
ಜನವರಿ 9ರಂದು ದೇಶದಾದ್ಯಂತ 'ಪ್ರವಾಸಿ ಭಾರತೀಯ ದಿವಸ್' ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಗೆ ಅನಿವಾಸಿ ಭಾರತೀಯರು ನೀಡಿರುವ ಕೊಡುಗೆಗಳನ್ನು ಸ್ಮರಿಸುವ ದಿನ ಇದಾಗಿದೆ.
ದೇಶದಲ್ಲಿ (ಭಾರತ) ಜನಿಸಿ ಉದ್ಯೋಗ ಹುಡುಕಿಕೊಂಡು ಹೋಗಿರುವ ಕೋಟ್ಯಂತರ ಜನರು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹುಟ್ಟೂರು ಬಿಟ್ಟು ಹೋಗಿದ್ದರೂ, ಭಾರತಕ್ಕೆ ಏನಾದರೂ ಸಂಕಷ್ಟ ಎದುರಾದಾಗ ನೆರವಿಗೆ ಧಾವಿಸುತ್ತಾರೆ. ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದೇಶದ ಏಳಿಗೆಗಾಗಿ ಮೀಸಲಿಡುವ ಅನಿವಾಸಿ ಭಾರತೀಯರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಾಗಾಗಿ ಅನಿವಾಸಿ ಭಾರತೀಯರಿಗಾಗಿಯೇ (ಎನ್‌ಆರ್‌ಐ) ಭಾರತ ಸರ್ಕಾರ ‘ಪ್ರವಾಸಿ ಭಾರತೀಯ ದಿವಸ್’ ಎಂದು ವರ್ಷದಲ್ಲಿ ಒಂದು ದಿನವನ್ನು ಮೀಸಲಿಟ್ಟಿದೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ಪ್ರಮುಖ 10 ದೇಶಗಳಿವು
ಉತ್ತಮ ಜೀವನ, ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜನರು ವಿದೇಶಗಳಿಗೆ ವಲಸೆ ಹೋಗುತ್ತಾರೆ. ಸದೃಢ ಆರ್ಥಿಕತೆಯನ್ನು ಹೊಂದಿರುವ ದೇಶಗಳತ್ತ ಭಾರತೀಯರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್ಎ)ದಲ್ಲಿ ಅತಿ ಹೆಚ್ಚು ಭಾರತೀಯರು ನೆಲೆಸಿದ್ದಾರೆ. ಸುಮಾರು 5.4 ಮಿಲಿಯನ್ ಅನಿವಾಸಿ ಭಾರತೀಯರು ಇಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳು, ವಿವಿಧ ವೃತ್ತಿಪರರು ಸೇರಿದ್ದಾರೆ.
ತಂತ್ರಜ್ಞಾನ, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಗಮನಾರ್ಹ. ನ್ಯೂಯಾರ್ಕ್, ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಮತ್ತು ನ್ಯೂಜೆರ್ಸಿಯಂತಹ ನಗರಗಳಲ್ಲಿ ಹೆಚ್ಚಿನ ಭಾರತೀಯರು ನೆಲೆಸಿದ್ದಾರೆ.
ಸುಮಾರು 5.4 ಮಿಲಿಯನ್ ಭಾರತೀಯರೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎರಡನೇ ಸ್ಥಾನದಲ್ಲಿದೆ. ಇವರಲ್ಲಿ ಕಾರ್ಮಿಕರು ಮತ್ತು ಉದ್ಯಮಿಗಳು ಸೇರಿದ್ದಾರೆ.
3ನೇ ಸ್ಥಾನದಲ್ಲಿ ಮಲೇಷ್ಯಾ ಇದೆ. ಸುಮಾರು 2.9 ಮಿಲಿಯನ್ ಅನಿವಾಸಿ ಭಾರತೀಯರು ಇಲ್ಲಿ ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ತಮಿಳು ಮೂಲದವರು.
4ನೇ ಸ್ಥಾನದಲ್ಲಿ ಕೆನಡಾ ಇದೆ. ಸುಮಾರು 2.8ರಿಂದ 2.9 ಮಿಲಿಯನ್ ಭಾರತೀಯರು ಇಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪಂಜಾಬಿ ಸಿಖ್ಖರು.
5ನೇ ಸ್ಥಾನದಲ್ಲಿ ಸೌದಿ ಅರೇಬಿಯಾ ಇದೆ. ಇದು 2.5 ಮಿಲಿಯನ್ ಭಾರತೀಯರಿಗೆ ನೆಲೆಯಾಗಿದೆ,
6ನೇ ಸ್ಥಾನದಲ್ಲಿ ಮ್ಯಾನ್ಮಾರ್ ಇದ್ದು, 2.0 ಮಿಲಿಯನ್ ಭಾರತೀಯ ವಲಸಿಗರಿಗೆ ನೆಲೆಯಾಗಿದೆ.
7, 8 9 ಮತ್ತು 10ನೇ ಸ್ಥಾನದಲ್ಲಿ ಕ್ರಮವಾಗಿ ಯುಕೆ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಕುವೈತ್ ಇವೆ.
1.8 ರಿಂದ1.9 ಮಿಲಿಯನ್ ಅಂದರೆ ಸುಮಾರು 19 ಲಕ್ಷ ಭಾರತೀಯರು ಯುನೈಟೆಡ್ ಕಿಂಗ್‌ಡಮ್ (ಯುಕೆ)ನಲ್ಲಿ ವಾಸಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ 1.7 ಮಿಲಿಯನ್ ಅಂದರೆ 17 ಲಕ್ಷ ಭಾರತೀಯ ಸಮುದಾಯದ ಜನರು ವಾಸಿಸುತ್ತಿದ್ದಾರೆ.
ಶ್ರೀಲಂಕಾದಲ್ಲಿ 1.6 ಮಿಲಿಯನ್ ಅಂದರೆ 16 ಲಕ್ಷ ಭಾರತೀಯರು ಮತ್ತು ಕುವೈತ್‌ನಲ್ಲಿ 1.0 ಮಿಲಿಯನ್ ಅಂದರೆ 10 ಲಕ್ಷ ಭಾರತೀಯರು ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.