ADVERTISEMENT

ಸೇನಾ- ಕಾಂಗ್ರೆಸ್ ‘ಐತಿಹಾಸಿಕ’ ಮೈತ್ರಿ

ಕಾಂಗ್ರೆಸ್‌ ಈ ಬಾರಿ ಎರಡು ಹುಲಿಗಳ ಮೇಲೆ ಏರಿಕೂತಿದೆ; ಇಳಿಯುವಾಗ ಏನಾಗಲಿದೆಯೋ?

ದಿನೇಶ್ ಅಮಿನ್ ಮಟ್ಟು
Published 30 ನವೆಂಬರ್ 2019, 8:30 IST
Last Updated 30 ನವೆಂಬರ್ 2019, 8:30 IST
   

ಮಹಾರಾಷ್ಟ್ರದಲ್ಲಿ ಇತಿಹಾಸ ಸದ್ದಿಲ್ಲದೆ ಪುನರಾವರ್ತನೆಗೊಂಡಿದೆ. ಅರ್ಧ ಶತಮಾನದ ಹಿಂದೆ ಬಾಳಾ ಠಾಕ್ರೆ ಎಂಬ, ಮರಾಠಿ ಕೂಗುಮಾರಿಗಳ ನಾಯಕನನ್ನು ರಾಜಕೀಯ ನಾಯಕನನ್ನಾಗಿ ಬೆಳೆಸಿದ್ದ ಕಾಂಗ್ರೆಸ್ ಪಕ್ಷವೇ ಈಗ ಅವರ ಮಗ ಉದ್ಧವ್ ಠಾಕ್ರೆ ಏರಿಕೂತಿರುವ ಮುಖ್ಯಮಂತ್ರಿ ಸ್ಥಾನದ ಪಲ್ಲಕ್ಕಿಗೆ ಹೆಗಲು ಕೊಟ್ಟಿದೆ. ನರೇಂದ್ರ ಮೋದಿ ಎಂಬ ವಿದ್ಯಮಾನವು ಜಾತ್ಯತೀತರ ದೃಷ್ಟಿಯನ್ನು ಎಷ್ಟೊಂದು ಕುರುಡುಗೊಳಿಸಿದೆಯೆಂದರೆ, ಮಹಾರಾಷ್ಟ್ರದಲ್ಲಿನ ಮೋದಿ- ಶಾ ಜೋಡಿ ಸೋಲಿನಿಂದಲೇ ಕೋಮುವಾದಿ ರಾಜಕಾರಣದ ಅಂತ್ಯ ಶುರುವಾಯಿತು ಎನ್ನುವ ವ್ಯಾಖ್ಯಾನ ಕೇಳಿಬರತೊಡಗಿದೆ.

ಈ ಸಂಭ್ರಮಾಚರಣೆಯಲ್ಲಿ ಮೈಮರೆತಿರುವವರಿಗೆ ಜಾತ್ಯತೀತರ ಬತ್ತಳಿಕೆಯಲ್ಲಿದ್ದ ಕೋಮುವಾದಿಗಳ ವಿರುದ್ಧದ ಬಾಣಗಳು ಉದುರಿಬಿದ್ದದ್ದು ಅರಿವಿಗೆ ಬಂದಿಲ್ಲ. ‘ಹೇಗಾದರೂ ಮಾಡಿ ದುಡ್ಡು ಮಾಡಬೇಕು’ ಎನ್ನುವುದು ಮುಂಬೈ ಎಂಬ ವಾಣಿಜ್ಯ ನಗರಿಯ ಮೂಲಘೋಷಣೆ. ಅದರ ರಾಜಕೀಯ ಭಾವಾನುವಾದವೇ ‘ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು’ ಎನ್ನುವುದು.

ADVERTISEMENT

ಬಿಜೆಪಿ ಎದುರು ಕಾಂಗ್ರೆಸ್ ಯಾಕೆ ಸೋಲುತ್ತಿದೆ ಎಂಬ ಪ್ರಶ್ನೆಗೆ ಇತ್ತೀಚಿನ ಉತ್ತರ- ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ. ಮೋದಿ ಒಬ್ಬ ವ್ಯಕ್ತಿ ಅಲ್ಲ, ಅವರೊಂದು ಸಿದ್ಧಾಂತ ಎಂಬ ಸರಳ ಸತ್ಯವನ್ನು ತಿಳಿದುಕೊಂಡಿದ್ದರೆ, ಶಿವಸೇನಾ ಮತ್ತು ಎನ್‌ಸಿಪಿಯ ರಾಜಕೀಯ ಇತಿಹಾಸವನ್ನು ಒಂದಿಷ್ಟು ನೆನಪು ಮಾಡಿಕೊಂಡಿದ್ದರೆ, ಒಲ್ಲದ ಮನಸ್ಸಿನ ಸೋನಿಯಾ ಗಾಂಧಿಯವರನ್ನು ಒಪ್ಪಿಸಲು ಕಾಂಗ್ರೆಸ್ ನಾಯಕರು ಖಂಡಿತ ಇಷ್ಟೊಂದು ಒತ್ತಡ ಹೇರುತ್ತಿರಲಿಲ್ಲ.

1966ರಲ್ಲಿಯೇ ಶಿವಸೇನಾವನ್ನು ಬಾಳಾ ಠಾಕ್ರೆ ಅಧಿಕೃತವಾಗಿ ಸ್ಥಾಪಿಸಿದರೂ ಅದೊಂದು ‘ಕಲ್ಲು ಹೊಡೆಯುವವರ’ ಪಕ್ಷವಾಗಿಯೇ ಉಳಿದಿತ್ತು. ಅದು ರಾಜಕೀಯ ಪಕ್ಷವಾಗಿ ನೆಲೆಯೂರಲು ನೆರವಾಗಿದ್ದು ಆಗ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್.ಕೆ.ಪಾಟೀಲ್. 1967ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೃಷ್ಣ ಮೆನನ್ ಅವರನ್ನು ಸೋಲಿಸಲು ಠಾಕ್ರೆ ಅವರನ್ನು ಪಾಟೀಲ್ ಬಳಸಿಕೊಂಡಿದ್ದರು. ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಮುಂಬೈನಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಮೆನನ್ ಅವರಿಗೆ, ಮಹಾರಾಷ್ಟ್ರದವರಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಆ ಚುನಾವಣೆಯಲ್ಲಿ ಗೆಲ್ಲಲು ನೆರವಾಗಬಲ್ಲ ‘ಮಣ್ಣಿನ ಮಕ್ಕಳ’ ಘೋಷಣೆಯನ್ನು ಠಾಕ್ರೆಯವರ ಮೂಲಕ ಕಾಂಗ್ರೆಸ್ ಪ್ರಚಾರ ಮಾಡಿಸಿತ್ತು.

ಮೂಲತಃ ಒಬ್ಬ ಸರ್ವಾಧಿಕಾರಿಯಾಗಿದ್ದ ಮತ್ತು ಹಿಟ್ಲರ್ ತನ್ನ ಆದರ್ಶ ಎಂದು ಹೇಳಿಕೊಳ್ಳುತ್ತಿದ್ದ ಠಾಕ್ರೆಗೆ, ಪ್ರಜಾತಾಂತ್ರಿಕವಾಗಿ ಪಕ್ಷವನ್ನು ಕಟ್ಟಿ ಮುನ್ನಡೆಸುವ ಉದ್ದೇಶವಾಗಲೀ ಶಕ್ತಿಯಾಗಲೀ ಇರಲಿಲ್ಲ. ಬಡವರು ಮತ್ತು ನಿರುದ್ಯೋಗಿಗಳಾಗಿರುವ, ಸ್ವಭಾವತಃ ಸಜ್ಜನರಾಗಿರುವ ಮರಾಠಿಗರನ್ನು ಸಂಘಟಿಸಿ ಸೇನೆ ಕಟ್ಟುವುದು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿತ್ತು. ಒಬ್ಬ ಟಿಪಿಕಲ್ ಸರ್ವಾಧಿಕಾರಿಯಂತೆ ಮರಾಠಿಗರ ಮುಂದೆ ನಿಲ್ಲಿಸಲು ‘ಶತ್ರು’ಗಳಿಗಾಗಿ ಹುಡುಕಾಡುತ್ತಿದ್ದಾಗ ಕೈಗೆ ಸಿಕ್ಕಿದ್ದು ಮಣ್ಣಿನ ಮಕ್ಕಳ ಸಿದ್ಧಾಂತ. ಎದುರಿಗೆ ಕಾಣಿಸಿಕೊಂಡವರು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ ಬಂದಿದ್ದ ‘ಮದ್ರಾಸಿಗರು’. ಕಠಿಣಶ್ರಮ, ವೃತ್ತಿನಿಷ್ಠೆ ಮತ್ತು ಉದ್ಯಮಶೀಲತೆಯ ಗುಣಗಳಿಂದಾಗಿ ಯಶಸ್ಸಿನ ಮೆಟ್ಟಿಲೇರುತ್ತಿದ್ದ ದಕ್ಷಿಣ ಭಾರತೀಯರನ್ನು ಶತ್ರುಗಳಂತೆ ತೋರಿಸಿ ಅಮಾಯಕ ಮರಾಠಿಗರಲ್ಲಿ ದ್ವೇಷ, ಅಸೂಯೆ ಮತ್ತು ಅಭದ್ರತೆಯನ್ನು ಬಡಿದೆಬ್ಬಿಸಿಯೇ ಶಿವಸೇನಾವನ್ನು ಠಾಕ್ರೆ ಬೆಳೆಸಿದರು.

ದಕ್ಷಿಣ ಭಾರತೀಯರನ್ನು ‘ಶತ್ರು’ಗಳೆಂದು ಬಿಂಬಿಸಿದ ಜಾಣ ಠಾಕ್ರೆ, ಮುಂಬೈನ ಇಡೀ ವಾಣಿಜ್ಯಲೋಕವನ್ನು ಮುಷ್ಟಿಯಲ್ಲಿಟ್ಟುಕೊಂಡ ಮತ್ತು ಜನಸಂಖ್ಯೆಯಲ್ಲಿ ಶೇ 19ರಷ್ಟಿರುವ ಗುಜರಾತೀಯರನ್ನು ಮಾತ್ರ ಎಂದೂ ಮುಟ್ಟಲು ಹೋಗಲಿಲ್ಲ.

ಕಾಂಗ್ರೆಸ್ ಪೋಷಣೆ ಅಲ್ಲಿಗೇ ನಿಲ್ಲಲಿಲ್ಲ. ಆ ಕಾಲದಲ್ಲಿ ಮುಂಬೈ ಕಾರ್ಮಿಕ ವಲಯದಲ್ಲಿ ಕಮ್ಯುನಿಸ್ಟರು ಬೇರು ಬಿಟ್ಟಿದ್ದರು. ಇದನ್ನು ಮುರಿಯಲೆಂದೇ ಕಮ್ಯುನಿಸ್ಟ್ ವಿರೋಧಿ ನಿಲುವಿನ ಶಿವಸೇನಾಗೆ ಕಾಂಗ್ರೆಸ್ ಮುಕ್ತ ಮೈದಾನ ನೀಡಿತ್ತು. ಕಮ್ಯುನಿಸ್ಟರ ಸಭೆ- ರ‍್ಯಾಲಿಗಳಲ್ಲಿ ಶಿವಸೇನಾ ಗೂಂಡಾಗಳು ಹಾವಳಿ ನಡೆಸುತ್ತಿದ್ದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕಣ್ಣುಮುಚ್ಚಿ ಕೂತಿತ್ತು. ಈ ಮೂಲಕ ಬಲವೃದ್ಧಿಸಿಕೊಂಡ ಶಿವಸೇನಾ 1968ರಲ್ಲಿ ಮುಂಬೈ ನಗರಪಾಲಿಕೆಯ 42 ಸ್ಥಾನಗಳನ್ನು ಗೆದ್ದು ತನ್ನ ರಾಜಕೀಯ ಕೋಟೆಗೆ ಅಡಿಗಲ್ಲು ಹಾಕಿತ್ತು.

ಮರಾಠಿಗರಲ್ಲಿ ಶಿವಸೇನಾವನ್ನು ಇನ್ನಷ್ಟು ಜನಪ್ರಿಯಗೊಳಿಸಿದ್ದು ಬೆಳಗಾವಿ ಗಡಿ ವಿವಾದ. ಮುಂಬೈನಲ್ಲಿ ಕನ್ನಡಿಗರ ಮೇಲೆ ಶಿವಸೈನಿಕರು ದಾಳಿ ನಡೆಸುತ್ತಿದ್ದಾಗ ಕಾಂಗ್ರೆಸ್ ಮೂಕಪ್ರೇಕ್ಷಕನಾಗಿತ್ತು. ತುರ್ತುಪರಿಸ್ಥಿತಿ ಕಾಲದಲ್ಲಿ ಶಿವಸೇನಾ ತಿರುಗಿಬೀಳತೊಡಗಿದ ಸೂಚನೆ ಸಿಕ್ಕಿದ ಕೂಡಲೇ ಇಂದಿರಾ ಅದನ್ನು ನಿಷೇಧಿಸಲು ಹೊರಟಿದ್ದರು. ತಕ್ಷಣ ಬಣ್ಣ ಬದಲಿಸಿದ ಠಾಕ್ರೆ, ಸಂಜಯ್ ಗಾಂಧಿಗೆ ಬೆಂಬಲ ಘೋಷಿಸಿಬಿಟ್ಟರು (ನೆನಪಿಡಿ ಇಂದಿರಾ ಗಾಂಧಿಗೆ ಅಲ್ಲ).

ಎಂಬತ್ತರ ದಶಕದ ಕೊನೆವರೆಗೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆಯ ರಾಜಕೀಯ ಮಾಡಿಕೊಂಡಿದ್ದ ಠಾಕ್ರೆಗೆ, ಅದರಿಂದ ತನ್ನ ನೆಲೆಯ ವಿಸ್ತರಣೆ ಅಸಾಧ್ಯ ಎಂದು ಅರಿವಾಗತೊಡಗಿತ್ತು. ಆಗಲೇ ಅವರು ‘ಹಿಂದೂ ರಕ್ಷಕ’ನ ಹೊಸವೇಷ ಧರಿಸಿದರು. ‘ಮದ್ರಾಸಿ’ಗರನ್ನು ಶತ್ರು ಸ್ಥಾನದಿಂದ ಕೆಳಗಿಳಿಸಿ, ಅಲ್ಲಿ ಮುಸ್ಲಿಮರನ್ನು ಕೂರಿಸಿದರು. ಶಿವಸೇನಾ ಉಗ್ರ ಹಿಂದುತ್ವದ ರೂಪ ಪಡೆದದ್ದು ಭಿವಂಡಿ ಕೋಮುಗಲಭೆಯ ನಂತರ. ಇದರಿಂದಾಗಿ ದಕ್ಷಿಣ ಭಾರತೀಯರು ಶಿವಸೈನಿಕರ ಪುಂಡಾಟಿಕೆಯಿಂದ ಬಚಾ
ವಾದರೂ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಯ ದೊಡ್ಡ ಪರಂಪರೆಯನ್ನೇ ಹೊಂದಿದ್ದ ಮಹಾರಾಷ್ಟ್ರ ಮತ್ತು ಕಾಸ್ಮೊಪಾಲಿಟನ್ ಗುಣಧರ್ಮದ ಮುಂಬೈ, ಭೀಕರ ಕೋಮುಗಲಭೆಗಳಿಗೆ ಸಾಕ್ಷಿಯಾಗಬೇಕಾಯಿತು. ಬಾಬರಿ ಮಸೀದಿ ಧ್ವಂಸ ನಂತರದ ಕೋಮುಗಲಭೆ
ಯಲ್ಲಿ ಶಿವಸೇನಾದ ಪಾತ್ರವನ್ನು ನ್ಯಾಯಮೂರ್ತಿ ಶ್ರೀಕೃಷ್ಣ ಆಯೋಗದ ವರದಿಯೇ ಬಿಚ್ಚಿಟ್ಟಿದೆ.

ತನ್ನ ಪಕ್ಷದ ಸರ್ಕಾರ ಇಲ್ಲದೇ ಇದ್ದರೂ ತಾನೇ ಸ್ವಯಂ ಸರ್ಕಾರ್ ಆಗಿದ್ದ ಠಾಕ್ರೆ ಮನಸ್ಸು ಮಾಡಿದ್ದರೆ ಮರಾಠಿಗರ ಬದುಕಿನ ಪರಿವರ್ತನೆಯ ಹರಿಕಾರನಾಗಬಹುದಿತ್ತು. ಒಂದಷ್ಟು ಪುಡಿ ರಾಜಕೀಯ ನಾಯಕರನ್ನು ಬೆಳೆಸಿದ್ದು ಬಿಟ್ಟರೆ ಮರಾಠಿಗರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬದುಕಿನಲ್ಲಿ ತಂದ ಬದಲಾವಣೆಯ ಕುರುಹು ಎಲ್ಲಿಯೂ ಕಾಣುವುದಿಲ್ಲ. ಕನಿಷ್ಠ ಶರದ್ ಪವಾರ್‌ಗೆ ಇರುವ ಅಭಿವೃದ್ಧಿಯ ಮುನ್ನೋಟ ಕೂಡಾ ಶಿವಸೇನಾಗೆ ಇಲ್ಲ.

ಇಂತಹ ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಹಿಂದಿನ ಕಾಂಗ್ರೆಸ್ ನಾಯಕರು ಮಾಡಿದ್ದ ತಪ್ಪನ್ನೇ ಈಗಿನ ಕಾಂಗ್ರೆಸ್ ನಾಯಕರು ಸೋನಿಯಾ ಅವರಿಂದ ಮಾಡಿಸಿದ್ದಾರೆ. ಕೋಮುವಾದ ಎನ್ನುವುದು ಹುಲಿ ಸವಾರಿ ಇದ್ದಂತೆ. ಏರುವುದು ಸುಲಭ, ಇಳಿಯುವುದು ಕಷ್ಟ. ಅದೂ ಈ ಬಾರಿ ಕಾಂಗ್ರೆಸ್ ಎರಡು ಹುಲಿಗಳ ಮೇಲೆ ಏರಿಕೂತಿದೆ. ಒಂದು ಶಿವಸೇನಾ, ಇನ್ನೊಂದು ಎನ್‌ಸಿಪಿ. ಅದರಿಂದ, ಇಳಿಯುವ ಕಾಲದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಲಿದೆಯೋ ಗೊತ್ತಿಲ್ಲ.

ಶಿವಸೇನಾಗೆ ಪರಿವರ್ತನೆಗೊಳ್ಳಲು ಒಂದು ಅವಕಾಶ ಇದೆ. ಇದಕ್ಕಾಗಿ ಉದ್ಧವ್ ಠಾಕ್ರೆ, ಅಪ್ಪನ ಹಾದಿಯನ್ನು ತೊರೆದು ಅಜ್ಜ ಮತ್ತು ಮುತ್ತಜ್ಜಿಯ ಹಾದಿ ಹಿಡಿಯಬೇಕು. ಕೊಂಕಣ ಪ್ರದೇಶದ ಸಮಾಜ ಸುಧಾರಕರ ಕುಟುಂಬದಿಂದ ಮುಂಬೈಗೆ ವಲಸೆ ಬಂದಿದ್ದ ಠಾಕ್ರೆಯ ಅಜ್ಜಿ ಕುಟುಂಬದವರು, ಮಾಟುಂಗಾ, ಮಾಹಿಮ್, ವರ್ಲಿಗಳಲ್ಲಿ ಮುಂಬೈನ ಮೂಲನಿವಾಸಿಗಳಾದ ಕೋಲಿ ಹಾಗೂ ಕ್ರಿಶ್ಚಿಯನ್- ಮುಸ್ಲಿಮರ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರಂತೆ.

ಪ್ರಭೋದಂಕರ್ ಠಾಕ್ರೆ ಎಂಬ ಕಾವ್ಯನಾಮದಿಂದಲೇ ಜನಪ್ರಿಯರಾಗಿದ್ದ ಬಾಳಾ ಠಾಕ್ರೆಯವರ ಅಪ್ಪ ಕೇಶವ ಸೀತಾರಾಮ್ ಠಾಕ್ರೆ ಮೂಲತಃ ಒಬ್ಬ ಸಾಹಿತಿ ಮತ್ತು ಸಮಾಜ ಸುಧಾರಕ. ಅವರ ಕಾಲದ ಬ್ರಾಹ್ಮಣ ವಿರೋಧಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಪ್ರಭೋದಂಕರ್, ಅಸ್ಪೃಶ್ಯತೆ, ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಹಿಂದೂ ಧರ್ಮದ ಕಂದಾಚಾರಗಳ ವಿರುದ್ಧ ಹೋರಾಡಿದವರು. ಉದ್ಧವ್ ಏನಾದರೂ ಬಾಳಾ ಠಾಕ್ರೆ ನಡುಹಾದಿಯಲ್ಲಿ ಧರಿಸಿಕೊಂಡ ಹಿಂದುತ್ವದ ಗಣವೇಷವನ್ನು ಕಳಚಿಟ್ಟು, ಅಜ್ಜ ಕಳಚಿಟ್ಟು ಹೋಗಿರುವ ಹಿಂದೂ ಸಮಾಜ ಸುಧಾರಕನ ದಿರಿಸು ಧರಿಸಿದರೆ, ಮಹಾರಾಷ್ಟ್ರದ ರಾಜಕೀಯವು ದೇಶದ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಬಹುದು. ಸದ್ಯಕ್ಕೆ ಇದೊಂದು ದುಬಾರಿ ಕನಸು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.