೊಮ್ಮೆ ಮನಮೋಹನ ಸಿಂಗ್ ಅವರು ಡಿಎಂಕೆ ವಿರುದ್ಧ ತಿರುಗಿಬಿದ್ದಿದ್ದರೂ ಸೋನಿಯಾ ಬೆಂಬಲಿಸುತ್ತಿದ್ದರು. ಹೀಗಿದ್ದರೂ ಸಿಂಗ್ ಯಾಕೆ ತಿರುಗಿಬೀಳಲಿಲ್ಲ? ಕೊನೆಯ ದಿನಗಳಲ್ಲಿ ಅವರನ್ನೂ ಅಧಿಕಾರದ ಮೋಹ ಆವರಿಸಿತ್ತೇ? ಅವರಿಗಷ್ಟೇ ಗೊತ್ತಿದ್ದ ಈ ಸತ್ಯ ಇತಿಹಾಸದ ಪುಟದಲ್ಲಿ ದಾಖಲಾಗಲಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.