ADVERTISEMENT

PV Web Exclusive: ನೆನೆಯುತ್ತ ನೆನೆಯುತ್ತ

ಎಸ್.ರಶ್ಮಿ
Published 15 ಏಪ್ರಿಲ್ 2021, 5:49 IST
Last Updated 15 ಏಪ್ರಿಲ್ 2021, 5:49 IST
ನೆನೆಯುತ್ತ ನೆನೆಯುತ್ತ
ನೆನೆಯುತ್ತ ನೆನೆಯುತ್ತ   

ಕಾದ ಭುವಿಗೆ ಮಳೆಯ ಹನಿ ಬಿದ್ದಾಗ ಏಳುವ ಹೊಗೆಯಂತೆಯೇ ಮನಸು ಸಹ. ಮಳೆಯ ಮೊದಲ ಹನಿ, ಭೂಮಿಯ ತಾಪವನ್ನು ಹರೊಗೆಡಹುವುದಷ್ಟೇ ಅಲ್ಲ, ನೆನಪುಗಳ ಮೆರವಣಿಗೆಯನ್ನೇ ಹೊತ್ತು ತರುತ್ತದೆ. ಹೊರಗೆ ಮಳೆ ನೀರು, ಸಣ್ಣನೆ ಕಣ್ಣೀರ ಒರತೆ, ಒಂದು ಸಿಹಿ, ಇನ್ನೊಂದು ಉಪ್ಪು...

ಇವೊತ್ತು ಹುಬ್ಬಳ್ಳಿಯೊಳಗ ಬಿಸಿಲು ಅದೆಷ್ಟು ಜೋರೆ ಇತ್ತಂದ್ರ, ದೋಸೆ ಹುಯ್ಯುವ ಕಾವಲಿ ಬಳಿ ನಿಂತಾಗ ಬರುವ ಬಿಸಿ ಗಾಳಿ ಬೀಸ್ತಿತ್ತು. ಚರ್ಮ ‘ಚುರ್‌’ ಅಂತ ಸುಡೂದು ಗೊತ್ತಾಗ್ತಿತ್ತು. ಬಣ್ಣಗೆಡಿಸುವಂಥ ಈ ಬಿಸಿಲಿಗೆ ಗಾಳಿನೂ ಸಾಥ್‌ ಕೊಟ್ಟು, ನೆರಳಿಗೆ ಓಡಿ ಹೋದ್ರ ಸಾಕಪ್ಪ ಅಂತನಿಸಿದ್ದು ಸುಳ್ಳಲ್ಲ.

ಆದ್ರ ದಾರಿ ಹಂಗ ಸವಿಯೂದಿಲ್ಲ. ಹೆಬ್ಬಾವಿನ್ಹಂಗ ಸುಮ್ನ ತನ್ನ ಪಾಡಿಗೆ ತಾ ಬಿದ್ದಿರ್ತದ. ಅದೆಷ್ಟು ಬಿಸಿಲು, ಅದೆಂಥ ಬಿಸಿಲು ಇನ್ನೂ ಒಂದೂವರಿ ತಿಂಗಳು ಕಳೀಬೇಕಲ್ಲ ಅಂತನಿಸಿದಾಗ ತುಟಿ ಒಣಗಿ, ಗಂಟಲು ಒಣಗಿ, ತುಟಿ ಮ್ಯಾಲಿನ ಚರ್ಮ ಕಿತ್ತಿ ಬರೂಹಂಗ ಆಗಿತ್ತು.

ADVERTISEMENT

ಈಗೊಂದು ನಾಲ್ಕು ದಿನ ಆಯ್ತು. ಬರೋಬ್ಬರಿ ಏಪ್ರಿಲ್‌ 10ಕ್ಕ ರಿಸಲ್ಟ್‌ ತೊಗೊಂಡು ಮಕ್ಕಳು ಮರುದಿನದಿಂದ ಸಾಲಿಗೆ ಬರೋರಹಂಗ, ಬೆಳಗ್ಗೆ ಮೋಡ. ಮೋಡದ ಅವಧಿ ಸಾಲಿ ಶುರುವಾಗುಮುಂದ ಸೂರ್ಯನ ಪಾಳಿ. ಸಾಲಿ ಬಿಡುವ ಸಮಯದಾಗ ಹೋ ಅಂತ ಗದ್ಲಾ ಹಾಕ್ಕೊಂತ ಬರ್ತಾವಲ್ಲ ಹಂಗೆ.. ಥೇಟ್‌ ಹಂಗೆ. ನಾಲ್ಕರ ಸುಮಾರು ಗುಡುಗು. ಸ್ಕೂಲ್‌ ಬಿಟ್ಟು ಮನೆಗೆ ಹೋಗುವಾಗ ಕಂಗಳಲ್ಲಿರುವ ಮಿಂಚೇ ಇಲ್ಲಿಯೂ...

ಹೋ ಅಂತ ಆಚೆ ಬರುವ ಮಕ್ಕಳಂತೆ ಧೋ ಅಂತ ಸುರಿದು, ಮನೆಗೆ ಹೋದ್ಮೇಲೆ ಸುಮ್ಮನಾಗುವಂತೆ ಮಳೆ ಸುಮ್ಮನಾಗುತ್ತಿದೆ. ಆದರೆ ಭೂಮಿ ಅಷ್ಟು ಹೊತ್ತು ಕಾಯ್ದು, ಕಾಯ್ದು, ತಾಪವನ್ನು ಹೊರಹಾಕುವ ತವಕದಲ್ಲಿರುತ್ತದೆ. ಈ ಸಣ್ಣನೆಯ ಮಳೆ ಮಾತ್ರ ಸ್ನಾನಕ್ಕೆ ಹಾತೊರೆಯುವಾಗ, ಶವರ್‌ನಿಂದ ನಾಲ್ಕಾರು ಹನಿ ಬಿದ್ದು, ಟ್ಯಾಂಕ್‌ ಖಾಲಿಯಾದಂಥ ಅನುಭವ ನೀಡುತ್ತದೆ.

ಮತ್ತೆ ಇಳೆಗೆ ಮುನಿಸು. ಇದ್ದ ಬದ್ದ ಒಳಗುದಿಯನ್ನೆಲ್ಲ ಮಳೆರಾಯನೊಂದಿಗೆ ಹಂಚಿಕೊಳ್ಳುವ ಭರದಲ್ಲಿ ವಾತಾವರಣದಲ್ಲೆಲ್ಲ ಅವರಿಬ್ಬರದ್ದೇ ಮುನಿಸು, ಅವರಿಬ್ಬರದ್ದೇ ಬಿಸುಪು.

ಜಗಳಾಡಿ ಪಾತ್ರೆಗಳೆಸೆದಂತೆ ಮಾವಿನ ಕಾಯಿಗಳನ್ನು ಉದುರಿಸಿದರೆ ಮಾತ್ರ ಸಿಟ್ಟು ತಡೆಯಲಾಗದು. ಆದರೂ ಈ ಮಳೆ ಮಾವಿನ ಗಾತ್ರ ಹೆಚ್ಚಿಸುವ ಮಳೆ. ಏನಾದರೂ ಇರಲಿ... ನಮ್ಮ ಹುಬ್ಬಳ್ಳಿಯೊಳಗ ಮಳಿ ಬಂದ್ರ ರಸ್ತೆ ಮಾತ್ರ ನೋಡಬಾರದು. ಕಾಲಿಡಬಾರದು. ಎಲ್ಲಿ ಯಾವಾಗ ಕುಸೀತೀವಿ ಹೇಳಾಕ ಆಗೂದಿಲ್ಲ.

ಕೊಡಿ ಯಾವತ್ತೂ ಕೈಗಿರಬೇಕು. ಮಳಿನೂ ಹಂಗೆ ಹೇಳದೆ, ಕೇಳದೆ ಬರ್ತದ. ಬಿಸಿಲುನು ಮೈ ಮನಸೆರಡೂ ಸುಡುವಷ್ಟು ಇರ್ತದ.

ಆದ್ರ ಪ್ರತಿ ಮಳಿಯೂ ಒಂದೊಂದು ನೆನಪು ಹೊತ್ತು ಬರ್ತಾವ. ಪ್ರತಿ ಮಳಿಗೂ ಗಾಢವಾದ ಮಣ್ಣಿನ ವಾಸನೆಯಷ್ಟೇ ತೀವ್ರವಾದ ನೆನಪಿನ ಶಕ್ತಿಯನ್ನು ಉದ್ದೀಪನಗೊಳಿಸುವಷ್ಟು ಸಶಕ್ತ ಇರ್ತಾವ. ಮಳಿಜೊತಿಗೆ ಒಂದು ಹಾಡು, ಒಂದು ತಿನಿಸಿನ ಘಮ, ಕರಳು ಮತ್ತು ಹೃದಯಕ್ಕಿರುವ ಸಂಬಂಧವನ್ನು ಬಿಡಿಬಿಡಿಸಿ ಹೇಳ್ತಾವ.

ತಣ್ಣನೆಯ ಗಾಳಿ ಸುಳಿವಾಗ, ಕೆಂಬಣ್ಣದ ಬಳ್ಳೊಳ್ಳಿ ಚುರುಮುರಿ ಬೇಡ್ತದ ಜೀವ. ಜೊತಿಗೊಂದು ಲೋಟ ಚಹಾ. ಇಷ್ಟೇ ಆದ್ರ ಸಾಲೂದಿಲ್ಲ. ಅದರ ಜೊತಿಗೆ ನಮಗ ಬೇಕಾದವರ ಜೊತಿಗೆ ಹರಟಿ ಬೇಕು. ಇಲ್ಲಾಂದ್ರ ನಮ್ಮೊಳಗಿನ ನಮ್ಮ ಜೀವದ ಜೊತಿಗೆ ಮಾತು ಬೇಕು.

ಸಮಝ್‌ ಸಕೆ ತೊ ಆಂಸು, ನ ಸಮಝ್‌ ಸಕೆ ತೊ ಪಾನಿ ಅಂತ ಒಂದು ಸಾಲು ಬರ್ತದ. ಹಂಗ ಇದು ಮಳಿಯಂದ್ರ ಮಳಿ. ಇಲ್ಲಾಂದ್ರ ಭುವಿಯಿಂದ ಸಾಗರಕ್ಕೆ ಇಳಿದು, ಅಲ್ಲಿಂದ ಆವುಗೆಯಾಗಿ, ಮತ್ತೆ ಭೂಮಿಗೆ ಅಪ್ಪಲು ಬರುವ ಧಾವಂತವೋ, ಮೋಡದಿಂದ ಅಗಲುವ ದುಃಖವೋ... ನಮ್ಮ ಮನಃಸ್ಥಿತಿಗೆ ತಕ್ಕಂತೆ ಮಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.