ADVERTISEMENT

ವಿಶ್ಲೇಷಣೆ | ಹಸಿರು ಇಂಧನ: ಮುಟ್ಟಲಿ ಜನಮನ

ನವೀಕರಿಸಬಹುದಾದ ಇಂಧನಗಳ ಉತ್ಪಾದನೆ, ವಿತರಣೆಯ ಹೊಣೆ ಸರ್ಕಾರದ್ದಾಗಲಿ

ಟಿ.ಎಸ್.ವೇಣುಗೋಪಾಲ್
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
   

ಇಂದು ವಾತಾವರಣ ಬಹಳಷ್ಟು ಕಲುಷಿತವಾಗಿದೆ. ಪರಿಸರದಲ್ಲಿ ಇಂಗಾಲದ ಅನಿಲದ ಪ್ರಮಾಣ ವಿಪರೀತವಾಗಿದೆ. ಇದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ ಪರಿಣಾಮ ತೀವ್ರವಾಗಿರುತ್ತದೆ ಅನ್ನುವುದಂತೂ ನಿಜ. ಅದನ್ನು ತಪ್ಪಿಸಲು, ಈಗ ಹೊರಹಾಕುತ್ತಿರುವ ಇಂಗಾಲದ ಪ್ರಮಾಣವನ್ನು ಇಳಿಸುತ್ತಾ ಅಂತಿಮವಾಗಿ ಶೂನ್ಯಕ್ಕೆ ತರಬೇಕು ಅನ್ನುವುದು ಎಲ್ಲರ ಕಾಳಜಿಯಾಗಿದೆ. ಅದು ಸಾಧ್ಯವಾಗಬೇಕಾದರೆ ಪಳೆಯುಳಿಕೆ ಇಂಧನದ ಬಳಕೆಯನ್ನು ಸಾಧ್ಯವಾದಷ್ಟೂ ಕೈಬಿಡಬೇಕು. ಈ ಬಗ್ಗೆ ಹಲವು ವೇದಿಕೆಗಳಲ್ಲಿ ಚರ್ಚೆಗಳು ನಡೆದಿವೆ. ಯೋಜನೆಗಳು ತಯಾರಾಗಿವೆ. ಗಂಭೀರ ಪ್ರಯತ್ನಗಳೂ ನಡೆಯುತ್ತಿವೆ.  

ನಾವು ಪಳೆಯುಳಿಕೆ ಇಂಧನವನ್ನು, ವಿಶೇಷವಾಗಿ ಕಲ್ಲಿದ್ದಲು ಹಾಗೂ ನೈಸರ್ಗಿಕ ಅನಿಲವನ್ನು ಬಹುತೇಕ ಉರಿಸುತ್ತಿರುವುದು ವಿದ್ಯುತ್‌ ಉತ್ಪಾದಿಸಲು. ಅದಕ್ಕಿರುವ ಪರ್ಯಾಯ ಮಾರ್ಗವೆಂದರೆ ಸೌರಶಕ್ತಿ ಹಾಗೂ ಪವನಶಕ್ತಿಯನ್ನು ಬಳಸುವುದು. ಇದು ತುಂಬಾ ದುಬಾರಿಯಾದ ದಾರಿಯಾಗಿತ್ತು. ಪಳೆಯುಳಿಕೆ ಇಂಧನದಿಂದ ಉತ್ಪಾದನೆ ಆಗುವ ವಿದ್ಯುತ್‌ಗೆ ಹೋಲಿಸಿದರೆ ಸೌರಶಕ್ತಿ ಹಾಗೂ ಪವನ ಶಕ್ತಿಯನ್ನು ಬಳಸಿ ಉತ್ಪಾದಿಸುವ ವಿದ್ಯುತ್‌ನ ಬೆಲೆ ಹಲವು ಪಟ್ಟು ಹೆಚ್ಚಿತ್ತು. ಇದನ್ನು ಆರ್ಥಿಕವಾಗಿ ಲಾಭದಾಯಕ ವನ್ನಾಗಿ ಮಾಡುವುದು ಆದ್ಯತೆಯ ಸಂಗತಿಯಾಗಿತ್ತು. ಅದರಿಂದಾಗಿಯೇ ಇಂಧನದ ಪ್ರಶ್ನೆಯನ್ನು ಅರ್ಥಶಾಸ್ತ್ರಜ್ಞರು ಬೆಲೆಯ ಸಮಸ್ಯೆಯಾಗಿ ನೋಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳ ಉತ್ಪಾದನಾ ವೆಚ್ಚ ತುಂಬಾ ಕಡಿಮೆಯಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಈ ಹಸಿರು ಕೈಗಾರಿಕೆ ದೊಡ್ಡದಾಗಿ ಬೆಳೆದಿದೆ. ಪಳೆಯುಳಿಕೆ ಇಂಧನ ಬಳಸಿ ಉತ್ಪಾದಿಸುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಇಂದು ವಿದ್ಯುತ್ ಉತ್ಪಾದಿಸುವುದಕ್ಕೆ ಸಾಧ್ಯವಾಗಿದೆ. ಈ ಪ್ರವೃತ್ತಿ ಉಕ್ರೇನ್ ಯುದ್ಧಕ್ಕೆ ಮೊದಲೇ ಅಂದರೆ ಪೆಟ್ರೋಲ್ ಬೆಲೆ ಏರುವ ಮೊದಲೇ ಪ್ರಾರಂಭವಾಗಿತ್ತು.

ಬೆಲೆಯೇ ನಿಜವಾದ ಸಮಸ್ಯೆಯಾಗಿದ್ದರೆ ಬೆಲೆ ಇಳಿದ ಕೂಡಲೇ ಜಗತ್ತು ಪಳೆಯುಳಿಕೆ ಇಂಧನವನ್ನು ಬಿಟ್ಟು ಪರ್ಯಾಯ ಕ್ರಮಗಳಿಗೆ ಆತುಕೊಳ್ಳಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಪಳೆಯುಳಿಕೆ ಇಂಧನದ ಬಳಕೆ ಕಡಿಮೆ ಆಗುತ್ತಿಲ್ಲ. ಬದಲಿಗೆ ಅದರ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನಗಳೇ ಹೆಚ್ಚುತ್ತಿವೆ. ಅಂತಹ ಉದ್ದಿಮೆ ಗಳಿಗೆ ಬಂಡವಾಳದ ಮಹಾಪೂರವೇ ಹರಿದುಬರುತ್ತಿದೆ. ಹಾಗಾಗಿ, ಬೆಲೆಯೇ ನಿಜವಾದ ಕಾರಣವೆಂದು ಭಾವಿಸಲಾಗದು. ರಾಜಕಾರಣಿಗಳ ಇಚ್ಛಾಶಕ್ತಿಯ ಸಮಸ್ಯೆ ಇದ್ದರೂ ಅದೇ ಕಾರಣ ಎನ್ನುವುದೂ ಕಷ್ಟ.

ADVERTISEMENT

ಬ್ರೆಟ್ ಕ್ರಿಸ್ಟೊಫರ್‍ಸ್‌ ತಮ್ಮ ಇತ್ತೀಚಿನ ‘ದಿ ಪ್ರೈಸ್ ಈಸ್ ರಾಂಗ್...’ ಪುಸ್ತಕದಲ್ಲಿ ಈ ಪ್ರಶ್ನೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಂಕಿಅಂಶಗಳನ್ನು ಕಲೆಹಾಕಿದ್ದಾರೆ. ನವೀಕರಿಸಬಹುದಾದ ಇಂಧನದ ಬೆಲೆ ವಿಪರೀತ ಇದ್ದುದು ವಾಸ್ತವ. ಪರಿಹಾರವಾಗಿ ಸರ್ಕಾರ ಪರ್ಯಾಯ ಇಂಧನದ ಉತ್ಪಾದನೆಗೆ ಪ್ರೋತ್ಸಾಹ ನೀಡಿತು. ಸಬ್ಸಿಡಿ ನೀಡಿತು. ಈ ಬಗೆಯ ಉತ್ತೇಜನಗಳಿಂದ ಖಾಸಗಿಯವರಿಗೆ ಇಂತಹ ಉದ್ದಿಮೆಗಳಲ್ಲಿ ಬಂಡವಾಳ ಹೂಡಲು ವಿಶ್ವಾಸ ಮೂಡಿತು. ಈ ಪ್ರಕ್ರಿಯೆಯಲ್ಲಿ ತಂತ್ರಜ್ಞಾನ ಬೆಳೆದು ಉತ್ಪಾದನಾ ವೆಚ್ಚ ಗಣನೀಯವಾಗಿ ಇಳಿಯಿತು. ಆದರೂ ಪಳೆಯುಳಿಕೆ ಇಂಧನದ ಪ್ರಭಾವ ತಗ್ಗಿಸಲು ಬೇಕಾದಷ್ಟು ಪ್ರಮಾಣದಲ್ಲಿ ಅವು ಬೆಳೆಯಲಿಲ್ಲ.

ಕ್ರಿಸ್ಟೊಫರ‍್ಸ್ ಗಮನಿಸಿರುವಂತೆ, ಖಾಸಗಿ ಸಂಸ್ಥೆಗಳು ಉತ್ಪನ್ನದ ಬೆಲೆಯನ್ನು ನೋಡಿ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಲಾಭವನ್ನು ಗಮನಿಸುತ್ತವೆ. ನವೀಕರಿಸಬಹು ದಾದ ಇಂಧನಕ್ಕೆ ಹೋಲಿಸಿದರೆ ಪೆಟ್ರೋಲ್ ಮೂಲದ ಇಂಧನಗಳಿಂದ ಬರುವ ಲಾಭ ಹಲವು ಪಟ್ಟು ಹೆಚ್ಚು. ಪೆಟ್ರೋಲ್ ಉತ್ಪನ್ನಗಳಿಂದ ಶೇಕಡ 15ರಿಂದ 20ರಷ್ಟು ಲಾಭ ಬಂದರೆ, ನವೀಕರಿಸಬಹುದಾದ ಇಂಧನದಿಂದ ಸಿಗುವುದು ಹೆಚ್ಚೆಂದರೆ ಶೇಕಡ 5ರಿಂದ 6ರಷ್ಟು. ಈ ಕೊರತೆಯನ್ನು ಸರ್ಕಾರದ ಸಬ್ಸಿಡಿ ಮತ್ತಿತರ ನೆರವು ತುಂಬಿಕೊಡುತ್ತಿತ್ತು. ನಿರೀಕ್ಷಿತ ಪ್ರಮಾಣದ ಲಾಭದ ಖಾತರಿ ಇದ್ದುದರಿಂದ ಖಾಸಗಿಯವರು ಉತ್ಸಾಹದಿಂದಲೇ ಬಂಡವಾಳ ಹೂಡಿದರು. ಪರ್ಯಾಯ ಇಂಧನದ ಬೆಲೆ ಕಡಿಮೆಯಾಯಿತು.

ಸರ್ಕಾರಗಳು ಪರ್ಯಾಯ ಇಂಧನಕ್ಕೆ ಅಡ್ಡಿಯಾಗಿದ್ದ ಆರ್ಥಿಕ ಸಮಸ್ಯೆ ಪರಿಹಾರವಾಯಿತು ಎಂದು ಭಾವಿಸಿ ದವು. ಸಬ್ಸಿಡಿಯನ್ನು ಕ್ರಮೇಣ ಹಿಂತೆಗೆದುಕೊಳ್ಳಲಾರಂಭಿ ಸಿದವು. ಇದರಿಂದ ಉದ್ದಿಮೆದಾರರ ಲಾಭದ ಪ್ರಮಾಣ ಕಡಿಮೆಯಾಯಿತು. ಅವರ ಉತ್ಸಾಹವೂ ಕಡಿಮೆಯಾಗ ತೊಡಗಿತು. ಪಳೆಯುಳಿಕೆ ಇಂಧನದಲ್ಲಿ ಸಿಗುವಷ್ಟೇ ಲಾಭ ಇಲ್ಲಿಯೂ ದೊರಕಿದರಷ್ಟೇ ಅವರು ಹೂಡಿಕೆ ಮಾಡುತ್ತಾರೆ. ಮಾಲಿನ್ಯದಂತಹವೆಲ್ಲಾ ಅವರ ಕಾಳಜಿಯ ವಿಷಯಗಳಲ್ಲ. ಅದಕ್ಕಾಗಿಯೇ ಆ ಉದ್ದಿಮೆಗಳು ನೆರವನ್ನು ಮುಂದುವರಿಸಲು ಸರ್ಕಾರಗಳನ್ನು ಒತ್ತಾಯಿಸುತ್ತಿವೆ. ನೆರವು ನಿಂತೊಡನೆ ಖಾಸಗಿ ಹೂಡಿಕೆಯೂ ನಿಲ್ಲುತ್ತದೆ ಅನ್ನುವುದು ಸ್ಪಷ್ಟ.

ವಿದ್ಯುತ್‌ನ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಉತ್ಪಾದನೆಯೂ ಹೆಚ್ಚಬೇಕು. ಪರ್ಯಾಯ ಇಂಧನದ ಉತ್ಪಾದನೆಗೆ ಈಗ ವರ್ಷಕ್ಕೆ ಹೂಡಿಕೆಯಾಗುತ್ತಿರುವ ಹಣದ ಪ್ರಮಾಣ ಹೆಚ್ಚಬೇಕು. ಲಾಭವೇ ಕೇಂದ್ರವಾಗಿರುವ ಖಾಸಗಿಯವರಿಂದ ಅದನ್ನು ನಿರೀಕ್ಷಿಸುವುದಕ್ಕೆ ಕಷ್ಟವಾಗುತ್ತದೆ. ಎಕ್ಸಾನ್, ಚೆವರಾನ್ ಅಂತಹ ಕಂಪನಿಗಳು ಪಳೆಯುಳಿಕೆ ಇಂಧನಕ್ಕಾಗಿ ನೆಲ ಅಗೆಯುತ್ತಿವೆ. ತಮ್ಮ ಉತ್ಪಾದನೆಯ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೆ ಬೇರೆ ಬೇರೆ ಕಂಪನಿಗಳನ್ನು ಕೊಳ್ಳುತ್ತಿವೆ.

ಲೀಥಿಯಂನಿಂದ ವಿದ್ಯುತ್‌ ಉತ್ಪಾದಿಸುವುದರಿಂದ ಲಾಭ ಹೆಚ್ಚು ಅನ್ನುವ ಕಾರಣಕ್ಕೆ ಕೆಲವು ಕಂಪನಿಗಳು ಅದರ ಉತ್ಪಾದನೆಗೆ ಕೈಹಾಕಿವೆ. ಅವರಿಗಿರುವುದು ತೈಲದ ಮೇಲಿನ ವ್ಯಾಮೋಹ ಅನ್ನುವುದಕ್ಕಿಂತ ಹಣದ ಮೇಲಿನ ಪ್ರೀತಿ. ಪಳೆಯುಳಿಕೆ ಇಂಧನದಿಂದ ಬರುವ ಲಾಭದ ರುಚಿ ಕಂಡ ಅವರು, ಪರ್ಯಾಯ ಇಂಧನದ ಪರವಾದ ನೀತಿಗಳು ಜಾರಿಯಾಗದಂತೆ ನೋಡಿ ಕೊಳ್ಳುತ್ತಾರೆ. ಹಾಗಾಗಿಯೇ ಪಳೆಯುಳಿಕೆ ಇಂಧನದ ವಿರುದ್ಧದ ನಿರ್ಣಯಗಳು, ನೀತಿಗಳು ಪರಿಣಾಮಕಾರಿ ಯಾಗಿ ಕೃತಿಗೆ ಇಳಿಯುವುದಿಲ್ಲ. ಇದನ್ನು ಬಹುತೇಕ ದೇಶಗಳ ಚರಿತ್ರೆ ಹೇಳುತ್ತದೆ. ಶೃಂಗಸಭೆಗಳಲ್ಲೂ ಇವರದ್ದೇ ಪ್ರಭಾವವನ್ನು ಕಾಣುತ್ತೇವೆ. ಹವಾಮಾನಕ್ಕೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಗಳಿಗೆ ಹಣಕಾಸು ನೀಡುವವರೂ ಇವರೆ. ಈ ಸಂಸ್ಥೆಗಳಿಂದ ಹೊರಬರುತ್ತಿರುವ ಬಹುತೇಕ ಸಂಶೋಧನಾ ಪ್ರಬಂಧಗಳು ಪರ್ಯಾಯ ಇಂಧನಗಳ ನ್ಯೂನತೆಯನ್ನು ಹುಡುಕುವುದರಲ್ಲೇ ನಿರತವಾಗಿವೆ.

ಮಾರುಕಟ್ಟೆಯಲ್ಲಿ ಮಾರಾಟವಾಗುವ ಉಳಿದ ಸರಕುಗಳಿಗಿಂತ ವಿದ್ಯುತ್‌ ತುಂಬಾ ಭಿನ್ನ. ಅದು ಎಲ್ಲರಿಗೂ ಅನಿವಾರ್ಯ. ಅದನ್ನು ಉತ್ಪಾದಿಸುವುದಕ್ಕೆ ದೊಡ್ಡ ಪ್ರಮಾಣದ ಮೂಲ ಸೌಕರ್ಯ ಬೇಕು. ಅದನ್ನು ಶೇಖರಿಸಿಡುವುದು ಕಷ್ಟ. ಅದು ಕೂಡ ಭೂಮಿ, ಶ್ರಮ, ನೀರಿನಂತೆ ಮಾರಾಟಕ್ಕೆಂದು ತಯಾರಾದ ಸರಕಲ್ಲ. ಆಧುನಿಕ ಆರ್ಥಿಕತೆ ಅದನ್ನು ಕೃತಕವಾಗಿ ಸರಕನ್ನಾಗಿಸಿದೆ. ಮಾರುಕಟ್ಟೆಗೆ ತನ್ನಷ್ಟಕ್ಕೆ ನ್ಯಾಯಯುತವಾಗಿ ಅದರ ಬೆಲೆ ನಿರ್ಧರಿಸುವುದಕ್ಕೆ ಅಥವಾ ವಿತರಿಸುವುದಕ್ಕೆ ಸಾಧ್ಯವಿಲ್ಲ. ಸರ್ಕಾರದ ಮಧ್ಯಪ್ರವೇಶ ಅವಶ್ಯ. ಸರ್ಕಾರ ಇದನ್ನೊಂದು ಸಾರ್ವಜನಿಕ ವಸ್ತುವನ್ನಾಗಿಯೇ ನೋಡಬೇಕು. ಅದರ ಉತ್ಪಾದನೆ, ವಿತರಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕ್ರಿಸ್ಟೊಫರ‍್ಸ್ ವಾದಿಸುತ್ತಾರೆ.

ಜನರಿಗೆ ಅನುಕೂಲಕರವಾಗುವಂತೆ ವಿದ್ಯುತ್‌ನ ಬಳಕೆಯಾಗಬೇಕಾದರೆ ಅದಕ್ಕೂ ನಿಯಮಗಳು, ನಿಯಂತ್ರಣಗಳು ಹಾಗೂ ಸಬ್ಸಿಡಿಗಳು ಬೇಕಾಗುತ್ತವೆ. ಇತ್ತೀಚಿನವರೆಗೂ ಸರ್ಕಾರಗಳೇ ವಿದ್ಯುತ್ತನ್ನು ಉತ್ಪಾದಿಸಿ, ವಿತರಿಸುತ್ತಿದ್ದವು. ಉದಾರವಾದಿ ಆರ್ಥಿಕ ನೀತಿಯಿಂದಾಗಿ ಅದು ಕ್ರಮೇಣ ಖಾಸಗಿಯವರ ಕೈಸೇರುತ್ತಿದೆ. ಅದರ ಉತ್ಪಾದನೆ, ವಿತರಣೆ ಹಾಗೂ ಬಳಕೆ ಎಲ್ಲವೂ ವಾಣಿಜ್ಯೀಕರಣಗೊಂಡಿವೆ. ಹಾಗಾಗಿಯೇ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಇಳಿಸುವುದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಮತ್ತೆ ನೇರವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಪ್ರೋತ್ಸಾಹ ನೀಡುತ್ತಾ ನೇಪಥ್ಯದಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಸಬ್ಸಿಡಿ ಕೊಡುವುದನ್ನಾಗಲಿ, ಖಾಸಗಿಯವರ ಲಾಭದ ಪ್ರಮಾಣವನ್ನು ರಕ್ಷಿಸುವುದನ್ನಾಗಲಿ ನಿರಂತರವಾಗಿ ಮಾಡಲು ಸಾಧ್ಯವಾಗುವುದಿಲ್ಲ.

ಸರ್ಕಾರವೇ ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಹಾಗೂ ವಿತರಣೆಯ ಜವಾಬ್ದಾರಿಯನ್ನು ಹೊರಬೇಕು. ಖಾಸಗಿಯವರಿಗೆ ಹವಾಮಾನವನ್ನು ಕಾಪಾಡಿಕೊಳ್ಳುವುದು ಆದ್ಯತೆಯ ವಿಷಯವಲ್ಲ. ಅದು ಅವರ ಕಾಳಜಿಯ ವಿಷಯವೂ ಅಲ್ಲ. ಸರ್ಕಾರ ಈ ವಾಸ್ತವ ವನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲದೇಹೋದರೆ ಹಸಿರು ಇಂಧನದ ಕನಸು ನನಸಾಗದೇ ಉಳಿಯಬಹುದು ಎನ್ನುತ್ತಾರೆ ಕ್ರಿಸ್ಟೊಫರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.