ADVERTISEMENT

ವಿಶ್ಲೇಷಣೆ: ಶೂನ್ಯ ಉತ್ಸರ್ಜನೆ: ಭಾರತಕ್ಕೆ ಸವಾಲು

ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯ ನಿಯಂತ್ರಣಕ್ಕೆ ಈಗಿನಿಂದಲೇ ಕಾರ್ಯತಂತ್ರ ರೂಪಿಸಬೇಕಿದೆ

ಟಿ.ಆರ್.ಅನಂತರಾಮು
Published 7 ಮೇ 2021, 19:59 IST
Last Updated 7 ಮೇ 2021, 19:59 IST
   

ಜಗತ್ತು ಭೂದಿನ ಆಚರಿಸುತ್ತಿದ್ದ ಅದೇ ದಿನ (ಏ. 22) ಅಮೆರಿಕದ ಅಧ್ಯಕ್ಷ ಜೋ ಬೈಡನ್, ವಾಷಿಂಗ್ಟನ್‌ನಲ್ಲಿ 40 ರಾಷ್ಟ್ರಗಳ ಜಾಲಗೋಷ್ಠಿ ಏರ್ಪಡಿಸಿದ್ದರು. ಒಂದರ್ಥದಲ್ಲಿ ಇದು ಕೂಡ ತುರ್ತೇ. ಇದರಲ್ಲಿ ಭಾರತದ ಪ್ರಧಾನಿಯೂ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿತ್ತು. ಇದು ಶೂನ್ಯ ಉತ್ಸರ್ಜನೆ ಕುರಿತ ಗೋಷ್ಠಿ. ಶೂನ್ಯ ಉತ್ಸರ್ಜನೆ ಎಂದರೆ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯನ್ನು ಏಕಾಏಕಿ ‘ಸೊನ್ನೆ’ ಹಂತಕ್ಕೆ ತರುವುದಲ್ಲ. ವಾಯುಗೋಳಕ್ಕೆ ಇದರ ಜಮೆ ಆಗುತ್ತಲೇ ಇರುತ್ತದೆ, ಆದರೆ ಅಷ್ಟೇ ಪ್ರಮಾಣದ ಉತ್ಸರ್ಜನೆಯನ್ನು ಹೀರಿಕೊಳ್ಳುವ ತಂತ್ರಜ್ಞಾನ ಅಳವಡಿಸುವುದು; ಅಂದರೆ ಹೊಸ ಹೊರೆ ಶೂನ್ಯ. ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಬದ್ಧತೆಯನ್ನು ಬಾಯಿಬಿಟ್ಟು ಹೇಳಲೆಂದೇ ಯೋಜಿಸಿದ ಜಾಲಗೋಷ್ಠಿ.

ಇದರಲ್ಲಿ ಎರಡು ಬೆಳವಣಿಗೆಗಳನ್ನು ಗಮನಿಸಬಹುದು. ಒಂದು, 2015ರ ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕ ಬದ್ಧವಲ್ಲವೆಂದು ಹೊರನಡೆದು ಜಗತ್ತಿಗೆ ಡೊನಾಲ್ಡ್‌ ಟ್ರಂಪ್ ಅಸಮಾಧಾನದ ಕಿಡಿ ಹೊತ್ತಿಸಿದ್ದರು. ಪ್ಯಾರಿಸ್ ಒಪ್ಪಂದದ ಪ್ರಕಾರ, ಕೈಗಾರಿಕಾ ಯುಗಕ್ಕಿಂತ ಮೊದಲು ವಾಯುಗೋಳದಲ್ಲಿದ್ದ ಉಷ್ಣತೆಯ ಮಟ್ಟಕ್ಕೆ ಈಗಿನ ಉಷ್ಣತೆಯನ್ನು ತರುವುದು. ಅಮೆರಿಕದ ಪ್ರತೀ ಪ್ರಜೆಯ ತಲಾವಾರು ವಾರ್ಷಿಕ ಕಾರ್ಬನ್ ಡೈ ಆಕ್ಸೈಡ್ ಹೊರೆ ಇಪ್ಪತ್ತು ಟನ್ನುಗಳಷ್ಟು ಎಂಬ ಕರಾಳ ಸತ್ಯ ಗೊತ್ತಿದ್ದರೂ ಟ್ರಂಪ್ ಅಹಂಕಾರದ ಮಾತನ್ನಾಡಿದ್ದರು. ಈಗಿನ ಅಧ್ಯಕ್ಷ ಬೈಡನ್, ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕ ಬದ್ಧವೆಂದು ಜಗತ್ತಿಗೆ ಸಾರಲೇಬೇಕಾಗಿತ್ತು. 2030ರ ಹೊತ್ತಿಗೆ ಅಮೆರಿಕ ಈಗಿನ ಉತ್ಸರ್ಜನೆಯ ಶೇ 52ರಷ್ಟು ಭಾಗವನ್ನು ಕಡಿಮೆಗೊಳಿಸುತ್ತದೆ, 2050ರ ಹೊತ್ತಿಗೆ ಶೂನ್ಯ ಉತ್ಸರ್ಜನೆಗೆ ಬದ್ಧ ಎಂದು ಬೈಡನ್ ಘೋಷಿಸಿದಾಗ, ಉಳಿದ 39 ರಾಷ್ಟ್ರಗಳಿಗೆ ಇದು ಪೀಠಿಕೆಯಾಯಿತು.

ಎರಡನೆಯ ಸಂಗತಿ, ಬದ್ಧತೆಯಿಂದ ಸದಾ ನುಣುಚಿಕೊಳ್ಳುತ್ತಿದ್ದ ಚೀನಾ ಈ ಬಾರಿ ಚೌಕಾಸಿಗೆ ಇಳಿದು, ತಮ್ಮ ದೇಶಕ್ಕೆ 2060ರವರೆಗೆ ಅವಕಾಶ ಕೊಡಿ ಎಂದು ಗೋಗರೆಯಿತು. ಜಗತ್ತಿನ ಎರಡನೇ ಅತಿ ಮಾಲಿನ್ಯಕಾರಕ ದೇಶ ಚೀನಾ ಈ ಹಿಂದೆ ಇಂಥ ಬದ್ಧತೆಯನ್ನು ಪ್ರದರ್ಶಿಸಿಯೇ ಇರಲಿಲ್ಲ. ಕಲ್ಲಿದ್ದಲು ಬಳಸುವ ರಾಷ್ಟ್ರಗಳಲ್ಲಿ ಚೀನಾ ಈಗಲೂ ಮೊದಲ ಸ್ಥಾನದಲ್ಲಿದೆ. ಇಲ್ಲಿ ಭಾಗವಹಿಸಿದ್ದ ಭಾರತ, ಜರ್ಮನಿ, ಫ್ರಾನ್ಸ್, ಜಪಾನ್, ರಷ್ಯಾ, ಚೀನಾ ಒಂದೊಂದೂ ತಮ್ಮ ಗುರಿ ಕುರಿತು ಸ್ಪಷ್ಟ ವಿಚಾರಗಳನ್ನು ಮುಂದಿಟ್ಟವು. ಶೂನ್ಯ ಉತ್ಸರ್ಜನೆಯಲ್ಲಿ ಯುರೋಪು ಇತರ ದೇಶಗಳಿಗೆ ಮಾರ್ಗದರ್ಶಿಯಾಗಲಿದೆ ಎಂದು ಯುರೋಪಿಯನ್ ಕಮಿಷನ್ ಪ್ರತಿನಿಧಿ ವಿಶ್ವಾಸದಿಂದಲೇ ಹೇಳಿದರು. ಬಡ ರಾಷ್ಟ್ರಗಳಿಗೆ ಮಾಲಿನ್ಯ ನಿವಾರಕ ಯಂತ್ರೋಪಕರಣಗಳನ್ನು ಕೊಡುವುದಕ್ಕೆ ಆದ್ಯತೆ ನೀಡಿ ಎಂದು ರಷ್ಯಾವು ಗೋಷ್ಠಿಯ ಗುರಿಯನ್ನು ಇನ್ನೊಂದೆಡೆಗೆ ಸೆಳೆಯಿತು. ಎಲ್ಲ ದೇಶಗಳ ಒಕ್ಕೊರಲಿನ ನಿರ್ಧಾರ- 2030ರ ಹೊತ್ತಿಗೆ ಅರ್ಧ ದಾರಿ ಕ್ರಮಿಸುವುದು. 2050ರ ಹೊತ್ತಿಗೆ ಎದೆತಟ್ಟಿ ‘ನಮ್ಮದು ಶೂನ್ಯ ಉತ್ಸರ್ಜನೆಯ ದೇಶ’ ಎಂದು ಹೇಳುವುದು ಆಗಿತ್ತು.

ADVERTISEMENT

ಭಾರತ ಎರಡು ವಿಚಾರಗಳಲ್ಲಿ ಜಾಣತನ ತೋರಿಸಿತು. 2030ರ ಹೊತ್ತಿಗೆ ನಮ್ಮ ಶಕ್ತಿ ಬೇಡಿಕೆಯ ಶೇ 40ರಷ್ಟು ಮೂಲವು ನವೀಕರಿಸಬಹುದಾದ ಇಂಧನದಿಂದ ಬರುತ್ತದೆ ಎಂಬ ಬದ್ಧತೆಯನ್ನು ತೋರಿಸಿತು. ಹೀಗೆ ತೋರುವಾಗ ಮೆರೆದ ಜಾಣ್ಮೆ ಎಂದರೆ, ಜಾಗತಿಕವಾಗಿ ಕಾರ್ಬನ್ ಡೈ ಆಕ್ಸೈಡ್‍ನ ಹೊರೆ ಇತರ ದೇಶಗಳಿಗೆ ಹೋಲಿಸಿದರೆ ನಮ್ಮದು ತೀರಾ ಕಡಿಮೆ. ವಾರ್ಷಿಕ ತಲಾವಾರು ಎರಡು ಟನ್ನು ಅಷ್ಟೇ. 135 ಕೋಟಿ ಜನರ ಲೆಕ್ಕದಲ್ಲಿ ಇದು ನಗಣ್ಯ ಎನ್ನುವಂತೆ ಬಿಂಬಿಸಿತು. ಆದರೆ ಭೂಮಿಯ ಪರಿಸ್ಥಿತಿ ಲೆಕ್ಕ ಹಾಕಿದರೆ, ಭಾರತದಿಂದಲೇ 270 ಕೋಟಿ ಟನ್ನು ವಾರ್ಷಿಕ ಉತ್ಸರ್ಜನೆ ಎಂದರೆ ಅದು ವಾಯುಗೋಳಕ್ಕೆ ಭಾರ ಅಲ್ಲವೇ? ಇದೇ ಸಂದರ್ಭದಲ್ಲಿ ಅಮೆರಿಕದೊಂದಿಗೆ ಶುದ್ಧ ಶಕ್ತಿಗಾಗಿ ಮಾಡಿಕೊಂಡ ಒಪ್ಪಂದ ಭಾರತದ ಮಟ್ಟಿಗೆ ಒಂದು ದೊಡ್ಡ ಹೆಜ್ಜೆ ಎನ್ನಬಹುದು. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಿದೆ. 2030ರ ಹೊತ್ತಿಗೆ, ನವೀಕರಿಸಬಹುದಾದ ಶಕ್ತಿ ಮೂಲದಿಂದ 450 ಗಿಗಾವಾಟ್‌ ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ.

ಈ ಸಂದರ್ಭದಲ್ಲಿ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆಗಳು ಬೇರೆಯವೇ ಇವೆ. ಇಡೀ ಭಾರತದಲ್ಲಿ ಶೇ 70ರಷ್ಟು ಶಕ್ತಿ ಸದ್ಯದಲ್ಲಿ ಪೂರೈಕೆಯಾಗುತ್ತಿರುವುದು ಉಷ್ಣಸ್ಥಾವರಗಳಿಂದಲೇ. ಕಲ್ಲಿದ್ದಲು ಬಳಕೆ ಇಲ್ಲಿ ಅನಿವಾರ್ಯ. ಭಾರತದಲ್ಲಿ ಇನ್ನೂ ನೂರು ವರ್ಷ ಬಳಸುವಷ್ಟು ಕಲ್ಲಿದ್ದಲು ಸಂಪನ್ಮೂಲವಿದೆ ಎಂದು ಕಲ್ಲಿದ್ದಲು ಸಚಿವಾಲಯವೇ ಖಾತರಿಪಡಿಸಿದೆ- ಅಂದರೆ 3.20 ಲಕ್ಷ ಕೋಟಿ ಟನ್ನು ಕಲ್ಲಿದ್ದಲು. ಇಷ್ಟು ಸಂಪನ್ಮೂಲವನ್ನು ಭಾರತ ಕಡೆಗಣಿಸುವುದೇ? ವಿಷಾದವೆಂದರೆ, ಹೆಚ್ಚಿನ ಪಾಲು ಕಲ್ಲಿದ್ದಲು ಕಳಪೆ ದರ್ಜೆಯದು, ಅಂದರೆ ಪ್ರಬಲ ಮಾಲಿನ್ಯಕಾರಕ. ಹಂತಹಂತವಾಗಿಯಾದರೂ ನಮ್ಮಲ್ಲಿ ಉಷ್ಣಸ್ಥಾವರಗಳ ಅವಲಂಬನೆಯನ್ನು ಕಡಿಮೆ ಮಾಡುವ ಮಾತು ಯಾವ ಗೋಷ್ಠಿಗಳಲ್ಲೂ ಪ್ರಸ್ತಾಪಕ್ಕೆ ಬಂದಿಲ್ಲ. ಹೆಚ್ಚಿನ ಪಾಲು ಉಷ್ಣಸ್ಥಾವರಗಳು ತಮ್ಮಲ್ಲಿ ಆಯುಷ್ಯದ ಕೊನೆಯ ಹಂತದಲ್ಲಿವೆ, ಅಂದರೆ ಉತ್ಸರ್ಜನೆಯೂ ಹೆಚ್ಚು. ಇಲ್ಲಿ ಇನ್ನೊಂದು ಸತ್ಯವಿದೆ. ಪೆಟ್ರೋಲಿಯಂ ಉತ್ಪನ್ನ ಮತ್ತು ಉತ್ಪಾದನಾ ಸಂಸ್ಥೆಗಳ ಮೇಲೆ ಹಾಕುವ ತೆರಿಗೆಯಿಂದಾಗಿ ಭಾರತಕ್ಕೆ ವಾರ್ಷಿಕ ₹ 3.80 ಲಕ್ಷ ಕೋಟಿ ಆದಾಯ ಬರುತ್ತಿದೆ. ಇದನ್ನು ಭಾರತ ಲಘುವಾಗಿ ಪರಿಗಣಿಸಲು ಆದೀತೆ?

ಹಿಮಾಲಯ ಶ್ರೇಣಿಯ ನದಿಗಳನ್ನುಳಿದರೆ ಹೆಚ್ಚು ಕಡಿಮೆ ಜಲವಿದ್ಯುತ್ ಯೋಜನೆಗಳ ಗರಿಷ್ಠ ಬಳಕೆ ನಮ್ಮಲ್ಲಾಗಿದೆ. ಆದರೆ ಇದೇ ಫೆಬ್ರುವರಿ ತಿಂಗಳಲ್ಲಿ ನಂದಾದೇವಿ ಪರ್ವತದಿಂದ ಹಿಮನದಿಯ ತುಂಡೊಂದು ಕಿತ್ತುಬಂದು ಋಷಿಗಂಗಾ-ತಪೋವನದ ಭಾಗದಲ್ಲಿ ಜಲವಿದ್ಯುತ್ ಯೋಜನೆಗಳನ್ನೇ ನಾಶಪಡಿಸಿದಾಗ, ಇಡೀ ಗಂಗಾನದಿಯ ಪಾತ್ರದುದ್ದಕ್ಕೂ ಯೋಜಿಸಿದ್ದ ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಯಿತು. ರಾಷ್ಟ್ರದ ಒಟ್ಟು ಶಕ್ತಿಯ ಉತ್ಪಾದನೆಯಲ್ಲಿ ಸದ್ಯ 22 ಪರಮಾಣು ಸ್ಥಾವರಗಳಿಂದ ಪಡೆಯುತ್ತಿರುವ ವಿದ್ಯುತ್ 4,300 ಮೆಗಾವಾಟ್‍ಗಳಷ್ಟು. ಅಂದರೆ ಈ ಮೂಲದ ಕೊಡುಗೆ ಶೇ 5 ಅಷ್ಟೇ. ಫುಕುಶಿಮಾ ದುರಂತದ ನಂತರವೂ ಭಾರತ ತಲೆಕೆಡಿಸಿಕೊಂಡಿಲ್ಲ. ಇನ್ನೂ ಏಳು ಪರಮಾಣು ಸ್ಥಾವರಗಳ ನಿರ್ಮಾಣದಲ್ಲಿ ತೊಡಗಿದೆ. 2030ರ ಹೊತ್ತಿಗೆ ಭಾರತ ತನ್ನ ಆಂತರಿಕ ಬಳಕೆಗೆ ಬೇಕಾದ ಶೇ 25ರಷ್ಟು ವಿದ್ಯುತ್ ಶಕ್ತಿಯನ್ನು ಈ ಮೂಲದಿಂದಲೇ ಪಡೆಯುವ ಗುರಿ ಇಟ್ಟುಕೊಂಡಿರುವುದು ಕಳವಳಕಾರಿ.

ಸೌರಶಕ್ತಿಗೆ ಸಿಕ್ಕಷ್ಟು ಪ್ರಾಶಸ್ತ್ಯವು ಗಾಳಿಯಿಂದ ಪಡೆಯುವ ವಿದ್ಯುತ್ ಶಕ್ತಿಗೆ ಸಿಕ್ಕುತ್ತಿಲ್ಲ. ಆದರೂ ಈ ಮೂಲದಿಂದ ಶೇ 10ರಷ್ಟು ಶಕ್ತಿ ಪೂರೈಕೆಯಾಗುತ್ತಿದೆ. ಆದರೆ ಇದು ಅನಿಶ್ಚಿತ. ಗಾಳಿಯ ದಿಕ್ಕು ಮತ್ತು ವೇಗ ಬದಲಾದರೆ ವಿದ್ಯುತ್ ಉತ್ಪಾದನೆಯಲ್ಲಿ ಏರಿಳಿತ ತಲೆದೋರುತ್ತದೆ. ಹಾಗೆಯೇ 2031ರ ಹೊತ್ತಿಗೆ ಭಾರತ ಸರ್ಕಾರ ವಿದ್ಯುತ್ ವಾಹನಗಳ ಉತ್ಪಾದನೆಗೆ 31,000 ಕೋಟಿ ರೂಪಾಯಿ ತೊಡಗಿಸುವುದಾಗಿ ಇತ್ತೀಚೆಗೆ ನಿರ್ಣಯವೊಂದನ್ನು ಕೈಗೊಂಡಿದೆ. ಜೊತೆಗೆ ಇದರಿಂದಾಗಿ 55,000 ಮಂದಿಗೆ ಉದ್ಯೋಗ ದೊರೆಯುವುದಾಗಿಯೂ ಹೇಳಿದೆ. ಆದರೆ ಈ ಕುರಿತು ಸ್ಪಷ್ಟ ಚಿತ್ರಣಗಳಿಲ್ಲ. ಖಾಸಗಿ ಸಂಸ್ಥೆಗಳಿಗೆ ಈ ದಿಸೆಯಲ್ಲಿ ಯಾವ ಪ್ರಮಾಣದ ಅನುದಾನ ಸಿಗುತ್ತದೆ ಎಂಬುದರ ಬಗ್ಗೆಯೂ ಗೋಜಲುಗಳಿವೆ. ಇದರ ಜೊತೆಗೆ ವಿದ್ಯುತ್ತಿನ ಮೂಲ ಯಾವುದು ಎಂಬ ಪ್ರಶ್ನೆಯೂ ಅಷ್ಟೇ ಗಂಭೀರವಾದುದು.

ಭಾರತ ಈಗಿನಿಂದಲೇ ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯ ನಿಯಂತ್ರಣಕ್ಕೆ ಕಾರ್ಯತಂತ್ರ ರೂಪಿಸಬೇಕಾಗಿದೆ. ಶೂನ್ಯ ಉತ್ಸರ್ಜನೆಗೆ ಇದೇ ಆರಂಭಿಕ ಹೆಜ್ಜೆಯಾಗಬೇಕು.

ಟಿ.ಆರ್.ಅನಂತರಾಮು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.