ADVERTISEMENT

PV Web Exclusive| ಜಲೀಲನ ಡೈಲಾಗ್‌ V/S ಪೇಟೆ ರೌಡಿ

ಸುದೇಶ ದೊಡ್ಡಪಾಳ್ಯ
Published 20 ನವೆಂಬರ್ 2020, 3:03 IST
Last Updated 20 ನವೆಂಬರ್ 2020, 3:03 IST
ಸಂಸದರಾದ ಸುಮಲತಾ ಮತ್ತು ಪ್ರತಾಪ್‌ ಸಿಂಹ
ಸಂಸದರಾದ ಸುಮಲತಾ ಮತ್ತು ಪ್ರತಾಪ್‌ ಸಿಂಹ    

ಮಾತು ಮಾಣಿಕ್ಯ, ಮುತ್ತು ಎನ್ನುತ್ತಾರೆ. ಆದರೆ, ನಮ್ಮ ರಾಜಕಾರಣಿಗಳಿಗೆ ಅವುಗಳ ಕಿಮ್ಮತ್ತೇ ಗೊತ್ತಿಲ್ಲವೇನೋ ಎನ್ನುವಂತೆ ಮಾತನಾಡುತ್ತಾರೆ. ಇಲ್ಲಿ ಮಾತಿನ ಕಿಮ್ಮತ್ತು ಕುರಿತು ಪ್ರಸ್ತಾಪ ಮಾಡಲು ಕಾರಣವಿದೆ.

ಮೈಸೂರು–ಕೊಡಗು ಸಂಸದ ಪ್ರತಾಪ ಸಿಂಹ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್‌ ಕುರಿತು ಆಡಿದ ಮಾತು ಈಗ ವಿವಾದಕ್ಕೆ ತಿರುಗಿದೆ. ಇತ್ತೀಚಿಗೆ ಪ್ರತಾಪ ಸಿಂಹ ಮಂಡ್ಯ ಸಮೀಪದ ಯಲಿಯೂರು ಬಳಿ ಅಧಿಕಾರಿಯೊಬ್ಬರಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ‘ಆಯಮ್ಮ ಏನೂ ಕೆಲಸ ಮಾಡಲ್ಲ. ದೇವೇಗೌಡರ ಕುಟುಂಬದ ವಿರುದ್ಧದ ಸಿಟ್ಟಿನಿಂದ ಗೆದ್ದಿದ್ದಾರೆ. ಮಂಡ್ಯದ ಕೆಲಸ ಏನೇ ಇದ್ದರೂ ನನಗೇ ಹೇಳಿ‘ ಎಂದು ತಾಕೀತು ಮಾಡಿದರು. ಇದನ್ನು ಯಾರೋ ವಿಡಿಯೊ ಮಾಡಿ ಸೋಷಿಯಲ್‌ ಮೀಡಿಯಾಕ್ಕೆ ಹಾಕಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಆನಂತರ ಶುರುವಾಯ್ತು ‘ಮಾತಿನ ಯುದ್ಧ’. ಇದಕ್ಕೆ ಸುಮಲತಾ ಅಂಬರೀಶ್‌ ಪ್ರತಿಕ್ರಿಯೆ ಹೀಗಿತ್ತು: ‘ಪ್ರತಾಪ ಸಿಂಹ ಪೇಟೆ ರೌಡಿ ರೀತಿ ಮಾತನಾಡಿದ್ದಾರೆ. ಇದು ನಾನು ಪ್ರತಿಕ್ರಿಯಿಸುವಂತಹ ವಿಷಯವಲ್ಲ. ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಹಕ್ಕು ಅವರಿಗೇನಿದೆ’ ಎಂದು ಕಾರವಾಗಿಯೇ ಕೇಳಿದರು. ವಾಕ್ಸಮರ ಇಲ್ಲಿಗೇ ನಿಲ್ಲಲಿಲ್ಲ. ತಮ್ಮನ್ನು ‘ಪೇಟೆ ರೌಡಿ’ ಎಂದು ಕರೆದಿದ್ದಕ್ಕೆ ರೇಗಿ ಹೋದ ಪ್ರತಾಪ ಸಿಂಹ, ‘ಸುಮಲತಾ ಬಣ್ಣದ ಲೋಕದಿಂದ ಬಂದವರು. ನಾಗರಹಾವು ಸಿನಿಮಾದ ಜಲೀನನ ಡೈಲಾಗ್‌ ಹೊಡೆದಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ‘ ಎಂದು ತಿರುಗೇಟು ನೀಡಿದರು.

ಪ್ರತಾಪ ಸಿಂಹ ಮತ್ತೊಬ್ಬ ಸಂಸದೆ ಕುರಿತು ಹಗುರವಾಗಿ ಮಾತನಾಡಿದ್ದು ಖಂಡಿತ ಒಪ್ಪುವಂತಹದಲ್ಲ. ಕನಿಷ್ಠ ತಿಳಿವಳಿಕೆ ಇರುವ ಯಾರೂ ಕೂಡ ಒಪ್ಪುವುದಿಲ್ಲ. ಪ್ರತಾಪ ಸಿಂಹ ಮಾಧ್ಯಮಗಳ ಜೊತೆ ಮಾತನಾಡುತ್ತಾ, ’ಮೈಸೂರು, ಮಂಡ್ಯ, ರಾಮನಗರದವರಿಗೆ ಅನುಕೂಲವಾಗಲಿ ಎಂದೇ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯನ್ನು ನಿರ್ಮಿಸಲಾಗುತ್ತಿದೆ. ಕಾಲಮಿತಿಯೊಳಗೆ ಮುಗಿಸುವ ಉದ್ದೇಶವಿದೆ. ಯಲಿಯೂರು ಬಳಿ ಜನರು ಕಾರು ತಡೆದು ಅಂಡರ್‌ಪಾಸ್‌ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ನಾನು ಅವರ ಮನವಿಗೆ ಸ್ಪಂದಿಸಿದೆ‘ ಎಂದು ಸ್ಪಷ್ಟನೆ ನೀಡಿದ್ದಾರೆ. ನಿಜವಾಗಿಯೂ ಪ್ರತಾಪಸಿಂಹ ಅವರ ಮಾತು ಅವರು ನೀಡಿದ ಸ್ಪಷ್ಟನೆ ರೀತಿಯಲ್ಲೇ ಇದ್ದರೆ ವಿವಾದವೇ ಆಗುತ್ತಿರಲಿಲ್ಲ.

ಅವರ ಕಾಳಜಿ ಒಳ್ಳೆಯದೆ. ಆದರೆ, ಅವರ ಮಾತು ಮಾತ್ರ ಕಾಳಜಿಗೆ ತಕ್ಕಂತೆ ಇರಲಿಲ್ಲ ಎನ್ನುವುದು ವಿಡಿಯೊ ನೋಡಿದ ಯಾರಿಗಾದರೂ ಅನಿಸುತ್ತದೆ. ಎಚ್‌.ಡಿ.ದೇವೇಗೌಡರ ಕುಟುಂಬದ ಮೇಲಿನ ಸಿಟ್ಟಿನಿಂದ ಸುಮಲತಾ ಅಂಬರೀಶ್‌ ಅವರನ್ನು ಜನ ಗೆಲ್ಲಿಸಿದ್ದಾರೆ ಎಂದು ಪ್ರತಾಪ ಸಿಂಹ ಹೇಳುತ್ತಾರೆ. ಹೌದು ನಿಜ. ಇವರೂ ಕೂಡ ದೇವೇಗೌಡರ ಕುಟುಂಬದ ಪರೋಕ್ಷ ಬೆಂಬಲದ ಕಾಣಿಕೆಯಿಂದಲೇ ಗೆದ್ದಿದ್ದು ಎನ್ನುವುದೂ ಕೂಡ ಬಹಿರಂಗ ಸತ್ಯ. ಪ್ರತಾಪ ಸಿಂಹ ಅವರನ್ನು ಟೀಕಿಸುವ ಭರದಲ್ಲಿ ಸುಮಲತಾ ಅವರು ‘ಪೇಟೆ ರೌಡಿ’ ಎಂದು ಜರಿದಿದ್ದು ತರವಲ್ಲ. ಒಬ್ಬರು ಮಾತನಾಡಿದ ಧಾಟಿಯಲ್ಲೇ ಇನ್ನೊಬ್ಬರು ಮಾತನಾಡುವುದೂ ಪ್ರಬುದ್ಧ ವ್ಯಕ್ತಿತ್ವದ ಲಕ್ಷಣವಲ್ಲ.

ಸಾರ್ವಜನಿಕ ಜೀವನದಲ್ಲಿ ಇರುವ ಪ್ರತಿಯೊಬ್ಬರೂ ತಾವು ಆಡುವ ಮಾತಿನ ಬಗ್ಗೆ ಎಚ್ಚರದಿಂದ ಇರಬೇಕು ಎನ್ನುವುದು ಪ್ರತಾಪ ಸಿಂಹ ಹಾಗೂ ಸುಮಲತಾ ಅಂಬರೀಶ್‌ ಅವರಿಗೆ ತಿಳಿಯದ ವಿಷಯವೇನಲ್ಲ. ಇವರ ಹೇಳಿಕೆ–ಪ್ರತಿ ಹೇಳಿಕೆಯಿಂದ ಪ್ರಚೋದನೆಗೊಂಡ ಅಭಿಮಾನಿಗಳು, ಕಾರ್ಯಕರ್ತರು ಸೋಷಿಯಲ್‌ ಮೀಡಿಯಾದಲ್ಲಿ ಬಳಸುತ್ತಿರುವ ಭಾಷೆ ನಿಜಕ್ಕೂ ತಲೆತಗ್ಗಿಸುವಂತಿದೆ.

ಹೌದು, ಹೆದ್ದಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯಬೇಕು. ಸ್ಥಳೀಯರಿಗೆ ತೊಂದರೆ ಆಗಬಾರದು ಎನ್ನುವ ಕಾಳಜಿ ಇರುವ ಪ್ರತಾಪ ಸಿಂಹ ಅವರು ಪಕ್ಕದ ಜಿಲ್ಲೆ ಸಂಸದೆ ಸುಮಲತಾ ಅವರೊಂದಿಗೆ ಕುಳಿತ ಇಲ್ಲವೇ ಮೊಬೈಲ್‌ ಮೂಲಕವೇ ಮಾತನಾಡಬಹುದಿತ್ತು. ಸುಮಲತಾ ಅವರ ಗೆಲುವಿನಲ್ಲಿ ಬಿಜೆಪಿಯ ಪಾಲೂ ಇದೆ ಅಲ್ಲವೇ. ಸುಮಲತಾ ಕೆಲಸ ಮಾಡದಿದ್ದರೆ ಅಲ್ಲಿನ ಮತದಾರರು ಮುಂದಿನ ಚುನಾವಣೆಯಲ್ಲಿ ಏನು ತೀರ್ಪು ಕೊಡಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ.

ಪ್ರತಾಪ ಸಿಂಹ ಅವರು ಭರದಲ್ಲಿ ಆಡಿದ ಮಾತು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಹೇಳಿದ್ದು, ಮಾತು ಮಾಣಿಕ್ಯ, ಮುತ್ತು ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.